ಫೆ.10-11: ಕರ್ನಾಟಕ ಸಂಘ ಚೆನ್ನೈ ಅಮೃತ ಮಹೋತ್ಸವ

ಮಂಗಳೂರು, ಫೆ.6: ಕರ್ನಾಟಕ ಸಂಘ (ರಿ) ಚೆನ್ನೈ ಇದರ ಅಮೃತ ಮಹೋತ್ಸವವು ಫೆ.10 ಹಾಗೂ 11ರಂದು ಚೆನ್ನೈನಲ್ಲಿ ನಡೆಯಲಿದೆ.
ಫೆ.10ರಂದು ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ತಮಿಳುನಾಡು ಸರಕಾರದ ಮಾಜಿ ಆರೋಗ್ಯ ಸಚಿವ ಡಾ. ಎಚ್. ವಿ. ಹಂದೆ ಅಧ್ಯಕ್ಷತೆ ವಹಿಸಲಿರುವರು.
ಕರ್ಣಾಟಕ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಈ ಸಮಾರಂಭದಲ್ಲಿ ‘ಅಮೃತಧಾರಾ’ ಎನ್ನುವ ಸ್ಮರಣ ಸಂಚಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಲೋಕಾರ್ಪಣೆಗೊಳಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಎಚ್. ಗಣೇಶ್ ನಾಯಕ್ ಹಾಗೂ ಪ್ರಭಾ ಮಂಜುನಾಥ್ ಭಾಗವಹಿಸಲಿದ್ದು, ಇದೇ ಸಂದರ್ಭ ಕರ್ನಾಟಕ ಸಂಘದ ಮಾಜಿ ದೀರ್ಘಾವಧಿ ಪದಾಧಿಕಾರಿಗಳು ಮತ್ತು ಚೆನ್ನೈನ ಸೋದರ ಕನ್ನಡ ಸಂಘಗಳ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು.
ಅಮೃತ ಮಹೋತ್ಸವದ ಅಂಗವಾಗಿ ಸಾಹಿತ್ಯಗೋಷ್ಠಿಯನ್ನು ಆಯೋಜಿಸಲಾಗಿದ್ದು ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಮಿಳ್ ಸೆಲ್ವಿ, ಜಾನಪದ ಸಂಶೋಧಕ ಮತ್ತು ಪತ್ರಕರ್ತ ಕೆ.ಎಲ್. ಕುಂಡಂತಾಯ ಹಾಗೂ ಬಿ.ಎಸ್.ಎನ್. ಎಲ್.ನ ಹಿರಿಯ ಅಧಿಕಾರಿ ಕೆ.ಎಲ್. ಶ್ರೀವತ್ಸ ಪಾಲ್ಗೊಳ್ಳುವರು. ಅಪರಾಹ್ನ ಶುಭಶ್ರೀ ತನಿಕಾಚಲಂ ಅವರ ‘ಶ್ರೀರಾಮ ಜಯಂ’ ಸಂಗೀತ ಲಹರಿ, ಬಳಿಕ ಸಂಜೆ ಮಂಡ್ಯ ರಮೇಶ್ ನಿರ್ದೇಶನದ ‘ಚೋರ ಚರಣದಾಸ’ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.11ರಂದು ಬೆಳಗ್ಗೆ ಚೆನ್ನೈನ ಕನ್ನಡ ಸಂಘಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಪರಾಹ್ನ ಪ್ರೊ. ಕೃಷ್ಣೇಗೌಡ, ಕೋಗಳಿ ಕೊಟ್ರೇಶ್, ಡಾ. ಬಸವರಾಜ ಬೆಣ್ಣಿ ಇವರಿಂದ ಹಾಸ್ಯೋತ್ಸವ ನಡೆಯಲಿರುವುದು.
ಸಂಜೆ ಕರ್ನಾಟಕ ಸರಕಾರದ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅತಿಥಿಯಾಗಿ ಪಾಲ್ಗೊಳ್ಳುವರು.
ಈ ಸಂದರ್ಭ ತಮಿಳುನಾಡು ಮತ್ತು ಚೆನ್ನೈ ಹೋಟೆಲ್ ಅಸೋಸಿಯೇಶನ್‌ನ ಅಧ್ಯಕ್ಷ ಎ. ರಾಮದಾಸ್ ರಾವ್ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಡಾ. ಶ್ರೀ ಕೃಷ್ಣ ಭಟ್ ಅರ್ತಿಕಜೆ ಮತ್ತು ವಸಂತ ಹೆಗಡೆ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ‘ಸ್ವರಾಮೃತ’ವು ವಿಶ್ವೇಶ ಭಟ್ ತಂಡ, ಬೆಂಗಳೂರು ಅವರಿಂದ ಜರಗಲಿರುವುದೆಂದು ಚೆನ್ನೈ ಸಂಘದ ಅಧ್ಯಕ್ಷ ಕೆ. ರಾಜೇಶ ರಾವ್ ತಿಳಿಸಿದ್ದಾರೆ.
