ನ.10 ಮಂಗಳೂರು, ನ.12 ಪುತ್ತೂರಿನಲ್ಲಿ ಏಕತಾ ಪಾದಯಾತ್ರೆ

ಮಂಗಳೂರು, ಅ.31: ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್‌ರ 150ನೇ ಜನ್ಮದಿನದ ಸ್ಮರಣಾರ್ಥ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ದೇಶಾದ್ಯಂತ ಸರ್ದಾರ್ 150 ಏಕತಾ ಮಾರ್ಚ್ ಘೋಷಿಸಿದೆ. ಆ ಹಿನ್ನಲೆಯಲ್ಲಿ ನ.10ರಂದು ಮಂಗಳೂರಿನಲ್ಲಿ ಹಾಗೂ ನ.12ರಂದು ಪುತ್ತೂರಿನಲ್ಲಿ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಶುಕ್ರವಾರ ತನ್ನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನವು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಜನಭಾಗಿದಾರಿ ರಾಷ್ಟ್ರ ನಿರ್ಮಾಣದ ದೃಷ್ಟಿಕೋನದ ಹಿನ್ನೆಲೆಯಲ್ಲಿ ದೇಶದ ಯುವ ಜನರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರಿಕ ಜವಾಬ್ದಾರಿಯ ಭಾವನೆಯನ್ನು ಎಚ್ಚರಗೊಳಿಸುವ ಗುರಿ ಹೊಂದಿದೆ. ಈ ಮೂಲಕ ಯುವಜನರು ಏಕ್ ಭಾರತ್, ಆತ್ಮನಿರ್ಭರ ಭಾರತ್ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸ ಲಾಗುತ್ತದೆ ಎಂದರು.
ಮಂಗಳೂರಿನಲ್ಲಿ ನ.10ರಂದು ಬೆಳಗ್ಗೆ 9:30ಕ್ಕೆ ಅಂಬೇಡ್ಕರ್ ವೃತ್ತದಿಂದ ಕುದ್ಮುಲ್ ರಂಗರಾವ್ ಪುರಭವನದ ವರೆಗೆ ಏಕತಾ ಮಾರ್ಚ್ ನಡೆಯಲಿದೆ. ಪುತ್ತೂರಿನಲ್ಲಿ ನ.12ರಂದು ಬೆಳಗ್ಗೆ 9:30ಕ್ಕೆ ವಿವೇಕಾನಂದ ವೃತ್ತದಿಂದ ಶ್ರೀ ಮಹಾಲಿಂಗೇಶ್ವರ ದೇವಾಲಯದವರೆಗೆ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಯ ದಿನ ನಶಾ ಮುಕ್ತ ಭಾರತ್ ಮತ್ತು ಗರ್ವ್ ಸೆ ಸ್ವದೇಶಿ ಪ್ರತಿಜ್ಞೆಯನ್ನು ಸ್ವೀಕರಿಸಲಾಗುವುದು. ಯುವಕರು, ಎನ್ನೆಸ್ಸೆಸ್, ಎನ್‌ಸಿಸಿ, ಸಾಂಸ್ಕೃತಿಕ ತಂಡಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಜನಭಾಗೀದಾರಿಕೆಯಿಂದ ರಾಷ್ಟ್ರ ನಿರ್ಮಾಣ ಮಾಡುವ ಪ್ರಧಾನಮಂತ್ರಿಯ ಸಂಕಲ್ಪಕ್ಕೆ ಜನತೆ ಕೈಜೋಡಿಸಬೇಕು ಎಂದು ಬ್ರಿಜೇಶ್ ಚೌಟ ಮನವಿ ಮಾಡಿದರು.
ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶಾಲೆ, ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗು ವುದು. ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಜೀವನದ ಕುರಿತು ಪ್ರಬಂಧ, ಚರ್ಚಾ ಸ್ಪರ್ಧೆಗಳು, ಸೆಮಿನಾರ್‌ಗಳು, ಬೀದಿ ನಾಟಕಗಳನ್ನು ನಡೆಸಲಾಗುವುದು ಎಂದರು.
ಅಭಿಯಾನದ ಭಾಗವಾಗಿ ದೇಶವ್ಯಾಪಿ ರೀಲ್ಸ್ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಸರ್ದಾರ್ ಎಟ್ 150 ಯಂಗ್ ಲೀಡರ್ಸ್ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಡಾ.ಮನಸುಖ್ ಮಾಂಡವಿಯಾ ಚಾಲನೆ ನೀಡಿದ್ದು, ರಾಷ್ಟ್ರವ್ಯಾಪಿ ಆಯ್ಕೆಯಾಗುವ 150 ವಿಜೇತರು ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ರಾಷ್ಟ್ರೀಯ ಮಾರ್ಚ್ ನ.26ರಿಂದ ಡಿ.6ರವರೆಗೆ ಕರಮಸದ್‌ನಿಂದ ಸ್ಟ್ಯಾಚ್ಯೂ ಆಫ್ ಯೂನಿಟಿವರೆಗೆ 152 ಕಿ.ಮೀ. ಉದ್ದಕ್ಕೆ ನಡೆಯಲಿದೆ ಎಂದು ಹೇಳಿದರು.
ಎಲ್ಲ ನೋಂದಣಿ ಮತ್ತು ಚಟುವಟಿಕೆಗಳನ್ನು ಮೈ ಭಾರತ್ ಪೋರ್ಟಲ್ ಮೂಲಕ ನಡೆಸಲಾಗುತ್ತಿದೆ. https://mybharat.gov.in/pages/unity march ನಲ್ಲಿ ನೋಂದಣಿ ಮಾಡಿಕೊಂಡು ಈ ಕಾರ್ಯಕ್ರಮ ದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಂಸದ ಬ್ರಿಜೇಶ್ ಚೌಟ ಮನವಿ ಮಾಡಿದರು.
ಮಂಗಳೂರು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಸೇಸಪ್ಪಅಮೀನ್, ಮೈ ಭಾರತ್ ಆಡಳಿತಾಧಿಕಾರಿ ಜಗದೀಶ್ ಕೆ., ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಅರುಣ್ ಶೇಟ್ ಉಪಸ್ಥಿತರಿದ್ದರು.







