ಭಟ್ಕಳ: ಫೆ.9ರಿಂದ ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ
ಯುವ ಬರಹಗಾರ ಸ್ವಾಲಿಹ್ ತೋಡಾರ್‌ಗೆ ಸುನ್ನಿ ಸಾಹಿತ್ಯ ಪ್ರಶಸ್ತಿ ಪ್ರದಾನ

ಭಟ್ಕಳ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ವತಿಯಿಂದ ಪ್ರತಿ ವರ್ಷವೂ ನಡೆಸಿಕೊಂಡು ಬರುತ್ತಿರುವ ಸಾಹಿತ್ಯೋತ್ಸವದ ರಾಜ್ಯ ಮಟ್ಟದ ಸ್ಪರ್ಧೆ ಫೆ. 9, 10, 11ರಂದು ಭಟ್ಕಳದ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಸೆಸ್ಸೆಫ್ ರಾಜ್ಯಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ, ಪ್ರತಿಭಾವಂತ ಮಕ್ಕಳನ್ನು ಸಮಾಜಕ್ಕೆ ಪರಿಚಯಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿಯನ್ನು ತುಂಬಲು ಎಸ್ಸೆಸ್ಸೆಫ್ ಯುನಿಟ್, ಸೆಕ್ಟರ್, ಡಿವಿಷನ್ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಈಗಾಗಲೇ ಯಶಸ್ವಿಯಾಗಿ ನಡೆಸಿದೆ. ಅದರಲ್ಲಿ ಪ್ರಥಮ ಸ್ಥಾನ ಪಡೆದ 26 ಜಿಲ್ಲೆಗಳ ಪ್ರತಿಭೆಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 8 ವೇದಿಕೆಗಳಲ್ಲಿ 120 ವೈವಿಧ್ಯಮಯ ಸ್ಪರ್ಧೆಗಳು ನಡೆಯಲಿದ್ದು ರಾಜ್ಯದ ವಿವಿಧ ಕಡೆಗಳಿಂದ 1500ಕ್ಕೂ ಹೆಚ್ಚಿನ ಪ್ರತಿಭೆಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಭಟ್ಕಳದ ಪ್ರಮುಖ ದರ್ಗಾಗಳಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಿದ್ದು, ರವಿವಾರ ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಶಾಸಕ ಮಂಕಾಳ ವೈದ್ಯ, ಖ್ಯಾತ ಬರಹಗಾರ ಡಾ.ಹೆಚ್.ಎಸ್.ಸತ್ಯನಾರಾಯಣ ಸೇರಿದಂತೆ ಪ್ರಮುಖ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ಬರಹಗಾರ, ಚಿಂತಕ ಸ್ವಾಲಿಹ್ ತೋಡಾರ್ ಅವರಿಗೆ ಸುನ್ನೀ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸುಫ್ಯಾನ್ ಸಖಾಫಿ ತಿಳಿಸಿದರು.
ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಫ್ವಾನ್ ಚಿಕ್ಕಮಗಳೂರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







