ಡಿ.19: ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಸಿಪಿಎಂ ದ.ಕ. ಜಿಲ್ಲಾಧಿಕಾರಿ ಕಚೇರಿ ಚಲೋ

ಮಂಗಳೂರು: ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಸಿಪಿಎಂ ದ.ಕ. ಜಿಲ್ಲಾ ಸಮಿತಿಯು ಡಿ.19ರಂದು ನಗರದಲ್ಲಿ ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿ ಚಲೋ ಹಾಗೂ ಬಹಿರಂಗ ಸಭೆಯನ್ನು ಆಯೋಜಿಸಿದೆ. ಅಂದು ಬೆಳಿಗ್ಗೆ 10ಕ್ಕೆ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಬಳಿ ಬಹಿರಂಗ ಸಭೆ ನಡೆಸಲಿದೆ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರುವರೆ ದಶಕಗಳಿಂದ ಜಿಲ್ಲೆಯನ್ನು ಬಿಜೆಪಿಯ ಸಂಸದರು ಪ್ರತಿನಿಧಿಸುತ್ತಿದ್ದಾರೆ. ಈ ಅವಧಿಯಲ್ಲಿ ವಿಧಾನಸಭೆ, ವಿಧಾನ ಪರಿಷತ್ ಚುನಾವಣೆ ಗಳಲ್ಲೂ ಬಿಜೆಪಿಯು ಸತತ ಗೆಲುವನ್ನು ಸಾಧಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಾವ ಪಕ್ಷಗಳಿಗೆ ಸೇರಿ ದ್ದರೂ ಜಿಲ್ಲೆಯ ಆಡಳಿತದ ಹಿಡಿತ ಬಿಜೆಪಿಯ ಕೈಯಲ್ಲೇ ಉಳಿದಿದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದರು.
ಸಿಪಿಎಂ ರಾಜ್ಯ ಸಮಿತಿ ಸದಸ್ಯ ವಸಂತ ಆಚಾರಿ ಮಾತನಾಡಿ ಸ್ವಾತಂತ್ರ್ಯಾ ನಂತರದ ಪ್ರಾರಂಭದ ಎರಡು ದಶಕದಲ್ಲಿ ನವಮಂಗಳೂರು ಬಂದರು, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳು, ಎನ್‌ಐಟಿಕೆ, ಕುದುರೆಮುಖ, ಎಂಸಿಎಫ್ ಮುಂತಾದ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಬಿಜೆಪಿ ಆಡಳಿತದ ಈ ಮೂರುವರೆ ದಶಕಗಳಲ್ಲಿ ಜನ ಸಾಮಾನ್ಯರ ಅಭಿವೃದ್ಧಿಯ ನಿಟ್ಟಿನಲ್ಲಿ ಜಿಲ್ಲೆಯು ಹಿನ್ನಡೆಯನ್ನು ಕಂಡಿದೆ. ಶಿಕ್ಷಣ, ಆರೋಗ್ಯ ವ್ಯಾಪಾರದ ಸರಕಾಗಿದೆ. ಉದ್ಯೋಗ ಸೃಷ್ಟಿಯ ಕೈಗಾರಿಕೆಗಳ ಸ್ಥಾಪನೆ ಸ್ಥಳೀಯ ಯುವಜನರಿಗೆ ಉದ್ಯೋಗದಲ್ಲಿ ಆದ್ಯತೆಯು ಕನಸಾಗಿ ಉಳಿದಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ವಿಮಾನ ನಿಲ್ದಾಣ, ಬಂದರ್ ಖಾಸಗಿಯವರ ಪಾಲಾಗಿದೆ. ವಸತಿ ಯೋಜನೆಗಳು ಪೂರ್ಣ ಸ್ಥಗಿತಗೊಂಡಿದೆ ಎಂದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ. ಸಂಸದರು ಬಹಿರಂಗವಾಗಿ 2000 ರೂ.ಗೆ ಮರಳು ಕೊಡುತ್ತೇವೆ ಎಂಬ ಮಾತಿನ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈವರೆಗೆ ಏನನ್ನೂ ಸಾಧಿಸಲು ಬಿಜೆಪಿಯ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿಯ ಶಾಸಕರುಗಳಿಗೆ ಸಾಧ್ಯವಾಗಲಿಲ್ಲ. ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಬೇಡಿಕೆಯನ್ನು ಈಡೇರಿಸಲಿಲ್ಲ. ಜಿಲ್ಲೆಯ ಎರಡೂವರೆ ಲಕ್ಷ ಬೀಡಿ ಕಾರ್ಮಿಕರು 10 ವರ್ಷದಿಂದ ಕನಿಷ್ಟ ಕೂಲಿ, ತುಟ್ಟಿಭತ್ತೆ ಸಿಗದೆ ವಂಚನೆಗೆ ಒಳಗಾಗಿದ್ದಾರೆ. ಕಟ್ಟಡ ಕಾರ್ಮಿಕರ ಸಮಸ್ಯೆ ಕೇಳುವವರಿಲ್ಲ. ಬಿಸಿಯೂಟ ಕಾರ್ಮಿಕರ ವೇತನವೂ ಏರಿಕೆಯಾಗಿಲ್ಲ, ಒಟ್ಟಿನಲ್ಲಿ ಜಿಲ್ಲೆಯ ಜನಸಾಮಾನ್ಯರ ಬೇಡಿಕೆಗಳನ್ನು ಸರಕಾರದ ಮುಂದಿಡಲು ದುಡಿಯುವ ಜನರ, ಜನಸಾಮಾನ್ಯರ, ವಿದ್ಯಾರ್ಥಿ, ಯುವಜನರ ಆಶೋತ್ತರಗಳಿಗೆ ಧ್ವನಿಯಾಗಲು ಈ ಮಹತ್ವದ ಹೋರಾಟವನ್ನು ಸಿಪಿಎಂ ಆಯೋಜಿಸಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕೃಷ್ಣ ಶೆಟ್ಟಿ, ಪದ್ಮಾವತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.







