ಸೆ.19ರಂದು ಬಸವ ಸಂಸ್ಕೃತಿ ಅಭಿಯಾನ: ಉಮರ್ ಯುಎಚ್

ಮಂಗಳೂರು, ಸೆ.19: ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಜನಮನದಲ್ಲಿ ಬಿತ್ತುವ ಜನರ ಮನಸ್ಸುಗಳನ್ನು ಕಟ್ಟುವ ಜೊತೆಗೆ ಪರಸ್ಪರ ಬಾಂಧವ್ಯದ ಬೆಸುಗೆ ಹಾಕುವ ಸದುದ್ದೇಶದಿಂದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಆಶ್ರಯದಲ್ಲಿ ಕರ್ನಾಟಕ ರಾಜ್ಯದಾದ್ಯಂತ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ಮಂಗಳೂರಿನ ಕಾರ್ಯಕ್ರಮ ಸೆ.19ರಂದು ಉರ್ವಸ್ಟೋರ್‌ನ ತುಳುಭವನದಲ್ಲಿ ನಡೆಯಲಿದೆ ಎಂದು ಬಸವ ಸಂಸ್ಕೃತಿ ಅಭಿಯಾನದ ಸಂಚಾಲಕ ಉಮರ್.ಯುಎಚ್. ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 5 ರ ತನಕ ಬಸವ ಸಂಸ್ಕೃತಿ ಅಭಿಯಾನ ವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ವ್ಯಸನ ಮುಕ್ತ ಸಮ ಸಮಾಜದ ನಿರ್ಮಾಣ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವುದು ವಿದ್ಯಾರ್ಥಿ ಯುವಜನರಲ್ಲಿ ಅಧ್ಯಾತ್ಮದ ಅರಿವು ಮೂಡಿಸುವುದು, ಮಹಿಳೆಯರ ಘನತ ಕಾಪಾಡುವುದು ಮತ್ತು ವ್ಯಕ್ತಿತ್ವ ವಿಕಸನ. ಇವು ಅಭಿಯಾನದ ಮೂಲ ಆಶಯವಾಗಿದೆ ಎಂದರು.
ದ.ಕ ಜಿಲ್ಲಾ ಸಹಮತ ವೇದಿಕೆಯ ಆಶ್ರಯದಲ್ಲಿ ಮಂಗಳೂರಿನಲ್ಲಿ ಬೆಳಗ್ಗೆ 10:00ಕ್ಕೆ ಸ್ವಾಮೀಜಿಗಳ ಸಾರಥ್ಯದಲ್ಲಿ ವಿದ್ಯಾರ್ಥಿ ಯುವಜನರನ್ನು ಕೇಂದ್ರೀಕರಿಸಿ ‘ಬಸವಾದಿ ಶಿವಶರಣರ ವಚನ ಸಂದೇಶ’ ಎಂಬ ವಿಷಯದಲ್ಲಿ ಸಂವಾದ ನಡೆಯಲಿದೆ. ಮಧ್ಯಾಹ್ನ 3 ರಿಂದ ಲೇಡಿಹಿಲ್ ಬಳಿಯ ಶ್ರೀನಾರಾಯಣ ಗುರು ವೃತ್ತದಿಂದ ತುಳು ಭವನದ ತನಕ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ವರ್ಣರಂಜಿತ ಪಾದಯಾತ್ರೆ ನಡೆಯಲಿದ್ದು, ಸಂಜೆ 4:30ಕ್ಕೆ, ತುಳು ಭವನದಲ್ಲಿ ಸಾರ್ವಜನಿಕ ಸಮಾವೇಶ ಏರ್ಪಡಿಸಲಾಗಿದೆ ಮಾಹಿತಿ ನೀಡಿದರು.
ಸಂಜೆ 6.30ಕ್ಕೆ ವಚನ ಸಂಗೀತ ಮತ್ತು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆಯ ಶಿವಸಂಚಾರ ಸಾಣೇಹಳ್ಳಿ ತಂಡದಿಂದ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಲಿದೆ.
ಬಾಲ್ಕಿ ಹಿರೇಮಠ ಸಂಸ್ಥಾನದ ಡಾ ಬಸವಲಿಂಗ ಪಟ್ಟದೇವರು, ಕೂಡಲಸಂಗಮ ಬಸವ ಧರ್ಮಪೀಠದ ಡಾ.ಗಂಗಾ ಮಾತಾಜಿ, ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ, ಮೂಡಬಿದ್ರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿ, ಮೈಸೂರಿನ ಶ್ರೀ ಉರಿಲಿಂಗ ಪೆದ್ದಿಗಳ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ ವೈ ಎಸ್ ವಿ ದತ್ತ, ಮಂಗಳೂರು ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಗುರು ವಂ. ವಿಶಾಲ್ ಮೋನಿಸ್, ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಮೌಲಾನಾ ಯಹ್ಯಾ ತಂಳ್ ಮದನಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪುಸ್ತಕ ಬಿಡುಗಡೆ , ಬಹುಮಾನ ವಿತರಣೆ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ‘ಬಸವಣ್ಣ ಒರು ಹಯಾಲ್’ ಬ್ಯಾರಿ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್ ಮುಕುಂದರಾಜ್ ಬಿಡುಗಡೆ ಮಾಡಲಿರುವರು. ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ದ.ಕ. ಜಿಲ್ಲಾ ಮಟ್ಟದ ಸಮೂಹ ವಚನ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಉಮರ್.ಯು.ಎಚ್ ಮಾಹಿತಿ ನೀಡಿದರು.
ದ.ಕ. ಜಿಲ್ಲಾ ಸಹಮತ ವೇದಿಕೆ ಕೆ. ಎಸ್. ಜಯಪ್ಪ, ಮಂಗಳೂರು ಪ್ರದೇಶ ಕೆಥೋಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿ ಸೋಜ , ಕಾರ್ಯದರ್ಶಿ ವಿಲ್ಮಾ ಮೊಂತೆರೊ, ವಿಶ್ರಾಂತ ಪ್ರಾಧ್ಯಾಪಕಿ ಮೀನಾಕ್ಷಿ ರಾಮಚಂದ್ರ , ಆಮಿ ಆನಿ ಅಮ್ಚಿಂ ಮಂಗಳೂರು ಸಂಘಟನೆಯ ಅಧ್ಯಕ್ಷ ಡೆನಿಸ್ ಡಿ ಸಿಲ್ವ, ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಶಮೀಮಾ ಕುತ್ತಾರ್ ಮತ್ತು ಕಲ್ಲಚ್ಚು ಮಹೇಶ್ ಆರ್ ನಾಯಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







