ಬಾಸೆಲ್ ಮಿಶನ್ ನಿಂದ ಮುದ್ರಣಾಲಯ ಸಾರ್ವತ್ರೀಕರಣ ಕರಾವಳಿಯ ಚರಿತ್ರೆಯಲ್ಲಿ ಕ್ರಾಂತಿಕಾರ ಹೆಜ್ಜೆ: ಡಾ.ಪುರುಷೋತ್ತಮ ಬಿಳಿಮಲೆ
ತೊಕ್ಕೊಟ್ಟಿನಲ್ಲಿ ಡಿವೈಎಫ್ಐನ 12ನೇ ರಾಜ್ಯ ಸಮ್ಮೇಳನ

ಮಂಗಳೂರು, ಫೆ. 26: ತುಳುನಾಡನ್ನು ಒಳಗೊಂಡ ಕರಾವಳಿಯಲ್ಲಿ ಟಿಪ್ಪು ಸುಲ್ತಾನನ ಬಳಿಕದ ಆಧುನಿಕ ಇತಿಹಾಸ ಕಟ್ಟುವಲ್ಲಿ ಬಾಸೆಲ್ ಮಿಶನ್ ನಿಂದ ಮುದ್ರಣಾಲಯ ಸ್ಥಾಪನೆ ಕ್ರಾಂತಿಕಾರಕ ಹೆಜ್ಜೆ ಎಂದು ಜೆಎನ್ಯು ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಡಿವೈಎಫ್ಐನ 12ನೇ ರಾಜ್ಯ ಸಮ್ಮೇಳನದ 2ನೇ ದಿನದ ಅಂಗವಾಗಿ ತೊಕ್ಕೊಟ್ಟಿನ ಯನಿಟಿ ಹಾಲ್ನ ಪ್ರೊ.ಅಮೃತ ಸೋಮೇಶ್ವರ ವೇದಿಕೆಯಲ್ಲಿ ‘ಕರಾವಳಿ ಕಟ್ಟಿದ ಬಗೆ’ ಎಂಬ ವಿಷಯದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಲ್ಲಿ ಜ್ಞಾನ ಅಗತ್ಯ. ಆದರೆ ಜ್ಞಾನವನ್ನು ಮಠದೊಳಗೆ ಬಂಧಿಸಲ್ಟಟ್ಟಿದ್ದ ಕಾಲಘಟ್ಟದಲ್ಲಿ ಬಾಸೆಲ್ ಮಿಶನ್ ಮುದ್ರಣಾಲಯವನ್ನು ಸಾರ್ವತ್ರಿಕಗೊಳಿಸುವ ಮೂಲಕ ಇತಿಹಾಸದ ಗತ ಪುಟಗಳನ್ನು ಕೂಡಾ ಸ್ಥಳೀಯ ಭಾಷೆಯ ಮೂಲಕ ಜನಮನ ತಲುಪಿಸಿದರು. ಮಿಶನರಿಗಳನ್ನು ಬೈಯುವುದು ಸುಲಭ. ಈ ದುರಿತ ಕಾಲದಲ್ಲಿ ಯಾವುದೇ ಸಮುದಾಯವನ್ನು ಓಲೈಸಬೇಕಾದ ಅಗತ್ಯ ನನಗಿಲ್ಲವಾದರೂ, ಮುದ್ರಣಾಲಯದ ಮೂಲಕ ಮಿಶನರಿಗಳು ನೀಡಿದ ಮಹತ್ತರ ಕೊಡುಗೆಯನ್ನು ಚರಿತ್ರೆ ಗೊತ್ತಿದ್ದವರು ಅರ್ಥೈಸಿಕೊಳ್ಳಬೇಕಾದ ಸತ್ಯ ಎಂದು ಮಾರ್ಮಿಕವಾಗಿ ನುಡಿದರು.
