ಜೂ.23: ದ.ಕ.ಜಿಲ್ಲಾದ್ಯಂತ ಬಿಜೆಪಿ ಪ್ರತಿಭಟನೆ

ಮಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಮರೀಚಿಕೆಯಾಗಿದೆ. ಜನರ ಮೂಲಭೂತ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಇದನ್ನು ಖಂಡಿಸಿ ಜೂ.23ರಂದು ಬೆಳಗ್ಗೆ 10ಕ್ಕೆ ದ.ಕ. ಜಿಲ್ಲೆಯ ಎಲ್ಲಾ ಗ್ರಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಂದೆ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಕನಿವೇಶನ ಮಂಜೂರಾತಿಯ 9/11 ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. 9/11ಗೆ ಸಂಬಂಧಿಸಿ ಮುಡಾದಲ್ಲಿ 620 ಅರ್ಜಿ, ಪುಡಾದಲ್ಲಿ 120 ಅರ್ಜಿಯು ಕಳೆದ ಮೂರು ತಿಂಗಳಿನಿಂದ ಬಾಕಿ ಇದೆ. ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ ಸಹಿತ ಸರಕಾರದ ವಿವಿಧ ಪಿಂಚಣಿ ಯೋಜನೆಗಳ 42,184 ಫಲಾನುಭವಿಗಳಿಗೆ ಯೋಜನೆ ಪುನರ್‌ಪರಿಶೀಲನೆಗೆ ನೋಟಿಸ್ ನೀಡಲಾಗಿದೆ. ಅರ್ಹರಿಗೆ ಆರು ತಿಂಗಳಿನಿಂದ ಪಿಂಚಣಿ ಸೌಲಭ್ಯ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ 2584 ಆಶ್ರಯ ಮನೆ ಮಂಜೂರಾಗಿತ್ತು. ಈ ಬಾರಿ ಯಾವುದೇ ಮನೆ ಮಂಜೂರಾಗಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಉಳ್ಳಾಲಕ್ಕೆ 358 ಮನೆ ಬಂದಿದ್ದರೆ, ಕಾಂಗ್ರೆಸ್ ಸರಕಾರದಲ್ಲಿ 16 ಮನೆ ಮಾತ್ರ ಮಂಜೂರಾಗಿದೆ. ಸುಳ್ಯದಲ್ಲಿ ಬಿಜೆಪಿ ಅವಧಿಯಲ್ಲಿ 1,500 ಮನೆ ಸಿಕ್ಕಿತ್ತು, ಕಾಂಗ್ರೆಸ್ ಸರಕಾರದಿಂದ ಏನೂ ಸಿಕ್ಕಿಲ್ಲ. ಪುತ್ತೂರಿಗೆ ಬಿಜೆಪಿ ಅವಧಿಯಲ್ಲಿ 1 ಸಾವಿರಕ್ಕೂ ಅಧಿಕ ಮನೆ ದೊರೆತಿದ್ದರೆ, ಕಾಂಗ್ರೆಸ್ ಅವಧಿಯಲ್ಲಿ 250 ಮನೆ ಮಾತ್ರ ಸಿಕ್ಕಿದೆ. ಮೂಡುಬಿದಿರೆಗೆ 577, ಬೆಳ್ತಂಗಡಿಯಲ್ಲಿ 2,036 ಮನೆಯು ಬಿಜೆಪಿ ಅವಧಿಯಲ್ಲಿ ದೊರೆತಿದ್ದರೆ, ಕಾಂಗ್ರೆಸ್ ಸರಕಾರ ಬಂದ ಬಳಿಕ ಯಾವುದೇ ಮನೆ ಮಂಜೂರಾಗಿಲ್ಲ ಎಂದು ಸತೀಶ್ ಕುಂಪಲ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಪ್ರಮುಖರಾದ ಸುನೀಲ್ ಆಳ್ವ, ಸಂಜಯ ಪ್ರಭು, ಪ್ರಭಾಕರ ಪ್ರಭು, ಸೀತಾರಾಮ ಬಿ.ಎಸ್. ಉಪಸ್ಥಿತರಿದ್ದರು.







