"ಶೇ.1ರಷ್ಟು ಮಹಿಳೆಯರ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲದಿರುವುದು ವಿಷಾದನೀಯ"
ನನಸುಗಳ ನಕಾಶೆ-ಮಹಿಳಾ ವಿಚಾರಗೋಷ್ಠಿಯಲ್ಲಿ ಸುಧಾ ಆಡುಕಳ

ಮಂಗಳೂರು, ಎ.20: ಕೃಷಿ ಕ್ಷೇತ್ರದಲ್ಲಿ ಶೇ.70ರಷ್ಟು ಮಹಿಳೆಯರು ತೊಡಗಿಸಿಕೊಂಡಿದ್ದರೂ ಕೂಡ ಕೃಷಿ ಭೂಮಿಯು ಶೇ.1ರಷ್ಟು ಮಹಿಳೆಯರ ಹೆಸರಿನಲ್ಲಿ ಇಲ್ಲದಿರುವುದು ವಿಷಾದನೀಯ ಎಂದು ಉಪನ್ಯಾಸಕಿ, ಲೇಖಕಿ ಸುಧಾ ಆಡುಕಳ ಹೇಳಿದರು.
ಕರ್ನಾಟಕ ಬ್ಯಾರೀಸ್ ಸೋಶಿಯಲ್ ಮತ್ತು ಕಲ್ಚರಲ್ ಫೋರಂ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ರವಿವಾರ ನಡೆದ ಬ್ಯಾರೀಸ್ ಫೆಸ್ಟಿವಲ್-2025 (ಬ್ಯಾರಿ ಬಹುಭಾಷಾ ಸೌಹಾರ್ದ ಉತ್ಸವ)ದ ʼನನಸುಗಳ ನಕಾಶೆʼ ಶೀರ್ಷಿಕೆಯ ಮಹಿಳಾ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಹಿಳೆಯರ ಅಸ್ಮಿತೆಯ ಅಂಕಿ ಅಂಶಗಳ ಬಗ್ಗೆ ಅವಲೋಕಿಸಿದಾಗ ನಿರಾಶದಾಯಕ ವಿಚಾರಗಳು ಕಂಡು ಬರುತ್ತಿದೆ. ರಾಜಕೀಯದಲ್ಲಿ ಶೇ.10ರಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಕೇರಳದಲ್ಲಿ ಬಿಟ್ಟರೆ ದೇಶದ ಉಳಿದ ರಾಜ್ಯಗಳಲ್ಲಿ ಗಂಡಸರ ಸಂಖ್ಯೆಗೆ ಸರಿಸಮಾನವಾಗಿ ಮಹಿಳೆಯರು ಇಲ್ಲ ಎಂಬುದು ಕೂಡ ಗಮನಾರ್ಹವಾಗಿದೆ. ಆದಾಗ್ಯೂ ಮಹಿಳೆಯರು ಮಹಿಳೆಯರಾಗಿ ಇರುವುದು ಕೂಡ ಅಸ್ಮಿತೆ ಯಾಗಿದೆ ಎಂದು ಸುಧಾ ಆಡುಕಳ ಹೇಳಿದರು.
ಶಿಕ್ಷಣ ಕೇವಲ ಉದ್ಯೋಗಕ್ಕೆ ಎಂಬ ಕಲ್ಪನೆಯಿಂದ ನಾವು ಹೊರಗೆ ಬರಬೇಕು. ದೇಶದ ಅಭಿವೃದ್ಧಿಗೆ ಶಿಕ್ಷಣ ಮುಖ್ಯವಾಗಿದೆ. ಅದಕ್ಕಾಗಿ ದಿಢೀರ್ ಕ್ರಾಂತಿಯ ಅಗತ್ಯವೂ ಇಲ್ಲ. ನಮ್ಮೆಲ್ಲಾ ಸಮಸ್ಯೆಗಳು, ಅಡೆತಡೆಗಳು ಶಿಕ್ಷಣದಿಂದ ಕರಗಿ ಹೋಗಬೇಕು. ಅದರೊಂದಿಗೆ ನಾವು ನಮ್ಮ ಮಕ್ಕಳು, ಕುಟುಂಬದ ಸದಸ್ಯರ ಜೊತೆಗೆ ಬಳಸುವ ಭಾಷೆಯ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ. ಅಂದರೆ ಮದುವೆಯಾಗುವ ವಯಸ್ಸಾಯಿತಲ್ಲಾ ಎನ್ನುವ ಬದಲು ಉದ್ಯೋಗ ಮಾಡುವ ವಯಸ್ಸಾಯಿತು ಎನ್ನುವುದು ಸೂಕ್ತವಾಗಿದೆ ಎಂದು ಸುಧಾ ಆಡುಕಳ ಅಭಿಪ್ರಾಯಪಟ್ಟರು.
