ಜ.30ರಂದು ಟೈಲರ್ಸ್ ವೃತ್ತಿ ಬಾಂಧವರ ರಾಜ್ಯ ಮಟ್ಟದ ಸಮಾವೇಶ
ಮಂಗಳೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್‌ನ ರಜತ ಮಹೋತ್ಸವ ಸಂಭ್ರಮ ಮತ್ತು ರಾಜ್ಯ ಮಟ್ಟದ ಟೈಲರ್ ವೃತ್ತಿ ಬಾಂಧವರ ಬೃಹತ್ ಸಮಾವೇಶವು ಜ.30 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಜಯನಗರದ ಐದನೇ ಬ್ಲಾಕ್ ಶಾಲಿನಿ ಮೈದಾನದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಯಲಾಕ್ಷ ಕೋಟ್ಯಾನ್ ಹೇಳಿದರು.
ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ವಿಪಕ್ಷ ನಾಯಕ ಆರ್. ಅಶೋಕ್, ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಭಾಗವಹಿಸಲಿದ್ದಾರೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಾಗಿ 10 ಲಕ್ಷಕ್ಕೂ ಅಧಿಕ ಜನರು ಹೊಲಿಗೆ ವೃತ್ತಿಯನ್ನೇ ಅವಂಬಿಸಿ ಬದುಕು ಸಾಗಿಸುತ್ತಿರುವ ಕಾರ್ಮಿಕರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇರುವುದಿಲ್ಲ. ಉದ್ಯೋಗ ಖಾತ್ರಿಯಿಲ್ಲದೆ ವಸತಿ, ಮಕ್ಕಳ ವಿದ್ಯಾಭ್ಯಾಸ, ಔಷದೋಪಚಾರ, ಹಾಗೂ ವೃದ್ದಾಪ್ಯದಲ್ಲಿ ಬದುಕಿಗೆ ಭದ್ರತೆ ಇಲ್ಲದೆ ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ವರ್ಷದ ಕೇವಲ ಮೂರು ತಿಂಗಳು ಮಾತ್ರ ಕೆಲಸವಿದ್ದು ಉಳಿದ ಸಮಯ ಕೆಲಸವಿಲ್ಲದೆ ಸಮಸ್ಯೆಯಾಗುತ್ತಿದೆ. ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಟೈಲರ್‌ಗಳ ಕ್ಷೇಮಾಭಿವೃದ್ಧಿಗಾಗಿ ಸರಕಾರ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಟೈಲರ್ಸ್ ಬೋರ್ಡ್ ಸ್ಥಾಪಿಸಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ ಎಂದರು.
ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ ಮಾತನಾಡಿ, ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಹೆಚ್ಚು ಟೈಲರಿಂಗ್ ವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದು ಸರಕಾರ ನಮ್ಮತ್ತ ಗಮನಹರಿಸಿ ನಾನಾ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಈ ಸಂದರ್ಭ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮೋಹನ್ ಎಸ್. ಕೋಡಿ, ಕೋಶಾಧಿಕಾರಿ ಚಕ್ರೇಶ್ ಅಮೀನ್, ಜಯಂತ್ ಉರ್ಲಾಂಡಿ, ಉದಯ್ ಕೋಡಿಕಲ್, ಹರೀಶ್ ರೈ ಮತ್ತಿತರರು ಉಪಸ್ಥಿತರಿದ್ದರು.







