ಸೆಂಟ್ರಲ್ ಮಾರುಕಟ್ಟೆ ಕಾಮಗಾರಿ ಶೇ. 80 ಪೂರ್ಣ; ಮೇಯರ್ ಮನೋಜ್ ಕುಮಾರ್ ಪರಿಶೀಲನೆ

ಮಂಗಳೂರು: ಐದು ಮಹಡಿಗಳ ಬಹು ನಿರೀಕ್ಷಿತ ಕಟ್ಟಡ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನ ಕಾಮಗಾರಿ ಶೇ. 80ರಷ್ಟು ಪೂರ್ಣಗೊಂಡಿದ್ದು, ಶುಕ್ರವಾರ ಮೇಯರ್ ಮನೋಜ್ ಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ಸೆಂಟ್ರಲ್ ಮಾರ್ಕೆಟ್ ಪಿಪಿಪಿ (ಸಾರ್ವಜನಿಕ, ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ನಿರ್ಮಾಣಕ್ಕೆ 2026ರ ಏಪ್ರಿಲ್‌ಗೆ ಗಡುವು ಇದ್ದರೂ ಒಂದು ವರ್ಷ ಮೊದಲೇ ಪೂರ್ಣಗೊಳ್ಳಲಿದೆ. 2025ರ ಎಪ್ರಿಲ್‌ಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಮೇಯರ್ ಮನೋಜ್ ಕುಮಾರ್ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಹಳೆ ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನು 2021ರಲ್ಲಿ ಕೆಡವಿ ಅಲ್ಲಿಯೇ ಹೊಸ ಮಾರುಕಟ್ಟೆಯನ್ನು ಒಟ್ಟು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅದರಲ್ಲಿ 5 ಲಕ್ಷ ಚದರ ಅಡಿ ವಿಸ್ತೀರ್ಣ ಗುತ್ತಿಗೆದಾರರಿಗೆ ಹಾಗೂ ಒಂದೂವರೆ ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಪಾಲಿಕೆಗೆ ನೀಡಲಾಗಿದೆ. 30 ವರ್ಷಗಳ ಕಾಲ ಲೀಸ್‌ಗೆ ಗುತ್ತಿಗೆದಾರರರೇ ಕಟ್ಟಡದ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಮೇಯರ್ ಮನೋಜ್ ಕುಮಾರ್ ತಿಳಿಸಿದರು.
ಕೆಳ ಅಂತಸ್ತಿನಲ್ಲಿ 86 ಒಣ ಮೀನು ಹಾಗೂ 188 ಹಸಿ ಮೀನು ಶಾಪ್, 11 ಚಿಕನ್ ಸ್ಟಾಲ್, 24 ಮಾಂಸದ ಅಂಗಡಿ, 3 ಮೊಟ್ಟೆಯ ಅಂಗಡಿ ಸೇರಿ ಒಟ್ಟು 121 ಶಾಪ್‌ಗಳು, ಮಾಂಸಾಹಾರಿ ಕ್ಯಾಂಟಿನ್ ಇರಲಿದೆ. ತಳ ಅಂತಸ್ತಿನಲ್ಲಿ 106 ತರಕಾರಿ ಅಂಗಡಿಗಳು ಇರಲಿದ್ದು, ಮೇಲಂತಸ್ತಿನಲ್ಲಿ 132 ಹಣ್ಣುಹಂಪಲು ಸ್ಟಾಲ್ ಇರಲಿದೆ. ಇದರ ಹೊರಾಂಗಣದ ಸುತ್ತ 114 ದ್ವಿಚಕ್ರ ವಾಹನ ಪಾರ್ಕಿಂಗ್ ಸೌಲಭ್ಯ ಇರಲಿದೆ. ಪ್ರಥಮ ಮಹಡಿಯಲ್ಲಿ ಗುತ್ತಿಗೆದಾರರ 63 ಶಾಪ್ ಇರಲಿದ್ದು, 142 ಸ್ಟಾಲ್‌ಗಳು ಇರಲಿವೆ. ಎರಡು ಮತ್ತು ಮೂರನೇ ಮಹಡಿಯಲ್ಲಿ 85 ಶಾಪ್, ನಾಲ್ಕು ಮತ್ತು ಐದನೇ ಮಹಡಿಯಲ್ಲಿ ಕಾರು ಪಾರ್ಕಿಂಗ್‌ಗೆ ಮೀಸಲಿರಿಸಲಾಗಿದೆ ಎಂದವರು ತಿಳಿಸಿದರು.
ಉಪ ಮೇಯರ್ ಭಾನುಮತಿ, ಮಾಜಿ ಮೇಯರ್ ದಿವಾಕರ್, ಪಾಲಿಕೆ ಸದಸ್ಯರಾದ ಪೂರ್ಣಿಮಾ, ವೀಣಾಮಂಗಳಾ, ಸ್ಮಾರ್ಟ್‌ಸಿಟಿ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.







