ಜೂ.27: ಎಚ್.ಎಮ್. ಪೆರ್ನಾಲ್ ಅವರ 4ನೆ ಕವನ ಸಂಕಲನ ʼಜನೆಲ್ʼ ಬಿಡುಗಡೆ

ಎಚ್.ಎಮ್. ಪೆರ್ನಾಲ್
ಮಂಗಳೂರು: ಕೊಂಕಣಿ ಕವಿ, ವಿಮರ್ಶಕ ಎಚ್.ಎಮ್. ಪೆರ್ನಾಲ್ ಅವರ ನಾಲ್ಕನೆಯ ಕವನ ಸಂಕಲನ ಜನೆಲ್ (ಕಿಟಕಿ) ಜೂ.27ರಂದು ಸಂಜೆ 4.30ಕ್ಕೆ ಮಂಗಳೂರಿನ ಎಂ.ಸಿ.ಸಿ. ಬ್ಯಾಂಕ್ ಆಡಳಿತ ಸೌಧ ಸಭಾಂಗಣದಲ್ಲಿ ಜ್ಞಾನಪೀಠ ಪುರಸ್ಕೃತ ಕೊಂಕಣಿ ಸಾಹಿತಿ ದಾಮೋದರ ಮಾವಜೋ ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ, ಕೊಂಕಣಿ ಭಾಷಾ ಸಲಹಾ ಮಂಡಳಿ ಸಂಚಾಲಕ ಕವಿ ಮೆಲ್ವಿನ್ ರೊಡ್ರಿಗಸ್ ಪುಸ್ತಕ ಪರಿಚಯ ಮಾಡಲಿದ್ದಾರೆ. ವಿಶನ್ ಕೊಂಕಣಿ ಪ್ರವರ್ತಕರೂ, ಅನಿವಾಸಿ ಭಾರತೀಯ ಉದ್ಯಮಿ ಹಾಗೂ ದಾನಿ ಮೈಕಲ್ ಡಿಸೊಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಅಖಿಲ ಭಾರತೀಯ ಕೊಂಕಣಿ ಪರಿಷದ್ ಪ್ರಧಾನ ಕಾರ್ಯದರ್ಶಿ ಸ್ನೇಹಾ ಸಬನೀಸ ಮತ್ತು ಕವಿತಾ ಟ್ರಸ್ಟ್ ಅಧ್ಯಕ್ಷ ಕಥೆಗಾರ ಕಿಶೂ, ಬಾರ್ಕೂರ್ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.
ಜನೆಲ್ (ಕಿಟಕಿ) - ಕಳೆದ ನಾಲ್ಕು ದಶಕಗಳಿಂದ ಕೊಂಕಣಿ, ಕನ್ನಡದಲ್ಲಿ ಬರೆಯುತ್ತಿರುವ ಕವಿ / ಪತ್ರಕರ್ತ ಎಚ್.ಎಮ್. ಪೆರ್ನಾಲ್ ಅವರ ನಾಲ್ಕನೇ ಕವನ ಸಂಕಲನವಾಗಿದ್ದು, ಈ ಹಿಂದೆ ಮೂರು ಕವನ ಸಂಕಲನ, ಎರಡು ಕಥಾ ಸಂಕಲನ ಮತ್ತು ’ಕೊಂಕಣಿ ಕಾವ್ಯ - ರೂಪಕಗಳು’ ಎಂಬ ವಿಮರ್ಶಾ ಸಂಗ್ರಹವನ್ನು ಪ್ರಕಟಿಸಿದ್ದಾರೆ.
’ಬೀಗ್ ಆನಿ ಬಿಗಾತ್’ ಕಥಾ ಸಂಗ್ರಹಕ್ಕೆ ವಿಮಲಾ ವಿ. ಪೈ ವಿಶ್ವ ಕೊಂಕಣಿ ಉತ್ತಮ ಸಾಹಿತ್ಯ ಕೃತಿ ಪುರಸ್ಕಾರ, ’ಕೊಂಕಣಿ ಕಾವ್ಯ ರೂಪಕಗಳು’ ವಿಮರ್ಶಾ ಪುಸ್ತಕಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಗೋವಾ ಕೊಂಕಣಿ ಅಕಾಡೆಮಿ ಪುರಸ್ಕಾರಗಳು ಲಭಿಸಿವೆ.
ಎಚ್.ಎಮ್. ಪೆರ್ನಾಲ್ ಸದ್ಯ ಕಿಟಾಳ್ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಸಂಪಾದಕ, ಆರ್ಸೊ ಕೊಂಕಣಿ ಸಾಹಿತ್ಯ ಪತ್ರಿಕೆಯ ಪ್ರಕಾಶಕ ಮತ್ತು ಮೈಕಲ್ ಡಿಸೊಜಾ ವಿಶನ್ ಕೊಂಕಣಿ ಪುಸ್ತಕ ಅನುದಾನ ಯೋಜನೆಯ ಪ್ರಧಾನ ಸಂಪಾದಕರಾಗಿದ್ದಾರೆ.







