ಫೆ.15: ಮಂಗಳೂರಿನ ಕರಾವಳಿ ಮೈದಾನದಲ್ಲಿ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂರ್ನಮೆಂಟ್

ಮಂಗಳೂರು, ಫೆ.10: ಲಯನ್ಸ್ ಕ್ಲಬ್ ವೆಲನ್ಸಿಯಾ ಇದರ ಆಶ್ರಯದಲ್ಲಿ ಫೆ.15 ರಂದು ಮಂಗಳೂರಿನ ಕರಾವಳಿ ಮೈದಾನದಲ್ಲಿ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂರ್ನಮೆಂಟ್ ‘ಲಯನ್ಸ್ ವೆಲನ್ಸಿಯಾ -2025’ ಆಯೋಜಿಸಲಾಗಿದೆ.
ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವೆಲನ್ಸಿಯಾ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲೆಸ್ಸಿ ಡಿ ಸೋಜ ಅವರು ಬೆಳಗ್ಗೆ 8:30ಕ್ಕೆ ತೇಜಸ್ವಿನಿ ಆಸ್ಪತ್ರೆಯ ಅಧ್ಯಕ್ಷ ಡಾ. ಶಾಂತಾರಾಮ ಶೆಟ್ಟಿ ಎಂ ಅವರು ಟೂರ್ನಮೆಂಟ್‌ನ್ನು ಉದ್ಘಾಟಿಸುವರು. ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ ಮತ್ತು ಸ್ಪೇಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಇದರ ಕೋಶಾಧಿಕಾರಿ ಆನಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು ಎಂದರು.
ಸಂಜೆ 5 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಲಯನ್ಸ್ ಮಾಜಿ ಗವರ್ನರ್ ರೊನಾಲ್ಡ್ ಗೋಮ್ಸ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಪ್ರದೀಪ್ ಡಿ ಸೋಜ ಮತ್ತು ಸ್ಪೇಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಇದರ ಕ್ರೀಡಾ ನಿರ್ದೇಶಕ ನಾರಾಯಣ ಶೇರಿಗಾರ್ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದರು.
ಅಂಧರ ಕ್ರಿಕೆಟ್ ಟೂರ್ನಮೆಂಟ್‌ನ್ನು ನಡೆಸುವುದರ ಮೂಲಕ ವಿಶೇಷ ಚೇತನರ ಬಾಳಲ್ಲೂ ಉತ್ಸಾಹದ ಕ್ಷಣಗಳ ಆನಂದ ಮೂಡಲಿ ಎಂಬ ಭಾವನೆ ನಮ್ಮದಾಗಿದೆ. ಈ ಟೂರ್ನಮೆಂಟ್‌ನಲ್ಲಿ ರಾಜ್ಯದ ವಿವಿಧ ಕಡೆಗಳಿಂದ 5 ತಂಡಗಳು ಭಾಗವಹಿ ಸಲಿದೆ. ಎಲ್ಲಾ ತಂಡಗಳಿಗೆ ಸಾರಿಗೆ, ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ವೆಲನ್ಸಿಯಾ ಲಯನ್ಸ್ ಕ್ಲಬ್‌ನ ಮೂಲಕ ಮಾಡಲಾಗುವುದು ಎಂದು ತಿಳಿಸಿದರು.
ಮಂಗಳೂರು 1987ರಲ್ಲಿ ಸ್ಥಾಪನೆಗೊಂಡಿದ್ದ ಲಯನ್ಸ್ ಕ್ಲಬ್ ವೆಲನ್ಸಿಯಾ ಕಳೆದ 38 ವರ್ಷಗಳಿಂದ ಕ್ರೀಡಾಕೂಟಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ ಎಂದು ಲೆಸ್ಲಿ ಡಿ ಸೋಜ ಮಾಹಿತಿ ನೀಡಿದರು.
ಪ್ರತಿವರ್ಷ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳ ಜತೆಗೆ ವಿಶೇಷ ಚೇತನರ ಕ್ರೀಡಾಕೂಟವನ್ನು ನಡೆಸಿಕೊಂಡು ಬಂದಿರುವ ಲಯನ್ಸ್ ಕ್ಲಬ್ ವೆಲನ್ಸಿಯಾ ಕ್ರೀಡಾ ಕಾರ್ಯಕ್ರಮದ ಭಾಗವಾಗಿ ಕಳೆದ 30 ವರ್ಷಗಳಿಂದ ಅನಾಥ ಮಕ್ಕಳ ಒಲಿಂಪಿಕ್ಸ್ ವಿಶೇಷ ಚೇತನರಿಗೆ ಒಲಿಂಪಿಕ್ಸ್, ಜಿಲ್ಲಾ, ರಾಜ್ಯ, ಹಾಗೂ ರಾಷ್ಟ್ರ ಮಟ್ಟದಲ್ಲಿ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ಗಳು, ಅಂಧರಿಗೆ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿತ್ತು. ಕಳೆದ ವರ್ಷ ಉತ್ತರ ಕನ್ನಡ, ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳ ವಿಶೇಷ ಚೇತನ ಮಕ್ಕಳಿಗಾಗಿ ವಿಶೇಷ ಒಲಿಂಪಿಕ್ಸ್ ಪ್ರಾದೇಶಿಕ ಸ್ಪರ್ಧೆಯನ್ನು ಆಯೋಜಿಸಿತ್ತು. ಸುಮಾರು 725 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ವೆಲೆನ್ಸಿಯಾದ ಸ್ಥಾಪಕ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾರ್ಯದರ್ಶಿ ಒಸ್ವಾಲ್ಡ್ ಡಿ ಕುನ್ಹಾ, ಖಜಾಂಚಿ ಸಿರಿಲ್ ಡಿ ಸೋಜ, ಉಪಾಧ್ಯಕ್ಷೆ ವಲ್ಸಾ ಜೀವನ್, ಜೋಸೆಫ್ ಫೆರ್ನಾಂಡಿಸ್, ಆಲ್ವಿನ್ ಪಿಂಟೋ ಉಪಸ್ಥಿತರಿದ್ದರು.