ಉಪನ್ಯಾಸಕಿ ಸಾರಾ ಮಸ್ಕರುನ್ನಿಸಾ ಮಾತನಾಡಿ ಪ್ರಸಕ್ತ ದಿನಗಳಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ. ನಾವು ಕಲಿಯುವ ಸಂದರ್ಭ ನಮ್ಮ ಶಾಲಾ ಚೀಲಗಳಲ್ಲಿ ಪೆನ್ಸಿಲೋ, ರಬ್ಬರೋ ಸಿಗುತ್ತಿದ್ದರೆ, ಇಂದಿನ ಕೆಲವು ಮಕ್ಕಳ ಚೀಲಗಳಲ್ಲಿ ಮೊಣಚು ಸಾಧನಗಳು ಸಿಗುತ್ತಿರುವುದು ವಿಷಾದನೀಯ. ಇದು ಅಪಾಯ ಕಾರಿ ಬೆಳವಣಿಗೆಯಾಗಿದೆ. ನೈತಿಕ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದರು.
ಲೇಖಕಿ ದೇವಿಕಾ ಶೆಟ್ಟಿ ಮಾತನಾಡಿ ಹಿಂಸೆಯಿಲ್ಲದ ಸಮಾಜದಲ್ಲಿ ಬದುಕುವ ವಾತಾವರಣ ಸೃಷ್ಟಿಯಾಗ ಬೇಕು. ಅತ್ಯಾಚಾರ ಮುಕ್ತ ಸಮಾಜ ಮಾತ್ರವಲ್ಲ, ಮನೆಯೊಳಗೆ ಮಹಿಳೆ ಸುರಕ್ಷಿತೆವಾಗಿರುವಳು ಎಂಬ ಸಂದೇಶ ಸಮಾಜಕ್ಕೆ ರವಾನಿಸಬೇಕಿದೆ ಎಂದರು.
ಸಂಶೋಧನಾ ವಿದ್ಯಾರ್ಥಿನಿ ಸೆಮೀರಾ ಕೆ.ಎ. ಮಾತನಾಡಿ ಮಾನವ ಸಂಕುಲವು ಭಯಮುಕ್ತ ಸಮಾಜ ವನ್ನು ನಿರೀಕ್ಷಿಸುತ್ತಿದೆ. ಅದಕ್ಕೂ ಮೊದಲು ಮಹಿಳೆಯರು ಸ್ವಯಂ ರಕ್ಷಣೆಯ ಬಗ್ಗೆ ಜಾಗೃತೆ ವಹಿಸಬೇಕಿದೆ. ಮಹಿಳೆಯು ಮನೆ ಕೆಲಸಕ್ಕೆ ಸೀಮಿತವಲ್ಲ ಎಂಬ ಮನೋಭಾವ ನಮ್ಮೆಲ್ಲರಲ್ಲಿ ಇರಬೇಕಿದೆ ಎಂದರು.
ವಿಚಾರಗೋಷ್ಠಿಯ ಸಂಯೋಜಕಿ ಶಮೀಮಾ ಕುತ್ತಾರ್ ಮಾತನಾಡಿ ದೇಶ ಆಧುನಿಕತೆಗೆ ತೆರೆದು ಕೊಂಡರೂ ಕೂಡ ಮಹಿಳೆಯರ ನಿಯಂತ್ರಣವು ಪುರುಷರ ಕೈಯಲ್ಲಿರುವುದು ಕಂಡು ಬರುತ್ತಿದೆ. ಇದು ಹೀಗೆ ಮುಂದುವರಿಯಬಾರದು. ನಾವು ಕಂಡ ಕನಸುಗಳನ್ನು ನನಸು ಮಾಡಬೇಕು. ಅದಕ್ಕಾಗಿ ನಮ್ಮ ನಕಾಶೆಯನ್ನು ವಿಸ್ತರಿಸಬೇಕು ಎಂದರು.