ಸಾವಿರಾರು ವರ್ಷಗಳ ದೇಶದ ಇತಿಹಾಸದಲ್ಲಿ ಅಷ್ಟ ಮಠಗಳ ಸ್ಥಾಪನೆಯಾಗಿವೆ. ಭಾರತೀಯ ತತ್ವಶಾಸ್ತ್ರಕ್ಕೆ ಮಧ್ವಾಚಾರ್ಯ, ಶಂಕಾರಾಚಾರ್ಯರ ಸಾಧನೆ ಮಹತ್ತರವಾದುದು. ಆದರೆ ತುಳು, ಕನ್ನಡದಲ್ಲಿ ಭಗದ್ಗೀತೆಯನ್ನು ಅನುವಾದ ಮಾಡಿ ಅವರು ನೀಡಿಲ್ಲ. ಆದರೆ ಅದು ಆಗಿದ್ದು, ಮಿಶನರಿಗಳ ಮುದ್ರಣಾಲಯಗಳಿಂದ ಎಂದವರು ಹೇಳಿದರು.
ಟಿಪ್ಪುವಿನ ಮರಣದ 37ನೇ ವರ್ಷಕ್ಕೆ ಬಲ್ಮಠಕ್ಕೆ ಆಗಮಿಸಿದ್ದ ಬಾಶೆಲ್ ಮಿಶನರಿ ಪಾದ್ರಿಗಳ ಉದ್ದೇಶ ಮತಾಂತರ ಆಗಿತ್ತು. ಆದರೆ ಐದು ವರ್ಷಗಳಾದರೂ ಅವರಿಗೆ ಮತಾಂತರ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇಲ್ಲಿನ ಸ್ಥಳೀಯ ಜನರ ಜತೆ ಬೆರೆದು, ಇಲ್ಲಿನ ಸಂಸ್ಕೃತಿ, ಇತಿಹಾಸವನ್ನು ಅರಿತು, ತಿಳಿಕೊಂಡ ಅವರು ಮುದ್ರಣಾಲಯ ಸ್ಥಾಪಿಸುವ ಜತೆಗೆ ಇಲ್ಲಿನ ಜಾತಿ ಪದ್ಧತಿಯ ವ್ಯವಸ್ಥೆಯನ್ನು ಅರಿತು ಪ್ರತ್ಯೇಕ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾದರು. ಕ್ರೈಸ್ತ ಧರ್ಮದಲ್ಲಿ ಸಮಾನ ಶಿಕ್ಷಣಕ್ಕೆ ಆದ್ಯತೆ ಇದ್ದರೂ ಇಲ್ಲಿನ ಜಾತಿ ವ್ಯವಸ್ಥೆಯ ಕಾರಣದಿಂದ ಪ್ರತ್ಯೇಕ ಶಾಲೆಗಳನ್ನು ಕರಾವಳಿಯಲ್ಲಿ ತೆರೆಯುವುದು ಸೂಕ್ತ ಎಂದು ಅರಿತ ಅವರು ಇಂಗ್ಲೆಂಡ್ ನ ತಮ್ಮ ಪ್ರಮುಖರ ಜತೆ ಆರು ವರ್ಷಗಳ ಕಾಲ ಪತ್ರ ವ್ಯವಹಾರದ ಬಳಿಕ 1868ರಲ್ಲಿ ಶಾಲೆ ಆರಂಭಿಸಿದ್ದರು. ಶಾಲೆಗೆ ಸೇರಿದ್ದ ಆರು ಜನರಲ್ಲಿ ಇಬ್ಬರು ಮಾತ್ರ ಬ್ರಾಹ್ಮಣರೇತರಾಗಿದ್ದರು. ಶಾಲೆ ಆರಂಭವಾದ ಬಳಿಕ ಇಬ್ಬರು ಬ್ರಾಹ್ಮಣ ವಿದ್ಯಾರ್ಥಿಗಳು ಶಾಲೆಯಿಂದ ಹೊರ ಹೋದರೆ ನಾಲ್ವರು ಮಾತ್ರವೇ ಶಿಕ್ಷಣ ಪಡೆದಿದ್ದರು. ಬಳಿಕ ಬ್ರಾಹ್ಮಣ ಮಹಿಳೆಯರಿಗಾಗಿಯೇ ಪ್ರತ್ಯೇಕ ಶಾಲೆ, ಗ್ರಂಥ ಸಂಪಾದನೆ ಕಾರ್ಯವೂ ನಡೆಯಿತು. ಪಾದ್ರಿಯೊಬ್ಬರು ಬ್ರಾಹ್ಮಣ ಸಮುದಾಯದ ಮದುವೆಗೆ ಹೋಗಿ ಅಲ್ಲಿನ ಸಂಸ್ಕೃತಿಯನ್ನು ಆರು ತಿಂಗಳ ಕಾಲ ಅಧ್ಯಯನ ನಡೆಸಿ, ಲಕ್ಷ್ಮೀಶನ ಜೈಮಿನಿ ಭಾರತವನ್ನು ಸ್ಥಳೀಯ ಭಾಷೆಯಲ್ಲಿ ಮುದ್ರಿಸುವ ಮೂಲಕ ಇಲ್ಲಿನ ಶ್ರೀಮಂತ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದರು. ಬಳಿಕ 1848ರಲ್ಲಿ ವೆನ್ಲಾಕ್, 1866ರಲ್ಲಿ ಮಂಗಳೂರು ಮುನ್ಸಿಪಾಲಿಟಿ, ಮಂಗಳೂರು ಸಮಾಚಾರ್ ಪತ್ರಿಕೆ, ಕಿಟಲ್ ಶಬ್ದಕೋಶ, ಕನ್ನಡದಲ್ಲಿ ಬೈಬಲನ್ನು ಹೊರತರುವ ಮೂಲಕ ದೇವ ಭಾಷೆಗಳಿಗೆ ಸೀಮಿತವಾಗಿದ್ದ ಮಹಾನ್ ಗ್ರಂಥಗಳನ್ನು ಸ್ಥಳೀಯ ಭಾಷೆಯಲ್ಲಿ ನೀಡಿದರು. ತುಳುನಾಡಿನ ಜನಪದ ಕಲೆ ಪಾಡ್ದನಗಳನ್ನು ಸಂಗ್ರಹಿಸಿದರು. ಹಂಚಿನ ಕಾರ್ಖಾನೆ ತೆರೆದು, ಹೆಚ್ಚಿನ ಫಲವತ್ತೆಯನ್ನು ಹೊಂದಿರದ ದ.ಕ. ಜಿಲ್ಲೆಯ ಭೂಮಿಯಲ್ಲಿ ಪೂರಕವಾದ ಗೇರುಬೀಜ ಕೃಷಿಯ ಜತೆಗೆ ಕಾರ್ಖಾನೆ ಸ್ಥಾಪನೆಗೆ ಮುನ್ನುಡಿ ಹಾಕಿ ಕರಾವಳಿಯ 20ನೆ ಶತಮಾನದ, ಹೊಸ ದಿಕ್ಕಿಗೆ ಚಲನೆ ನೀಡಿದ್ದು ಕೂಡಾ ಬಾಸೆಲ್ ಮಿಶನರಿಗಳು ಎಂದು ಪ್ರೊ.ಬಿಳಿಮಲೆ ವಿವರ ನೀಡಿದರು.
ಟಿಪ್ಪುವಿನ ಆಡಳಿತದ ಮೊದಲ ಕರಾವಳಿಯ ಇತಿಹಾಸವನ್ನು ಮೆಲುಕು ಹಾಕಿದ ಡಾ.ಪುರುಷೋತ್ತಮ ಬಿಳಿಮಲೆ, ಕರಾವಳಿಗೆ ಪೋರ್ಚುಗೀಸರು, ಗ್ರೀಕರು ಇಲ್ಲಿಗೆ ವ್ಯಾಪಾರಕ್ಕೆ ಸಮುದ್ರದ ಮೂಲಕ ಬರುವಲ್ಲಿಯೂ ಇಲ್ಲಿನ ತೆಂಗಿನ ನಾರಿನ ಹುರಿಹಗ್ಗದ ಪಾತ್ರವೂ ಪ್ರಮುಖ ಎಂದು ಹೇಳಿದರು.
