ಫೆ.3ರಿಂದ ಕಾಂಚನದಲ್ಲಿ 'ಕಾಂಚನೋತ್ಸವ 2024'

ಡಾ. ಶಿವರಾಮನ್
ಪುತ್ತೂರು: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಅರ್ಪಿಸುವ 70ನೇ ವರ್ಷದ 'ಕಾಂಚನೋತ್ಸವ 2024' ಫೆ.3 ಮತ್ತು 4ರಂದು ಸಂಗೀತ ಕ್ಷೇತ್ರವೆಂದೂ, ಕರ್ನಾಟಕದ ತಿರುವೈಯ್ಯಾರ್ ಎಂದೂ ಪ್ರಸಿದ್ಧಿ ಪಡೆದಿರುವ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಕಾಂಚನದ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ನಡೆಯಲಿದ್ದು ಖ್ಯಾತ ವಿದ್ವಾಂಸರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
70ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರುಗಳಾದ ಸಂಗೀತರತ್ನ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂರವರ ಪುಣ್ಯ ದಿನಾಚರಣೆಯೂ ನಡೆಯಲಿದೆ.
ಫೆ.3ರಂದು ಮಧ್ಯಾಹ್ನ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಫೆ.4ರಂದು ವೇ.ಬ್ರ.ನಾರಾಯಣ ಬಡಕಿಲ್ಲಾಯರ ನೇತೃತ್ವದಲ್ಲಿ ಬೆಳಿಗ್ಗೆ ಗಣಹೋಮ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಉಂಛವೃತ್ತಿ ಸಂತ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಮತ್ತು ದಿವ್ಯನಾಮ ಸಂಕೀರ್ತನೆಗಳ ವಾದ್ಯ ಗಾಯನ ಭಜನೆಯೊಂದಿಗೆ ಸಂಗೀತ ನಡಿಗೆ ಕಾಂಚನ ಮನೆಯಿಂದ ಸಂಗೀತ ಶಾಲೆಯ ತನಕ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಶ್ರೀ ಪುರಂದರ ದಾಸರ ಪಿಳ್ಳಾರಿ ಗೀತೆಗಳು ಮತ್ತು ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿಗಾನ, 11ರಿಂದ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಫೆ.4ರಂದು ಸಂಜೆ 6.30ರಿಂದ ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದ್ದು ವಿದ್ವಾನ್ ಭರತ್ ಸುಂದರ್ ಅವರು ಗಾಯನ, ವಿದ್ವಾನ್ ಮೈಸೂರು ಕಾರ್ತಿಕ್ ಅವರು ವಯೊಲಿನ್, ಪದ್ಮವಿಭೂಷಣ ಸಂಗೀತ ಕಲಾನಿಧಿ ವಿದ್ವಾನ್ ಡಾ.ಉಮಯಾಲ್ಪುರಂ ಕೆ.ಶಿವರಾಮನ್ ಅವರು ಮೃದಂಗ ಹಾಗೂ ವಿದ್ವಾನ್ ಗಿರಿಧರ ಉಡುಪ ಅವರು ಘಟಂನಲ್ಲಿ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯ ಮೃದಂಗದಲ್ಲಿ ಪದ್ಮವಿಭೂಷಣ 90ರ ಹರೆಯದ ಮಹಾಮೇರು ವಿದ್ವಾಂಸ ಡಾ. ಉಮಯಾಲಪುರಂ ಕೆ.ಶಿವರಾಮನ್ ಅವರು ಭಾಗವಹಿಸುತ್ತಿರುವುದು ಸಂಗೀತ ಪ್ರಿಯರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಡಾ.ಉಮಯಾಲಪುರಂ ಅವರು ಭಾರತೀಯ ಸಂಗೀತ ಕ್ಷೇತ್ರದ ಮಹಾದಿಗ್ಗಜ. ಎಲ್.