ಜ.19ರಿಂದ 21ರವರೆಗೆ ಕರಾವಳಿ ಚಲನಚಿತ್ರ ಉತ್ಸವ

ಮಂಗಳೂರು, ಜ.14: ಹಲವು ವಿಶೇಷತೆಗಳೊಂದಿಗೆ ಪ್ರಸಕ್ತ ಸಾಲಿನ ಕರಾವಳಿ ಉತ್ಸವ ಜನಮನ್ನಣೆ ಗಳಿಸುತ್ತಿರುವ ಬೆನ್ನಲ್ಲೇ ಜಿಲ್ಲಾಡಳಿತವು ಈ ಬಾರಿ ತುಳು, ಕನ್ನಡ, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳ ಕರಾವಳಿ ಚಲನಚಿತ್ರ ಉತ್ಸವವನ್ನು ಜ.19ರಿಂದ 21ರವರೆಗೆ ಆಯೋಜಿಸಿದೆ.
ಭಾರತ್ ಸಿನೆಮಾಸ್‌ನಲ್ಲಿ ಒಟ್ಟು 18 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ತುಳು ಭಾಷೆಯ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಬಾರಿ 11 ತುಳು ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.19ರಂದು ಬೆಳಗ್ಗೆ 9 ಗಂಟೆಗೆ ಚಲನಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ ಎಂದರು.
ಇತ್ತೀಚೆಗೆ ನಾಡಿನಾದ್ಯಂತ ಭರ್ಜರಿ ಪ್ರದರ್ಶನ ಕಂಡಿರುವ ‘ಸು ಪ್ರೋಂ ಸೊ’ ಚಿತ್ರ ಸೇರಿದಂತೆ ಮೂರು ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ 10.15ರವರೆಗೆ ಚಿತ್ರ ಪ್ರದರ್ಶನ ನಡೆಯಲಿದೆ.
ಚಿತ್ರ ಪ್ರದರ್ಶನ ವೇಳಾಪಟ್ಟಿ
ಜ.19:
ಬೆಳಗ್ಗೆ 10.00: ಯೇಸ (ತುಳು)
ಮಧ್ಯಾಹ್ನ 1.30: ಚಂಡಿಕೋರಿ (ತುಳು)
ಸಂಜೆ 4.15: ಫೊಂಡ್ಚೊ ಮಿಸ್ತರ್ (ಕೊಂಕಣಿ)
ರಾತ್ರಿ 7.00: ಸು ಫ್ರಂ ಸೋ (ಕನ್ನಡ)
ರಾತ್ರಿ 10.15: ರಾಜ್ ಸೌಂಡ್ಸ್ ಅಂಡ್ ಲೈಟ್ಸ್ (ತುಳು)
ಜ.20:
ಬೆಳಗ್ಗೆ 10.30: ಪಿದಯಿ (ತುಳು)
ಮಧ್ಯಾಹ್ನ 1.30: ಪಿಲಿಬೈಲ್ ಯಮುನಕ್ಕ (ತುಳು)
ಸಂಜೆ 4.30: ಮೀರಾ (ತುಳು)
ರಾತ್ರಿ 7.00: ಗಿರ್‌ಗಿಟ್ (ತುಳು)
ರಾತ್ರಿ 7.30: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು (ಕನ್ನಡ)
ರಾತ್ರಿ 10.00: ಕೊರಮ್ಮ (ತುಳು)
ಜ.21:
ಬೆಳಗ್ಗೆ 11.00: ಬ್ಯಾರಿ ಚಲನಚಿತ್ರ
ಮಧ್ಯಾಹ್ನ 2.00: ದಬಕ್ ದಬಾ ಐಸಾ (ತುಳು)
ಸಂಜೆ 4.30: ಉಜ್ವಾಡು (ಕೊಂಕಣಿ)
ರಾತ್ರಿ 7.15: ದಸ್ಕತ್ (ತುಳು)
ರಾತ್ರಿ 7.30: ಗರೂಡ ಗಮನ ವೃಷಭ ವಾಹನ (ಕನ್ನಡ)
