ಫೆ.20ರಿಂದ ಕುಡುಂಬೂರು ನಡುಗಿರಿ ಬಂಡಿ ನೇಮೋತ್ಸವ

ಸುರತ್ಕಲ್:- ಇಲ್ಲಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಮುಂಗಾರು ಬಸ್ ನಿಲ್ದಾಣದ ಸಮೀಪದಲ್ಲಿರುವ ಕುಡುಂಬೂರು ನಡುಗಿರಿ ಗ್ರಾಮದೈವ ಜಾರಂದಾಯ ಹಾಗೂ ಸಪರಿವಾರ ದೈವಗಳ ದೈವಸ್ಥಾನದ ಬಂಡಿ ನೇಮೋತ್ಸವವು ಫೆ.20 ರಿಂದ ಆರಂಭಗೊಂಡು ಫೆ.23 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಫೆ.20 ರಂದು ಮಧ್ಯಾಹ್ನ 3ಗಂಟೆಗೆ ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಕುಡುಂಬೂರು ನಡುಗಿರಿ ಗ್ರಾಮದೈವ ಜಾರಂದಾಯ ಹಾಗೂ ಸಪರಿವಾರಗಳ ದೈವಸ್ಥಾನದವರೆಗೆ ದೈವಗಳ ಬಂಡಿ ಹಾಗೂ ಆಭರಣಗಳ ಬೃಹತ್ ಮೆರವಣಿಗೆ ಹೊರಡಲಿರುವುದು.
ಫೆ.21ರಂದು ಬೆಳಿಗ್ಗೆ 8ಕ್ಕೆ ಅನ್ನಪೂರ್ಣೇಶ್ವರೀ ಅಮ್ಮನವರಿಗೆ ಪೂಜೆ, ಹೊಳ್ಳರ ಚಾವಡಿಯಲ್ಲಿ ಜಾರಂದಾಯ ಸಪರಿವಾರ ದೈವಗಳಲ್ಲಿ ಪ್ರಾರ್ಥನೆ ಹಾಗೂ ನಾಗದೇವರಿಗೆ ತಂಬಿಲ ಸೇವೆ. ಸಾಯಂಕಾಲ 5 ಗಂಟೆಗೆ ದೈವಗಳ ಭಂಡಾರ ಏರುವುದು. ರಾತ್ರಿ 7.30ಕ್ಕೆ "ಮೈಸಂದಾಯ ದೈವದ ನೇಮೋತ್ಸವ", ರಾತ್ರಿ 8.30 ಕ್ಕೆ "ಕಾಂತೇರಿ ಜುಮಾದಿ, ಸಾರಾಳ ಜುಮಾದಿ ಬಂಟ ದೈವಗಳ ಬಂಡಿ ನೇಮೋತ್ಸವ" ನಡೆಯಲಿದೆ.
ಫೆ.22 ರಂದು ಮಧ್ಯಾಹ್ನ 12ಕ್ಕೆ "ಅನ್ನಪೂರ್ಣೇಶ್ವರೀ ಅಮ್ಮನವರಿಗೆ ವಿಶೇಷ ಪೂಜೆ", ಹಾಗೂ 12.30 ರಿಂದ 3.00 ರ ತನಕ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರನಂದ ಸ್ವಾಮೀಜಿಗಳು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.
ಅತಿಥಿಗಳಿಗೆ ಗೌರವ ಪೂರ್ವಕ ಸನ್ಮಾನ, ಅಭಿನಂದನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿರುವುದು. ರಾತ್ರಿ 9ಕ್ಕೆ ಶ್ರೀ ಜಾರಂದಾಯ ಬಂಟ ದೈವಗಳ ಬಂಡಿ ನೇಮೋತ್ಸವ ನಡೆಯಲಿದೆ.
ಫೆ.23 ರಂದು ರಾತ್ರಿ 7 ಗಂಟೆಗೆ "ಪಿಲಿಚಂಡಿ ದೈವದ ಎಣ್ಣೆಬೂಲ್ಯ" ರಾತ್ರಿ 10 ಗಂಟೆಗೆ "ಪಿಲಿಚಂಡಿ ದೈವದ ಬಂಡಿ ನೇಮೋತ್ಸವ" ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