ಎಲ್.ಬಿ. ಕಾನೂನಿನ ಡಿಗ್ರಿಯ ಅಂತಿಮ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದರೂ, ಸಂಗೀತದಲ್ಲೇ ತಮ್ಮ ಹೃದಯವನ್ನಿಟ್ಟ ಮೇರು ಕಲಾವಿದರಾಗಿದ್ದಾರೆ. ಸಂಗೀತಸಂತ, ನಾದಬ್ರಹ್ಮ ಶ್ರೀ ತ್ಯಾಗರಾಜರ ಮುಖ್ಯ ಶಿಷ್ಯ ಪರಂಪರೆಯಲ್ಲಿ ಬಂದ ನಾಲ್ಕು ಮಂದಿ ವಿದ್ವಾಂಸರಾದ ಆರುಪತಿ ನಟೇಶನ್ ಅಯ್ಯರ್, ತಂಜಾವೂರು ವೈದ್ಯನಾಥ ಅಯ್ಯರ್, ಪಾಲಕ್ಕಾಡ್ ಮಣಿ ಅಯ್ಯರ್, ಕುಂಭಕೋಣಂ ರಂಗ ಅಯ್ಯಂಗಾರ್ ಅವರ ಬಳಿ ಸುಮಾರು ಹದಿನೈದು ವರ್ಷಕ್ಕೂ ಹೆಚ್ಚುಕಾಲ ಆಪ್ತ ಶಿಷ್ಯತ್ವವನ್ನು ಮಾಡಿ ಮೃದಂಗವಾದನ ಕಲೆಯನ್ನು ಲೋಕೋತ್ತರವಾಗಿ ಸಾಧಿಸಿದರು. ಹಲವಾರು ಬಗೆಯ ನವಪ್ರಯೋಗಗಳನ್ನು ನಡೆಸುತ್ತಾ ತಮ್ಮದೇ ಆದ ಬಾಣಿಯನ್ನು ತಮ್ಮ ಮೃದಂಗವಾದನದಲ್ಲಿ ರೂಪಿಸಿದ್ದಾರೆ. ಮೊದಲ ಬಾರಿಗೆ ಫೈಬರ್ ಗ್ಲಾಸ್ ಮೃದಂಗ ವನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿದ ಕೀರ್ತಿ ಇವರದ್ದೇ ಆಗಿದೆ. ಹಿಂದೂಸ್ತಾನಿ, ಕರ್ನಾಟಕ ಹಾಗೂ ಪಾಶ್ಚಾತ್ಯ ಸಂಗೀತಗಳಿಗೆ ಹಾಗೂ ಈ ಸಂಗೀತಪ್ರಕಾರಗಳ ಮೇರು ಸಂಗೀತಗಾರರಿಗೆ ತಾಳವಾದ್ಯ ಸಹಕಾರವನ್ನೂ ನೀಡಿದ್ದು ಮಾತ್ರವಲ್ಲದೆ ದೇಶ- ವಿದೇಶಗಳ ಖ್ಯಾತಿಯ, ಅತ್ಯಂತ ಪ್ರಮುಖ ಸಂಗೀತಗಾರರಾದ ವಿದ್ವಾನ್ ಅರೆಕುಡಿರಾಮಾನುಜ ಅಯ್ಯಂಗಾರ್, ವಿದ್ವಾನ್ ಚೆಂಬೈ ವೈದ್ಯನಾಥ ಬಾಗವತರ್, ಸೆಮ್ಮನ್ಗುಡಿ ಶ್ರೀನಿವಾಸ ಅಯ್ಯರ್, ಪಂಡಿತ್ ರವಿಶಂಕರ್, ಪಂಡಿತ್ ಜಸರಾಜ್, ಮಿಷಲ್ ಸ್ಟಿಫನ್ ಗಲ್ಲಾಂಡ್ ಮುಂತಾದವರಿಗೆ ಮೃದಂಗ ಸಹವಾದನವನ್ನು ನೀಡಿದ್ದಾರೆ.
ದೇಶ ವಿದೇಶಗಳಲ್ಲಿ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳ ಮೂಲಕ ಭಾರತೀಯ ಸಂಗೀತದ ಮಹತ್ತನ್ನು ಆಸಕ್ತರಿಗೆ ತೋರಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಸಂಗೀತದ ಬಗ್ಗೆ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಇವರ 'ದ ವೋಯೇಜ್ ಆಫ್ ಮೃದಂಗಮ್ ಆ್ಯಂಡ್ ಇಟ್ಸ್ ಹೈ ವೋಲ್ಟೇಜ್ ಆರ್ಟ್' ಎಂಬುದು ಸಂಗೀತ ಕ್ಷೇತ್ರದಲ್ಲಿ ಬಹು ಮುಖ್ಯವಾದ ಕೃತಿ. ಇವರು ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಭಾರತ ಸರ್ಕಾರ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಭಾರತದ ಹಲವಾರು ಕಡೆಗಳಲ್ಲಿ ಇವರು ಹಲವು ನೂರು ಬಾರಿ ಸನ್ಮಾನಿತರಾಗಿದ್ದಾರೆ. ಕಂಚಿ, ಶೃಂಗೇರಿ, ಅಹೋಬಿಲಂ, ಶ್ರೀರಂಗಂ ಮತ್ತು ಅಂದಾವನಂ ಮಠಗಳು ತಮ್ಮ ಆಸ್ಥಾನ ವಿದ್ವಾಂಸರೆಂದು ನೇಮಕಮಾಡಿ ಗೌರವಿಸಿದೆ.