ರಾತ್ರಿ 10.00: ಉಳಿದವರು ಕಂಡಂತೆ (ಕನ್ನಡ)
ಜ.25ರಂದು ಶ್ವಾನ ಪ್ರದರ್ಶನ
ಕರಾವಳಿ ಉತ್ಸವದ ಅಂಗವಾಗಿ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಲಾಲ್‌ಬಾಗ್‌ನ ಕರಾವಳಿ ಉತ್ಸವ ಮೈದಾನದಲ್ಲಿ ಜ.25ರಂದು ಮಧ್ಯಾಹ್ನ 2 ಗಂಟೆಗೆ ಕುಡ್ಲ ಶ್ವಾನ ಪ್ರದರ್ಶನ ಆಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿವಿಧ ಜಿಲ್ಲೆಗಳಿಂದ ಸುಮಾರು 25 ತಳಿಗಳ 300 ಶ್ವಾನಗಳು ಭಾಗವಹಿಸುವ ನಿರೀಕ್ಷೆಯಿದೆ. ಲ್ಯಾಬ್ರಡಾರ್, ಗೋಲ್ಡನ್ ರಿಟ್ರೀವರ್, ಜರ್ಮನ್ ಶೆಫರ್ಡ್, ರಾಟ್‌ವೀಲರ್, ಬೀಗಲ್, ಸೈಬೀರಿಯನ್ ಹಸ್ಕಿ, ರಾಜಪಾಳ್ಯಂ, ಮಾಲ್ಟೀಸ್, ಚಿಹುವಾಹುವಾ, ಡಾಲ್ಮೇಶಿಯನ್, ಮುಧೋಳ್, ಪಗ್, ಡ್ಯಾಶ್‌ಹಂಡ್, ಡಾಬರ್‌ಮನ್, ಬಾಕ್ಸರ್, ಬುಲ್‌ಡಾಗ್, ಶಿಟ್ಜು, ಪಿಟ್‌ಬುಲ್, ಪೊಮೆರಿಯನ್, ಲ್ಯಾಸಾ ಅಪ್ಸೋ, ಕಾಕರ್ ಸ್ಪ್ಯಾನಿಯಲ್, ಗ್ರೇಟ್ ಡೇನ್ ಸೇರಿದಂತೆ ಸ್ಥಳೀಯ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.
ಪ್ರಥಮ ಬಾರಿಗೆ ಶ್ವಾನ ಪ್ರದರ್ಶನಕ್ಕೆ ಆನ್‌ಲೈನ್ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತ ಶ್ವಾನ ಮಾಲಕರು ಜ.23ರ ಸಂಜೆ 5 ಗಂಟೆಯೊಳಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಶ್ವಾನಗಳನ್ನು ತಳಿವಾರು ಹಾಗೂ ವಯಸ್ಸಿನ ಆಧಾರದಲ್ಲಿ ವಿಂಗಡಿಸಿ ಸ್ಪರ್ಧೆ ನಡೆಸಲಾಗುತ್ತದೆ. 3–6 ತಿಂಗಳು, 6–12 ತಿಂಗಳು ಹಾಗೂ 12 ತಿಂಗಳ ಮೇಲ್ಪಟ್ಟ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತದೆ. ಪ್ರತಿಯೊಂದು ವಿಭಾಗದ ಪ್ರಥಮ ಬಹುಮಾನ ವಿಜೇತರಿಗೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ. ಚಾಂಪಿಯನ್ ಸುತ್ತಿನಲ್ಲಿ ಪ್ರಥಮ ಬಹುಮಾನ ರೂ.25,000, ದ್ವಿತೀಯ ರೂ.20,000, ತೃತೀಯ ರೂ.15,000, ನಾಲ್ಕನೇ ರೂ.10,000 ಹಾಗೂ ಐದನೇ ರೂ.5,000 ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ. ಪೊಲೀಸ್ ಶ್ವಾನದಳದಿಂದ ವಿಶೇಷ ಪ್ರದರ್ಶನವೂ ನಡೆಯಲಿದೆ.
