ನ.15ರಂದು ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಮುಹಮ್ಮದ್ ಕಟ್ಪಾಡಿ ಆಯ್ಕೆ

ಮುಹಮ್ಮದ್ ಕಟ್ಪಾಡಿ
ಪಡುಬಿದ್ರಿ: ನ. 15ರಂದು ಹೆಜಮಾಡಿಯಲ್ಲಿ ನಡೆಯಲಿರುವ ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡದ ಖ್ಯಾತ ಕಥೆಗಾರ, ಕಾದಂಬರಿಗಾರ, ಸಾಮಾಜಿಕ ಹೋರಾಟಗಾರರಾದ ಫಕೀರ್ ಮುಹಮ್ಮದ್ ಕಟ್ಪಾಡಿ ಆಯ್ಕೆಯಾಗಿದ್ದಾರೆ.
ಕಾಪು ತಾಲೂಕು ಸಾಹಿತ್ಯ ಸಮ್ಮೇಳನದ ಪ್ರಸ್ತಾಪವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯು ಸಮ್ಮತಿಸಿದೆ ಎಂದು ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅವರು ಪ್ರಕಟಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ, ವಿಶೇಷವಾಗಿ ನಮ್ಮ ಕರಾವಳಿಯ ಸಾಮಾಜಿಕ ಕಳಕಳಿಯ ಸಾಕ್ಷಿಪ್ರಜ್ಞೆಯಾಗಿರುವ ಹಿರಿಯ ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿಯವರು 1949ರ ಜೂನ್ 25ರಂದು ಬಾರಕೂರಿನಲ್ಲಿ ಜನಿಸಿದರು. ಕಾಪು ತಾಲೂಕಿನ ಕಟ್ಪಾಡಿಯಲ್ಲಿ ಆರಂಭಿಕ ವಿದ್ಯಾಭ್ಯಾಸ ಪಡೆದ ಅವರು, ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಕಟ್ಪಾಡಿ ಯನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡವರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿರುವ ಅವರು, ಪ್ರಸ್ತುತ ಕಟ್ಪಾಡಿಯಲ್ಲಿ ವಾಸ್ತವ್ಯ ಹೊಂದಿದ್ದಾರೆ.
ಕರಾವಳಿಯ ಸಾಮಾಜಿಕ ಬದುಕು, ಸೌಹಾರ್ದ ಸಂಸ್ಕøತಿಯಹಿನ್ನೆಲೆಯಲ್ಲಿ, ವಿವಿಧ ಸೃಜನಶೀಲ ಆಯಾಮ ಗಳಿಂದ, ವಿಶಿಷ್ಟ ನಿರೂಪಣಾ ಶೈಲಿಯೊಂದಿಗೆ ಅವರು ಹಲವಾರು ಕಥೆ, ಕಾದಂಬರಿ, ಲೇಖನ, ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.
ಗೋರಿ ಕಟ್ಟಿಕೊಂಡವರು, ನೋಂಬು, ದಜ್ಜಾಲ, ಅತ್ತರ್ ಹಾಜಿಕಾ ಮತ್ತು ಇತರ ಕಥೆಗಳು, ಪಚ್ಚ ಕುದುರೆ, ಕಡವು ಮನೆ, ಕುಂದಾಪ್ರ ಅವರ ಪ್ರಮುಖ ಕಥಾಸಂಕಲನಗಳು. ಸರಕುಗಳು, ಕಚ್ಚಾದ ಅವರ ಪ್ರಸಿದ್ಧ ಕಾದಂಬರಿಗಳಾ ಗಿವೆ. ಕೇರಳದಲ್ಲಿ ಹದಿನೈದು ದಿನಗಳು, ರಾಷ್ಟ್ರೀಯತೆ ಮತ್ತು ಮುಸ್ಲಿಮರು, ಕೈಯೂರಿನ ರೈತವೀರರು, ಸೂಫಿ ಸಂತರು, ಸೂಫಿ ಮಹಿಳೆಯರು, ಕೋಮು ಹಿಂಸೆ ನಿಯಂತ್ರಣಾ ಮಸೂದೆ, ಸೂಫಿ ಅಧ್ಯಾತ್ಮ ದರ್ಶನ ಸಹಿತ ಇನ್ನಿತರೆ ಮಹತ್ತ್ವದ ಕೃತಿಗಳನ್ನು ಅವರು ರಚಿಸಿದ್ದಾರೆ.
ಬೇರೂತಿನಿಂದ ಜರೂಸಲೇಮಿಗೆ, ಸಾದತ್ ಹಸನ್ ಮಂಟೊ ರವರ 'ದೇಶವಿಭಜನೆಯ ಕಥೆಗಳು', ಇಸ್ಮತ್ ಚುಗ್ತಾಯಿ [ಎಂ.ಐ.ಎಲ್.- ಕೇಂದ್ರ ಸಾಹಿತ್ಯ ಅಕಾಡೆಮಿ, 2013] ಮತ್ತಿತರ ಕೃತಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಟ್ಪಾಡಿಯವರ ಕೃತಿಗಳು ಹಿಂದಿ, ಗುಜರಾತಿ, ಮರಾಠಿ, ತಮಿಳು, ಬಂಗಾಳಿ, ಮಲಯಾಳ, ಇಂಗ್ಲಿಷ್ ಭಾಷೆಗೆ ತರ್ಜುಮೆಗೊಂಡಿವೆ.
ಸಾಮಾಜಿಕ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಅವರು 2007ರಲ್ಲಿ ಚಿಕ್ಕಮಗಳೂರಿನಲ್ಲಿ ಜರಗಿದ ಅಖಿಲಭಾರತ ಬ್ಯಾರಿಭಾಷಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.
ಪುರಸ್ಕಾರಗಳು: ರಾಷ್ಟ್ರೀಯ ಕಥಾ ಪ್ರಶಸ್ತಿ [ನೋಂಬು - 1991], ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು [ದಜ್ಜಾಲ - 2001], ಅನುವಾದ ಪ್ರಶಸ್ತಿ [ದೇಶವಿಭಜನೆಯ ಕಥೆಗಳು - 2010], ಸಾಹಿತ್ಯಶ್ರೀ ಪ್ರಶಸ್ತಿ [2017], ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ [2017], ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ [2001], ತುಳುಶ್ರೀ ಪ್ರಶಸ್ತಿ [2004], ಲಂಕೇಶ್ ಪ್ರಶಸ್ತಿ [2011], ಆಳ್ವಾಸ್ ವಿಶ್ವ ನುಡಿಸಿರಿ ಪ್ರಶಸ್ತಿ [2013], ಸದ್ಭಾವನಾ ಪ್ರಶಸ್ತಿ [ಸೂಫಿ ಸಂತರು-2015], ಡಾ. ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ [ಕಡವು ಮನೆ - 2015], ಇತ್ಯಾದಿಗಳು ಕಟ್ಪಾಡಿಯವರಿಗೆ ಸಂದ ಪ್ರಮುಖ ಪುರಸ್ಕಾರಗಳಾಗಿವೆ.







