ಜ.26ರಂದು ಎಸ್‌ಕೆಎಸ್‌ಎಸ್‌ಎಫ್‌ನಿಂದ ಮಾನವ ಸರಪಳಿ

ಮಂಗಳೂರು: ಗಣರಾಜ್ಯೋತ್ಸವ ಪ್ರಯುಕ್ತ ಜ.26ರಂದು ಎಸ್‌ಕೆ ಎಸ್‌ಎಸ್‌ಎಫ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ಮಂಗಳೂರಿನ ರಾಜಾಜಿ ಪಾರ್ಕ್‌ನಲ್ಲಿ ಸಂಜೆ 4ಗಂಟೆಗೆ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ.
ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್‌ಕೆ ಎಸ್‌ಎಸ್‌ಎಫ್ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ಪ್ರಧಾನ ಕಾರ್ಯದರ್ಶಿಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಅವರು ಪ್ರತಿ ವರ್ಷ ಗಣರಾಜ್ಯೋತ್ಸವ ದಿನದಿಂದ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿ ದೇಶದ 16 ರಾಜ್ಯಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಳಗ್ಗೆ 9:30ಕ್ಕೆ ರಾಜಾಜಿಪಾರ್ಕ್‌ನಲ್ಲಿ ಎಂ.ಎಚ್. ಹಾಜಿ ಅಡ್ಡೂರು ಧ್ವಜಾರೋಹನ ನೆರವೇರಿಸುವರು. ಮಧ್ಯಾಹ್ನ 2 ಗಂಟೆಗೆ ಬಾವುಟಗುಡ್ಡೆಯ ಮಸೀದಿಯ ವಠಾರದಿಂದ ರಾಜಾಜಿಪಾರ್ಕ್ ತನಕ ದಫ್, ಸ್ಕೌಟ್ ಹಾಗೂ ಫ್ಲವರ್ ಶೋ ಒಳಗೊಂಡ ಆಕರ್ಷಕ ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮಾನವ ಸರಪಳಿ ಬಳಿಕ ರಾಜಾಜಿ ಪಾರ್ಕ್‌ನಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಯೀದ್ ಅಮೀರ್ ತಂಙಳ್ ಕಿನ್ಯ, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್‌ನ ರಾಜ್ಯಾಧ್ಯಕ್ಷ ಡಾ.ಯು.ಟಿ. ಇಫ್ತಿಕರ್ ಅಲಿ, ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ, ಅಂತರ್ ಧರ್ಮ ಸಂವಾದ ಆಯೋಗ ಮಂಗಳೂರು ಧರ್ಮ ಪ್ರಾಂತದ ಕಾರ್ಯದರ್ಶಿ ಫಾ. ರಿಚರ್ಡ್ ಡಿ ಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತಿತರರು ಭಾಗವಹಿಸಲಿದ್ದಾರೆ. ಖ್ಯಾತ ವಾಗ್ಮಿ ಇಕ್ಬಾಲ್ ಬಾಳಿಲ ಪ್ರಧಾನ ಭಾಷಣ ಮಾಡಲಿರುವರು ಎಂದು ತಿಳಿಸಿದರು.
ಸುಮಾರು 2ಸಾವಿರಕ್ಕೆ ಅಧಿಕ ಮಂದಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾನವ ಸರಪಳಿ ಸ್ವಾಗತ ಸಮಿತಿಯ ಅಧ್ಯಕ್ಷ ಎನ್.ಕೆ.ಅಬೂಬಕರ್, ಕನ್ವೀನರ್ ಜಲೀಲ್ ಕುದ್ರೋಳಿ, ಎಸ್‌ಕೆ ಎಸ್‌ಎಸ್‌ಎಫ್ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ವರ್ಕಿಂಗ್ ಸೆಕ್ರೆಟರಿ ಬದ್ರುದ್ದೀನ್ ಕುಕ್ಕಾಜೆ ಉಪಸ್ಥಿತರಿದ್ದರು.