1850ರಿಂದ 1950ರ ಅವಧಿಯಲ್ಲಿ ಪೊಳಲಿ ಶೀನಪ್ಪ ಶೆಟ್ಟಿ, ಗಣಪತಿ ರಾವ್ ಐಯ್ಯರ್, ಮಂಜೇಶ್ವರ ಗೋವಿಂದ ಪೈ, ಬಿ.ಎ. ಸಾಲೆತ್ತೂರು, ಕೇಶವಕೃಷ್ಣ ಕುಡ್ವ, ಕೆ.ವಿ. ರಮೇಶ್, ಬಿ. ಗುರುರಾಜ್ ಭಟ್ ಮೊದಲಾದವರು ತುಳುನಾಡಿನ ಇತಿಹಾಸವನ್ನು ಅತ್ಯಂತ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ ಎಂದು ಹೇಳಿದ ಡಾ.ಬಿಳಿಮಲೆ, 1900ರ ಆಸುಪಾಸಿನಲ್ಲಿ ಬಂದ ಬಹ್ಮ ಸಮಾಜ, ಆರ್ಯ ಸಭೆ, ರಾಮಕೃಷ್ಣ ಮಿಶನ್ಗಳು ಕೂಡಾ ಆಧುನಿಕ ಚರಿತ್ರೆಯ ಬೆಳಕಿನಲ್ಲಿ ಧಾರ್ಮಿಕತೆಯನ್ನು ಪಸರಿಸಿವೆ. ಆದರೆ ಇವರ್ಯಾರು ಪ್ರಸಕ್ತ ಚರ್ಚಿತವಾಗುತ್ತಿರುವ ಸನಾತನ ಧರ್ಮವನ್ನು ಪ್ರತಿಪಾದಿಸಿಲ್ಲ ಎಂದರು.
20ನೇ ಶತಮಾನದ ಪೂರ್ವದಲ್ಲಿ ಕರಾವಳಿಯಲ್ಲಿ ಹುಟ್ಟಿಕೊಂಡ ಬ್ಯಾಂಕ್ ಗಳು ಆರ್ಥಿಕ ಶಕ್ತಿಯನ್ನು ತುಂಬಿದವು. ಶಿಕ್ಷಣ, ಹೊಟೇಲ್ ಉದ್ಯಮದ ಬೆಳವಣಿಗೆಯ ಜತೆಗೆ ಸಹಕಾರಿ ಚಳವಳಿ ಗಟ್ಟಿಗೊಂಡಿತು. ಕುದ್ಮುಲ್ ರಂಗರಾವ್, ಬಿ.ನರಸಿಂಗ ರಾವ್, ಬೆನಗಲ್ ರಾಮರಾವ್, ಕಾರ್ನಾಡ್ ಸದಾಶಿವ ರಾವ್, ಪಂಜೆ ಮಂಗೇಶ ರಾವ್, ಗುರುದತ್, ಕಲಾದೇವಿ ಚಟ್ಟೋಪಾಧ್ಯಾಯ, ಬಿ.ವಿ. ಕಕ್ಕಿಲ್ಲಾಯ ಮೊದಲಾದವರು ಕರಾವಳಿಯನ್ನು ಗಟ್ಟಿಗೊಳಿಸಿದರು. ಕರಾವಳಿಯ ಹೆಸರನ್ನು ಹೊರಗಡೆ ವಿಸ್ತರಿಸಿದರು. ಆದರೆ ಇದೀಗ ವಿನಾ ಕಾರಣ ಹಲ್ಲೆ ನಡೆಸುವ, ಮತೀಯ ಸಂಘರ್ಷದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದವರು ಹೇಳಿದರು.
ಉಪನ್ಯಾಸದ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ವೈದ್ಯ, ಪ್ರಗತಿಪರ ಚಿಂತಕ ಡಾ.ರಮೇಶ್ ಬೆಲ್ಲದಕೊಂಡ ಮಾತನಾಡಿ, ದೇಶದಲ್ಲಿ ಹಿಂದಿ ಭಾಷಾ ಹೇರಿಕೆಯ ಜತೆಗೆ ಸಂಸ್ಕೃತ ಭಾಷೆಯ ಹೇರಿಕೆಯೂ ನಡೆಯುತ್ತಿದ್ದು, ಇದು ಸರಿಯಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ 2ನೇ ದರ್ಜೆಯ ಪ್ರಜೆಗಳಾಗಿ ರಾಜ್ಯದ ಭಾಷೆಯನ್ನು ಕಡೆಗಣಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭ ಡಾ.ಪುರುಷೋತ್ತಮ ಬಿಳಿಮಲೆಯವರ ‘ಅಮರ ಸುಳ್ಯ ರೈತ ಹೋರಾಟ’ ಕೃತಿ ಬಿಡುಗಡೆಗೊಳಿಸಲಾಯಿತು. ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಸವರಾಜ್ ಪೂಜಾರ್ ಉಪಸ್ಥಿತರಿದ್ದರು. ಜಿಲ್ಲಾ ಮುಖಂಡ ಮನೋಜ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.







