ವಾರಕ್ಕೆ 90 ಗಂಟೆಗಳ ಕೆಲಸ ಅವೈಜ್ಞಾನಿಕ ಹಾಗೂ ಅಮಾನವೀಯ: ಸಯ್ಯದ್ ಮುಜೀಬ್

ಮಂಗಳೂರು: ವಾರದಲ್ಲಿ 90 ಗಂಟೆಯ ಕೆಲಸ ಮಾಡಬೇಕೆಂದು ಎಲ್‌ಆ್ಯಂಡ್‌ಟಿ ಕಂಪೆನಿಯ ಅಧ್ಯಕ್ಷರು ಹೇಳಿಕೊಂಡಿ ರುವುದು ಅವೈಜ್ಞಾನಿಕ, ಅಸಮರ್ಥನೀಯ ಹಾಗೂ ಅಮಾನವೀಯವಾಗಿದೆ. ಈಗಾಗಲೇ ನಿರುದ್ಯೋಗದಿಂದ ಬಳಲು ತ್ತಿರುವ ದೇಶದಲ್ಲಿ ವಾರದಲ್ಲಿ 70-90 ಗಂಟೆ ಕೆಲಸದ ಚರ್ಚೆಗಳು ಮತ್ತಷ್ಟು ನಿರುದ್ಯೋಗವನ್ನು ಹುಟ್ಟು ಹಾಕಲಿದೆ. ಹಲವು ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದು ಸಿಐಟಿಯ ರಾಜ್ಯ ಕಾರ್ಯದರ್ಶಿ ಸೈಯ್ಯದ್ ಮುಜೀಬ್ ಹೇಳಿದರು.
ನಗರದ ಬೋಳಾರದಲ್ಲಿ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಹಾಸನ ವಿಭಾಗ ಮಟ್ಟದ ಸಂಘಟನಾ ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ, ರಾಜ್ಯ ಸರಕಾರಗಳು ಹೊಸ ಕಾಯ್ದೆ, ನಿಯಮಾವಳಿ,ನೀತಿಗಳ ಮೂಲಕ ಜನರಿಗಿದ್ದ ಅಧಿಕಾರವನ್ನು ಕಸಿಯುವ ಮೂಲಕ ಗುಲಾಮರನ್ನಾಗಿಸುತ್ತಿವೆ. ಮಂಗಳೂರಿನಲ್ಲಿ ಜನರ ಧ್ವನಿಗಳಾದ ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಯು ಸರ್ವಾಧಿಕಾರಿ ನೀತಿಯನ್ನು ಅನುಸರಿಸುತ್ತಿದೆ. ರಾಜ್ಯದ ರಾಜಧಾನಿಯಲ್ಲೂ ಪ್ರತಿಭಟನೆಗಳಿಗೆ ಅವಕಾಶ ಇಲ್ಲದಂತಹ ವಾತಾವರಣ ನಿರ್ಮಾಣ ಮಾಡಿದೆ. ಇದು ಜನರ ಪ್ರತಿಭಟನೆಯ ಹಕ್ಕನ್ನು ಕಸಿಯುತ್ತಿರುವುದರ ಭಾಗವಾಗಿದೆ ಎಂದು ಸೈಯದ್ ಮುಜೀಬ್ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಮುಖಂಡ ಜೆ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಮಾಲಿನಿ ಮೇಸ್ತಾ, ರಾಧಾ ಮೂಡುಬಿದಿರೆ, ಧರ್ಮೇಶ್ ಉಪಸ್ಥಿತರಿದ್ದರು.
ಈ ಕಾರ್ಯಾಗಾರದಲ್ಲಿ ಹಾಸನ ವಿಭಾಗ ಮಟ್ಟದ ದ.ಕ., ಉಡುಪಿ, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಆಯ್ದ 120 ನಾಯಕರು ಭಾಗವಹಿಸಿದ್ದರು. ಶಿಬಿರದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ,ರಾಜ್ಯ ಉಪಾಧ್ಯಕ್ಷ ಡಾ.ಕೆ. ಪ್ರಕಾಶ್, ಧರ್ಮೇಶ್, ಮಾಲಿನಿ ಮೇಸ್ತಾ ತರಗತಿಗಳನ್ನು ನಡೆಸಲಿದ್ದಾರೆ.







