ಎ.19ರಂದು ಕಣ್ಣಂಗಾರ್ ಉರೂಸ್: ಎ.ಪಿ. ಉಸ್ತಾದ್, ಯು.ಟಿ. ಖಾದರ್ ಭಾಗಿ

ಪಡುಬಿದ್ರಿ: ಹೆಜಮಾಡಿಯ ಕನ್ನಂಗಾರ್ ಜುಮ್ಮಾ ಮಸೀದಿಯ ಮುಂಭಾಗದಲ್ಲಿರುವ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್ ಕನ್ನಂಗಾರ್ ಉರೂಸ್ ಸಮಾರಂಭ ಎಪ್ರಿಲ್ 19ರಂದು ನಡೆಯಲಿದೆ.
ಉರೂಸ್ ಸಮಾರಂಭಕ್ಕೆ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಜನರು ಭಾಗವಹಿಸುತ್ತಾರೆ. ಎಂಟು ದಿನಗಳ ಕಾಲ ಕರ್ನಾಟಕ ಮತ್ತು ಕೇರಳದ ಧಾರ್ಮಿಕ ಗುರುಗಳು ಧಾರ್ಮಿಕ ಪ್ರವಚನದಲ್ಲಿ ಭಾಗವಹಿಸಿದ್ದು, ಸುಮಾರು 20ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಉರೂಸ್ ಸಮಾರಂಭ ದಲ್ಲಿ 25ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳವ ನಿರೀಕ್ಷೆ ಇದೆ.
19ರಂದು ಬೆಳಗ್ಗೆ ಸುಬಹಿ ನಮಾಜಿನ ಬಳಿಕ ಮೌಲೂದ್, ಸಂಜೆ ಸಂದಲ್ ಮೆರವಣಿಗೆ ನಡೆಯಲಿದೆ. ಸಂಜೆ 7ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಗುಲಾಂ ಮುಹಮ್ಮದ್ ಅಧ್ಯಕ್ಷತೆ ವಹಿಸಲಿದ್ದು, ಬದ್ರುಸ್ಸಾದಾತ್ ಅಸಯ್ಯದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ದುವಾ ನೆರವೇರಿಸಲಿದ್ದಾರೆ. ಶಾಫಿ ಸಅದಿ ಪ್ರಭಾಷಣ ಮಾಡಲಿದ್ದು, ಕನ್ನಂಗಾರ್ ಜುಮಾ ಮಸೀದಿ ಖತೀಬ್ ಅಶ್ರಫ್ ಸಖಾಫಿ, ಸಚಿವರಾದ ಮಾಂಕಾಳ ವೈದ್ಯ, ದಿನೇಶ್ ಗುಂಡುರಾವ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಮೊಯಿದಿನ್ ಬಾವಾ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಅದಾನಿ ಗ್ರೂಪ್‍ನ ಅಧ್ಯಕ್ಷ ಕಿಶೋರ್ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಅನಿವಾಸಿ ಉದ್ಯಮಿ ಝಕರಿಯಾ ಬಜ್ಪೆ, ಇನಾಯತ್ ಅಲಿ, ಬಿ.ಎಂ. ಶರೀಫ್, ಅಬ್ದುಲ್ ಹಮೀದ್ ಹಾಜಿ, ಎಚ್.ಬಿ. ಮುಹಮ್ಮದ್ ಮತ್ತಿತರರ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ರಕೀಬ್ ತಿಳಿಸಿದ್ದಾರೆ.