ಡಿ.18 ರಂದು ಮನಪಾದಿಂದ ಜನಸ್ಪಂದನ ಕಾರ್ಯಕ್ರಮ

ಮಂಗಳೂರು, ಡಿ.15: ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಡಿ.18 ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಳಗ್ಗೆ 10.30ಕ್ಕೆ ಉದ್ಘಾಟನೆ ನೆರವೇರಲಿದ್ದು, ಶಾಸಕರಾದ ಡಿ. ವೇದವ್ಯಾಸ ಕಾಮತ್ ಮತ್ತು ಡಾ. ವೈ. ಭರತ್ ಶೆಟ್ಟಿ ಅವರು ನೇತೃತ್ವ ವಹಿಸಲಿದ್ದಾರೆ ಎಂದರು.
ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳಾದ ರಸ್ತೆ, ಚರಂಡಿ, ಒಳಚರಂಡಿ, ನೀರು, ನೀರಿನ ಬಿಲ್, ಉದ್ದಿಮೆ ಪರವಾನಗಿ, ಕಟ್ಟಡ/ಮಾರುಕಟ್ಟೆ/ವಾಣಿಜ್ಯ ಸಂಕೀರ್ಣ, ತ್ಯಾಜ್ಯ ವಿಲೇವಾರಿ, ಇ-ಖಾತ, ಕಟ್ಟಡ ತೆರಿಗೆ ಸಹಿತ ವಿವಿಧ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳಬಹುದು. ಜನರೊಡನೆ ನೇರವಾಗಿ ಭಾಗವಹಿಸಿ ಅಹವಾಲು ಸ್ವೀಕರಿಸಿ, ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಆರೋಗ್ಯ ವಿಭಾಗ, ಇಂಜಿನಿಯರಿಂಗ್ ವಿಭಾಗ, ನಗರ ಯೋಜನೆ ಮತ್ತು ಕಂದಾಯ ವಿಭಾಗಗಳ ಅಹವಾಲು ಸ್ವೀಕಾರಕ್ಕೆ ಪ್ರತ್ಯೇಕ ಕೌಂಟರ್ ಇರಲಿದೆ. ಸ್ವೀಕರಿಸಿದ ಅಹವಾಲು, ಸಮಸ್ಯೆಗಳು ಆನ್‌ಲೈನ್‌ನಲ್ಲಿ ನೋಂದಣಿಯಾಗುತ್ತದೆ. ಅದರ ಪ್ರಕಾರ ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಲಾಗುವುದು. ಇನ್ನುಳಿದವು 15 ದಿನಗಳೊಳಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಅದೇ ದಿನ ಬೆಳಗ್ಗೆ 10.30 ರಿಂದ 5 ಗಂಟೆಯವರೆಗೆ ಪುರಭವನದಲ್ಲಿ ಸ್ವ-ನಿಧಿ ಮೇಳ ನಡೆಯಲಿದೆ. ಬ್ಯಾಂಕ್‌ನವರೂ ಆಗಮಿಸಲಿದ್ದಾರೆ. ಪ್ರಥಮ ಹಂತದಲ್ಲಿ 10,000 ರೂ. ನಂತರ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವವರಿಗೆ ಬಡ್ಡಿ ಸಹಾಯ ಧನ ಸೌಲಭ್ಯದೊಂದಿಗೆ ಸಾಲ ಮರುಪಾವತಿಸಿದ ಬಳಿಕ ದ್ವಿತೀಯ ಹಂತದಲ್ಲಿ 20,000 ರೂ., ನಂತರ ತೃತೀಯ ಹಂತದಲ್ಲಿ 50,000 ರೂ. ಬ್ಯಾಂಕ್ ಸಾಲ ಸೌಲಭ್ಯ ದೊರೆಯಲಿದೆ. ಈ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡುವ ಸಾಲ ಸೌಲಭ್ಯವನ್ನು ಹಾಲು ಮತ್ತು ದಿನಪತ್ರಿಕೆ ವಿತರಕರು, ಡೋಬಿ ಮತ್ತು ಇಸ್ತ್ರಿ ಸೇವೆ, ಹಳೆಯ ಪಾತ್ರೆಗಳನ್ನು ವ್ಯಾಪಾರ ಮಾಡುವವರು, ಬಡಗಿ, ಚಮ್ಮಾರರು, ಬಿದಿರಿನ ಬುಟ್ಟಿ, ಬೊಂಬು ಬಾಸ್ಕೆಟ್, ಏಣಿ ವ್ಯಾಪಾರಸ್ಥರು, ಹೂವಿನ ಕುಂಡಗಳನ್ನು ಮಾಡುವವರು, ನೇಯ್ಗೆಗಾರರು, ಎಳನೀರು ಮಾರಾಟಗಾರರು, ಆಹಾರ ತಯಾರಿಸಿ ಮಾರಾಟ ಮಾಡುವವರು (ಕ್ಯಾಟರಿಂಗ್ ಸರ್ವಿಸ್)ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಕೂಡ ವಿಸ್ತರಿಸಲಾಗಿದೆ. ಅರ್ಹರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ವ್ಯಾಪಾರ ಮಾಡುವ ಫೋಟೋ ತರಬೇಕು ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಸುನೀತ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಭರತ್ ಕುಮಾರ್, ಲೋಹಿತ್ ಅಮೀನ್, ಗಣೇಶ್ ಇದ್ದರು.







