ಡಿಸೆಂಬರ್ 14ರಿಂದ 17ರವರೆಗೆ 29ನೇ ವರ್ಷದ 'ಆಳ್ವಾಸ್ ವಿರಾಸತ್' 2023
Alva's Virasat 2023

ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವೈಭವದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ಡಿಸೆಂಬರ್ 14, 15, 16 ಮತ್ತು 17ನೇ ದಿನಾಂಕಗಳಂದು ನಾಲ್ಕು ದಿನಗಳ ಕಾಲ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ.
ಈ ವರ್ಷ ಆಳ್ವಾಸ್ ವಿರಾಸತ್‍ಗೆ 29ನೇ ವರ್ಷವಾಗಿದ್ದು ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ, ಸಂಸ್ಕೃತಿ ಪ್ರಿಯರಿಗೆ ರಸದೌತಣವನ್ನು ನೀಡಲು ಯೋಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದು ‘ಆಳ್ವಾಸ್ ವಿರಾಸತ್ 2023’ ಅತ್ಯಂತ ಯಶಸ್ವಿ ಉತ್ಸವವಾಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ.
ಡಿಸೆಂಬರ್ 14 ಗುರುವಾರ ದಂದು ಪ್ರಾರಂಭವಾಗಿ 17 ನೇ ತಾರೀಕಿನಂದು ಭಾನುವಾರ ಮುಕ್ತಾಯಗೊಳ್ಳಲಿದೆ. 50 ಸಾವಿರಕ್ಕಿಂತ ಹೆಚ್ಚಿನ ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಅನುವಾಗುವಂತಹ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ನಡೆಯಲಿದ್ದು, ಪ್ರತಿದಿನ ಸಾಯಂಕಾಲ 6.00 ಗಂಟೆಗೆ ಪ್ರಾರಂಭವಾಗುವ ಈ ಉತ್ಸವವು ರಾತ್ರಿ 9.30ಕ್ಕೆ ಮುಕ್ತಾಯಗೊಳ್ಳುತ್ತದೆ.
ನಾಲ್ಕು ದಿನಗಳ ಕಾಲ ನಡೆಯುವ ರಾಷ್ಟೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ 2023ಕ್ಕೆ ಸಂಸ್ಕೃತಿ ಪ್ರಿಯರೂ, ಕಲಾ ಪ್ರೇಮಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವದ ಯಶಸ್ಸಿಗೆ ಸಹಕರಿಸಬೇಕೆಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







