ಮಾ.1-9: ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶ

ಮಂಗಳೂರು, ಫೆ.16: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.1ರಿಂದ 9ರ ತನಕ ಬ್ರಹ್ಮಕಲಶೋತ್ಸವ ಜರುಗಲಿದ್ದು, ಇದರ ಅಂಗವಾಗಿ ಚಪ್ಪರ ಮುಹೂರ್ತ ರವಿವಾರ ನಡೆಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಹಾಗೂ ಮೊಕ್ತೇಸರ ವೇ.ಮೂ. ಕೆ.ವಾಸುದೇವ ಆಸ್ರಣ್ಣ ಅವರು ಚಪ್ಪರ ಮುಹೂರ್ತ ನೆರವೇರಿಸಿದರು. ಕಾವೂರು ದೇವಸ್ಥಾನದ ಪ್ರಧಾನ ಅರ್ಚಕ ಕೆ.ಶ್ರೀನಿವಾಸ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆಶಿಕ್ ಬಳ್ಳಾಲ್ ಕೂಳೂರುಬೀಡು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಮೋಹನ ಪ್ರಭು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅವಿನಾಶ್ ನಾಯ್ಕ್ ಪಂಜಿಮುಗೆರುಗುತ್ತು, ಪ್ರ.ಕಾರ್ಯದರ್ಶಿ ಸುಧಾಕರ ಆಳ್ವ, ಕೋಶಾಧಿಕಾರಿ ದೀಪಕ್ ಪೂಜಾರಿ, ರಾಮಣ್ಣ ಶೆಟ್ಟಿ ಮುಗಿಪು, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಸುಧಾಕರ ಶೆಟ್ಟಿ ಮುಗ್ರೋಡಿ, ವ್ಯವಸ್ಥಾಪನಾ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
*7.5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ: ಸುಮಾರು 800 ವರ್ಷಗಳ ಇತಿಹಾಸವಿರುವ ಚೋಳರ ಶೈಲಿಯ ಕಾವೂರು ದೇವಾಲಯದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದ್ದು, ಅಷ್ಟಬಂಧ ಬ್ರಹ್ಮಕಲಶಕ್ಕೆ ಸಜ್ಜಾಗುತ್ತಿದೆ. ದೇವಳ ಗರ್ಭಗುಡಿ ಜೀರ್ಣೋದ್ಧಾರ, ಅನ್ನಛತ್ರ ನಿರ್ಮಾಣ ಕಾರ್ಯ, ಸುತ್ತುಪೌಳಿ,ಗೋಪುರಗಳನ್ನು ಅಲಂಕಾರಗೊ ಳಿಸಲಾಗುತ್ತಿದೆ. ಸಪ್ತ ಗ್ರಾಮದೊಡೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ 1982ರಲ್ಲಿ ಜೀರ್ಣೋದ್ಧಾರಗೊಂಡಿತ್ತು. 1996ರಲ್ಲಿ ನೂತನ ಕಲ್ಯಾಣ ಮಂಟಪ, ವಸಂತ ಮಂಟಪ ನಿರ್ಮಾಣಗೊಂಡು ಬ್ರಹ್ಮಕಲಶ, 2004ರಲ್ಲಿ ಬ್ರಹ್ಮರಥ, ಜಳಕದ ಕೆರೆ, 2009ರಲ್ಲಿ ಸುತ್ತುಪೌಳಿ, ಏಕಶಿಲಾ ಧ್ವಜಸ್ತಂಭ ನಿರ್ಮಾಣಗೊಂಡು ಬ್ರಹ್ಮಕಲಶ ನಡೆದಿದೆ.
ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ಗರ್ಭಗುಡಿ ಪುನರ್ ನಿರ್ಮಾಣ, ಸಂಪೂರ್ಣ ಶಿಲಾಮಯ, ಸುತ್ತುಪೌಳಿ ನವೀಕರಣ. 5 ಕೋಟಿ ರೂ. ವೆಚ್ಚದಲ್ಲಿ ಸಭಾಂಗಣ, ಪಾಕಶಾಲೆ, ಅನ್ನಛತ್ರ ನಿರ್ಮಾಣ ನಡೆಯುತ್ತಿದೆ. ಈ ಎಲ್ಲ ಪುಣ್ಯ ಕಾರ್ಯಗಳು ಸುಸೂತ್ರವಾಗಿ ನಡೆಯಲು ಎಲ್ಲ ಸದ್ಭಕ್ತ ಬಾಂಧವರ ಪೂರ್ಣ ಸಹಕಾರ ಅವಶ್ಯ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದ್ದಾರೆ.