ಗೋಷ್ಠಿಯಲ್ಲಿ ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಕಾರ್ಬಾರಿ, ಅಪರ ಜಿಲ್ಲಾಧಿಕಾರಿ ರಾಜು, ಜಿಲ್ಲಾ ಯೋಜನಾ ನಿರ್ದೇಶಕ ಡಾ. ಸಂತೋಷ್ ಕುಮಾರ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು. ಈ ವೇಳೆ ಕರಾವಳಿ ಚಲನಚಿತ್ರ ಉತ್ಸವ ಹಾಗೂ ಶ್ವಾನ ಪ್ರದರ್ಶನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಶ್ವಾನಗಳೂ ಪ್ರದರ್ಶನದಲ್ಲಿ ಭಾಗಿ
ಶ್ವಾನ ಪ್ರದರ್ಶನದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಸಾಕು ಶ್ವಾನಗಳಾದ ಟೋರಾ ಮತ್ತು ಯುಕಿ ಹಾಗೂ ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಅವರ ಹೇಝಲ್ ಶ್ವಾನಗಳು ಭಾಗವಹಿಸಲಿವೆ. ಈ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ತಮ್ಮ ಶ್ವಾನಗಳನ್ನು ನೋಂದಣಿ ಮಾಡುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಟೋರಾ (4 ವರ್ಷ) ಲ್ಯಾಬ್ರಡಾರ್ ತಳಿಯದು, ಯುಕಿ (3 ವರ್ಷ) ಹಾಗೂ ಹೇಝಲ್ ಗೋಲ್ಡನ್ ರಿಟ್ರೀವರ್ ತಳಿಯ ಶ್ವಾನಗಳಾಗಿವೆ.
ಜ.17ಕ್ಕೆ ಜಾವೆದ್ ಅಲಿ, 18ಕ್ಕೆ ಲವಿಟಾ ಲೋಬೋ ಸಂಗೀತ ಸಂಜೆ
ಕರಾವಳಿ ಉತ್ಸವದ ಅಂಗವಾಗಿ ಜ. 17ರಂದು ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವ ಬ್ಲ್ಯೂಫ್ಲ್ಯಾಗ್ ಬೀಚ್ ಆದ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ನಡೆಯಲಿದೆ. ಇದೇ ವೇಳೆ 17ರಂದು ಸಂಜೆ ಖ್ಯಾತ ಹಿನ್ನೆಲೆ ಗಾಯಕ ಜಾವೆದ್ ಅಲಿ ಹಾಗೂ ಜ. 18ರಂದು ಖ್ಯಾತ ಹಿನ್ನೆಲೆ ಗಾಯಕಿ ಲವಿಟಾ ಲೋಬೋ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಜ.3 ಮತ್ತು 4ರಂದು ತಣ್ಣೀರುಬಾವಿ ಬೀಚ್‌ನಲ್ಲಿ ನಡೆದ ಕೈಲಾಶ್ ಕೇರ್ ಕಾರ್ಯಕ್ರಮಕ್ಕೆ ಸುಮಾರು 11 ಸಾವಿರದಷ್ಟು ಹಾಗೂ ಮತ್ತು ವಿಜಯ ಪ್ರಕಾಶ್ ಅವರ ಸಂಗೀತ ಕಾರ್ಯಕ್ರಮಕ್ಕೆ 11500 ಸಾವಿರದಷ್ಟು ಜನ ಸೇರಿದ್ದರು. ಪೊಲೀಸ್ ಇಲಾಖೆ ಅಚ್ಚುಕಟ್ಟಿನ ಸುಗಮ ಸಂಚಾರ ವ್ಯವಸ್ಥೆಯನ್ನು ಕೈಗೊಂಡಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾರ್ಯಕ್ರಮಕ್ಕೆ ಪಾರ್ಕಿಂಗ್ ವ್ಯವಸ್ಥೆಯನ್ನು ಈಗಾಗಲೇ ನಿರ್ವಹಿಸಿರುವಂತೆ ಮುಂದಿನ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗುವುದು. ಸುಲ್ತಾನ್ ಬತ್ತೇರಿಯಿಂದ ದೋಣಿ ಮೂಲಕವೂ ಸಾರ್ವಜನಿಕರು ಆಗಮಿಸಬಹುದಾಗಿದೆ. ಅಲ್ಲಿ ಕಾರ್ಯಕ್ರಮಕ್ಕೆ ಸ್ಥಳಕ್ಕೆ ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆ ಮಾಡಲಾಗುವುದು. ಕಳೆದ ಬಾರಿಯೂ ಈ ವ್ಯವಸ್ಥೆ ಮಾಡಲಾಗಿತ್ತು. ಈ ವಾಹನ ವ್ಯವಸ್ಥೆ ಉಚಿತವಾಗಿರಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದು ಜಿ.ಪಂ. ಸಿಇಒ ವಿನಾಯಕ ನರ್ವಾಡೆ ತಿಳಿಸಿದರು.







