ಮಂಗಳೂರು | ಗಾಂಜಾ ಮಾರಾಟಕ್ಕೆ ಯತ್ನ: 11 ಮಂದಿ ಕಾಲೇಜು ವಿದ್ಯಾರ್ಥಿಗಳ ಸೆರೆ

ಸಾಂದರ್ಭಿಕ ಚಿತ್ರ
ಮಂಗಳೂರು: ನಗರದ ಅತ್ತಾವರ ಕಾಪ್ರಿಗುಡ್ಡೆ ಮಸೀದಿ ಬಳಿಯಿರುವ ಕಿಂಗ್ಸ್ ಕೋರ್ಟ್ ಅಪಾರ್ಟಮೆಂಟ್ನಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ತಂದಿರಿಸಲಾಗಿದೆ ಎಂಬ ಮಾಹಿತಿಯ ಮೇರೆಗೆ ಪಾಂಡೇಶ್ವರ ಠಾಣೆಯ ಪೊಲೀಸರು ಶುಕ್ರವಾರ ರಾತ್ರಿ ದಾಳಿ ನಡೆಸಿ 11 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಅದ್ವೈತ್ ಶ್ರೀಕಾಂತ್, ಮುಹಮ್ಮದ್ ಅಪ್ಪಿನ್, ಮುಹಮ್ಮದ್ ಸ್ಪ್ಯಾನೀದ್, ನಿಬಿನ್ ಟಿ. ಕುರಿಯನ್, ಮುಹಮ್ಮದ್ ಕೆ.ಕೆ., ಮುಹಮ್ಮದ್ ಹನಾನ್, ಮುಹಮ್ಮದ್ ಶಾಮಿಲ್, ಅರುಣ್ ಥಾಮಸ್, ಮುಹಮ್ಮದ್ ನಿಹಾಲ್ ಸಿ., ಮುಹಮ್ಮದ್ ಜಾಸೀಲ್ ವಿ., ಸಿನಾನ್ ಪಿ. ಬಂಧಿತ ಆರೋಪಿಗಳಾಗಿದ್ದಾರೆ.
ಪಾಂಡೇಶ್ವರ ಠಾಣೆಯ ಅಪರಾಧ ವಿಭಾಗದ ಹೆಡ್ ಕಾನ್ಸ್ಟೇಬಲ್ ಪುಟ್ಟರಾಮ್ ಸಿ.ಎಚ್., ಮತ್ತು ಪೊಲೀಸ್ ಕಾನ್ಸ್ಟೇಬಲ್ ಮಲ್ಲಿಕ್ ಜಾನ್ ಶುಕ್ರವಾರ ರಾತ್ರಿ 7:45ಕ್ಕೆ ಗಸ್ತು ನಿರತರಾಗಿದ್ದ ವೇಳೆ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಅತ್ತಾವರ ಕಾಪ್ರಿಗುಡ್ಡೆಯ ಅಪಾರ್ಟ್ಮೆಂಟ್ನ ಪ್ಲಾಟ್ ನಂಬ್ರ ಎ1ರಲ್ಲಿ ತಂದಿರಿಸಿಕೊಂಡಿದ್ದಾರೆ ಎಂಬ ಮಾಹಿತಿ ಬಂತು. ತಕ್ಷಣ ಅವರು ಠಾಣೆಯ ಎಸ್ಸೈ ಶೀತಲ್ ಅಲಗೂರುರ ಗಮನಕ್ಕೆ ತಂದರು. ಅದರಂತೆ ದಾಳಿ ನಡೆಸಿ 11 ಮಂದಿ ಆರೋಪಿಗಳನ್ನು ಬಂಧಿಸಿದರು. ಈ ಆರೋಪಿಗಳು ನಗರದ ಕಾಲೇಜ್ವೊಂದರಲ್ಲಿ ದ್ವಿತೀಯ ವರ್ಷದ ಬಿಬಿಎ ಕಲಿಯುತ್ತಿರುವ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಒರಿಸ್ಸಾದಿಂದ ಖರೀದಿಸಿ ತಂದಿದ್ದ ಸುಮಾರು 12.264 ಕೆಜಿ ತೂಕದ 2,45,280 ರೂ. ನಿಷೇಧಿತ ಮಾದಕ ವಸ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಇದನ್ನು 7 ಪ್ಯಾಕೆಟ್ಗಳಲ್ಲಿ ತುಂಬಿಸಿಟ್ಟಿದ್ದರು. ಅದರಲ್ಲದೆ 2 ಡಿಜಿಟಲ್ ತೂಕ ಮಾಪನಗಳು, 1.05 ಲಕ್ಷ ರೂ. ಮೌಲ್ಯದ 11 ಮೊಬೈಲ್ ಫೋನ್ಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಈ ಎಲ್ಲಾ ಸೊತ್ತುಗಳ ಮೌಲ್ಯ 3,52,280 ರೂ. ಎಂದು ಅಂದಾಜಿಸಲಾಗಿದೆ.