ಚೆನ್ನೈ ಸಂಘದ ಬಗ್ಗೆ ಒಂದಿಷ್ಟು: ಸ್ವಾತಂತ್ರ್ಯ ಪೂರ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಮದ್ರಾಸ್ ಪ್ರಾಂತದ ಒಂದು ಭಾಗವೇ ಆಗಿದ್ದು ಆ ಕಾಲದಲ್ಲಿ ಇಲ್ಲಿನ ಜನ ಶೈಕ್ಷಣಿಕ ನೆಲೆಯಲ್ಲಿ, ಔದ್ಯೋಗಿಕ ನೆಲೆಯಲ್ಲಿ, ಹೋಟೆಲ್ ಉದ್ಯಮ, ಸಿನಿಮಾ ಉದ್ಯಮ, ಸರಕಾರಿ ಹುದ್ದೆಗಳಲ್ಲೂ ಚೆನ್ನೈನಲ್ಲಿ ನೆಲೆ ನಿಂತಿರುವರು.
ಹೀಗೆ ಶತಮಾನಗಳಿಂದ ಚೆನ್ನೈನಲ್ಲಿ ನೆಲೆ ನಿಂತಿರುವ ಕನ್ನಡಿಗರು 1949ರ ಸೆ. 16ರಂದು ಚೆನ್ನೈಯ ಕರ್ನಾಟಕ ಸಂಘವು ಮದ್ರಾಸ್ಸಿನ ಮೇಯರ್ ಆಗಿ ಬಳಿಕ ಮದ್ರಾಸ್ ಸರಕಾರದ ಸಚಿವರಾಗಿ ಸೇವೆಗೈದಿದ್ದ ಡಾ.ಯು. ಕೃಷ್ಣ ರಾವ್ ಮುಂದಾಳುತ್ವದಲ್ಲಿ ಸ್ಥಾಪನೆಗೊಂಡಿತು. ಅದರ ಎಲ್ಲಾ ಅಧಿಕೃತ ದಾಖಲೀಕರಣವನ್ನು ಅಂದಿನ ಮದ್ರಾಸ್ ಸರಕಾರದ ಅಬಕಾರಿ ಆಯುಕ್ತ ಬಿ.ಎಂ. ಕುಡ್ವ, ಮದ್ರಾಸ್ ವಿಶ್ವವಿದ್ಯಾನಿಲಯದ ಪ್ರೊ.ಎಂ. ಮರಿಯಪ್ಪ ಭಟ್ ಮೊದಲಾದವರು ನಿರ್ವಹಿಸಿದ್ದರು.
ಚೆನ್ನೈಯ ಕೇಂದ್ರ ಪ್ರದೇಶದ ಟಿ. ನಗರದಲ್ಲಿ ವಿಶಾಲವಾದ ಸ್ಥಳಾವಕಾಶದಲ್ಲಿ ಸಂಘದ ಕಟ್ಟಡ ನಿರ್ಮಾಣಗೊಂಡಿರುವುದು ಕನ್ನಡಿಗರೆಲ್ಲರ ಹೆಮ್ಮೆ. ಪ್ರಸ್ತುತ ಇದೊಂದು ಚೆನ್ನೈಯ ಧಾರ್ಮಿಕ, ಸಾಂಸ್ಕತಿಕ, ಶೈಕ್ಷಣಿಕ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಟುವಟಿಕೆಗಳ ತಾಣವಾಗಿದೆ. ಪ್ರಸ್ತುತ ಚೆನ್ನೈನ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಿದ್ಯಾಸಂಸ್ಥೆಯಲ್ಲಿ 1500 ವಿದ್ಯಾರ್ಥಿಗಳು ಹಾಗೂ ಸುಮಾರು 80 ಅಧ್ಯಾಪಕರು ಇದ್ದಾರೆ.
ಪ್ರಸ್ತುತ ಚೆನ್ನೈ ಕನ್ನಡ ಸಂಘವು ಯಶಸ್ವಿ 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ಮದ್ರಾಸ್‌ನ ಪ್ರಸಿದ್ಧ ವುಡ್‌ಲ್ಯಾಂಡ್ಸ್ ಹೋಟೆಲ್‌ನ ಪ್ರವರ್ತಕರಾದ ದಿ. ಕೃಷ್ಣ ಭಟ್‌ರವರ ಮೊಮ್ಮಗ ರಾಜೇಶ ರಾವ್ ಅವರ ಅಧ್ಯಕ್ಷತೆಯಲ್ಲಿ, ಉದ್ಯಮಿ ಪಿ. ನಾರಾಯಣ ಭಟ್ ಸಂಚಾಲಕರಾಗಿ, ಗುರುಪ್ರಸಾದ್ ಕುಂಡಂತ್ತಾಯ ಪ್ರಧಾನ ಕಾರ್ಯದರ್ಶಿಯಾಗಿ, ಎಸ್. ರಾಮಚಂದ್ರ ಭಟ್ ಖಜಾಂಚಿಯಾಗಿ 15 ಮಂದಿ ಪದಾಧಿಕಾರಿಗಳನ್ನೊಳಗೊಂಡ ತಂಡವು ಸಂಘವನ್ನು ಮುನ್ನಡೆಸುತ್ತಿದೆ.







