ಜು.3: ಕೆಂಪುಕಲ್ಲಿನ ಕೋರೆ ಬಂದ್ ಖಂಡಿಸಿ ಪ್ರತಿಭಟನೆ

ಬಿ.ಸಿ.ರೋಡ್, ಜು.27: ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ದ.ಕ.ಜಿಲ್ಲೆಯಲ್ಲಿ ಕೆಂಪುಕಲ್ಲು ಪಾಯಗಳು ಬಂದ್ ಆಗಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಕೆಂಪುಕಲ್ಲು ಕೋರೆ ಹಾಗೂ ಲಾರಿ ಮಾಲಕರ ಒಕ್ಕೂಟದ ಸಮಾಲೋಚನಾ ಸಭೆಯು ಬಿ.ಸಿ.ರೋಡಿನ ಖಾಸಗಿ ಸಭಾಂಗಣದಲ್ಲಿ ನಡೆಯಿತು.
ಜೂ.30ರಂದು ನಡೆಯಲಿರುವ ಕೆಡಿಪಿ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಜು.3ರಂದು ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅನಿವಾರ್ಯವಾದರೆ ಉಪವಾಸ ಸತ್ಯಾಗ್ರಹ ನಡೆಸುವ ಮತ್ತು ಅಗತ್ಯಬಿದ್ದರೆ ಹೈಕೋರ್ಟ್‌ಗೆ ಮೊರೆ ಹೋಗುವ ಬಗ್ಗೆ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆಂಪುಕಲ್ಲು ಪಾಯ ಹಾಗೂ ಲಾರಿ ಮಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ ಮಾತನಾಡಿ ಕೇರಳದಲ್ಲಿ ಟನ್ ಕಲ್ಲಿಗೆ ರಾಯಲ್ಟಿ 42 ರೂ.ಇದ್ದಾಗ ಅಲ್ಲಿ ನಡೆದ ಹೋರಾಟದ ಫಲವಾಗಿ 32 ರೂ.ಗೆ ಇಳಿಯಿತು. ಅಲ್ಲದೆ ಜಿಪಿಎಸ್ ವ್ಯವಸ್ಥೆಯನ್ನೂ ರದ್ದುಪಡಿಸಲಾಗಿದೆ. ಆದರೆ ಕರ್ನಾಟಕದಲ್ಲಿ 97 ರೂ. ಇದ್ದ ರಾಯಲ್ಟಿ ಏಕಾಏಕಿ 254 ರೂ.ಗೆ ಏರಿಸಲಾಗಿದ್ದು, ಜಿಪಿಎಸ್ ವ್ಯವಸ್ಥೆ ಯಿಂದಲೂ ಸಂಕಷ್ಟ ಎದುರಾಗಿದೆ. ಕೇರಳದಲ್ಲಿ ಕೆಂಪುಕಲ್ಲು ಕೋರೆಯ ಸಮಸ್ಯೆ ನಿವಾರಣೆಗಾಗಿ ಉಪವಾಸ ಸತ್ಯಾಗ್ರಹ ನಡೆದ ಸಂದರ್ಭ ದ.ಕ. ಜಿಲ್ಲಾ ಸಂಘ ಎಲ್ಲಾ ರೀತಿಯ ಸಹಕಾರ ನೀಡಿದೆ. ಆದರೆ ಇದೀಗ ಜಿಲ್ಲೆಯಲ್ಲಿ ಸಮಸ್ಯೆ ಬಂದಾಗ ಕೇರಳದಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎಂದರು.
ಸಂಘದ ಜಿಲ್ಲಾ ಕೋಶಾಧಿಕಾರಿ ರಾಮ ಮುಗರೋಡಿ, ಮುಡಿಪು ವಲಯಾಧ್ಯಕ್ಷ ವಿಶ್ವನಾಥ್ ರೈ, ಕೈಕಂಬ ವಲಯಾಧ್ಯಕ್ಷ ಧೀರಜ್ ಅಮೀನ್, ಮೂಡುಬಿದಿರೆ ವಲಯಾಧ್ಯಕ್ಷ ಪ್ರವೀಣ್ ಡಿಸೋಜ, ಲಾರಿ ಮಾಲಕರ ಸಂಘದ ಮೂಡುಬಿದಿರೆ ವಲಯಾಧ್ಯಕ್ಷ ರವಿಶಂಕರ್ ಮಿಜಾರ್, ವಿಟ್ಲ ವಲಯಾಧ್ಯಕ್ಷ ಸುಧೀರ್ ಕೋಟ್ಯಾನ್, ಬಂಟ್ವಾಳ ವಲಯಾಧ್ಯಕ್ಷ ಮೋಹನ್ ಶೆಟ್ಟಿ, ಎಕ್ಕಾರು ವಲಯಾಧ್ಯಕ್ಷ ಗಣೇಶ್ ಶೆಟ್ಟಿ, ಪುತ್ತೂರು ವಲಯಾಧ್ಯಕ್ಷ ಹೇಮಚಂದ್ರ, ಸುಳ್ಯ ವಲಯಾಧ್ಯಕ್ಷ ಪ್ರಕಾಶ್ ಅಡ್ಕಾರ್, ಕಿನ್ನಿಗೋಳಿ ವಲಯಾಧ್ಯಕ್ಷ ಗೋಪಾಲ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ರೈ ಪಜೀರ್ ಕಾರ್ಯಕ್ರಮ ನಿರೂಪಿಸಿದರು.







