ಜ.30: ಸುರತ್ಕಲ್, ಮುಲ್ಕಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

ಮಂಗಳೂರು, ಜ.29: ಕೊಂಕಣ ರೈಲ್ವೆ ನಿಗಮದ ವ್ಯಾಪ್ತಿಯ ರೈಲು ನಿಲ್ದಾಣಗಳಾಗಿರುವ ಸುರತ್ಕಲ್ ಮತ್ತು ಮುಲ್ಕಿ ರೈಲ್ವೆ ಸ್ಟೇಷನ್‌ಗೆ ಸಂಬಂಧಿಸಿದ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸವನ್ನು ದ.ಕ.ಸಂಸದ ಬ್ರಿಜೇಶ್ ಚೌಟ ಜ.30 ನೆರವೇರಿಸಲಿದ್ದಾರೆ.
ಬೆಳಗ್ಗೆ 9:30 ಮತ್ತು 10:30ಕ್ಕೆ ಸುರತ್ಕಲ್ ಹಾಗೂ ಮೂಲ್ಕಿ ರೈಲು ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಹಾಗೂ ಉಮಾನಾಥ್ ಕೋಟ್ಯಾನ್ ಹಾಗೂ ಕೊಂಕಣ ರೈಲು ನಿಗಮದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
*ಕರಾವಳಿಯ ಎರಡು ಪ್ರಮುಖ ರೈಲ್ವೆ ಸ್ಟೇಷನ್‌ಗಳಾದ ಸುರತ್ಕಲ್ ಮತ್ತು ಮೂಲ್ಕಿ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಒದಗಿಸಬೇಕೆಂಬುದು ಸ್ಥಳೀಯರ ಬೇಡಿಕೆಯಾಗಿತ್ತು. ಈ ರೈಲು ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು. ಈ ವಿಚಾರವನ್ನು ಸಂಸದ ಬ್ರಿಜೇಶ್ ಚೌಟ ಅವರ ಗಮನಕ್ಕೆ ತಂದಾಗ ತಕ್ಷಣ ಅವರು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ಹಾಗೂ ರೈಲ್ವೆ ಸಚಿವಾಲಯದ ಜತೆಗೆ ಮಾತುಕತೆ ನಡೆಸಿದ್ದರು.
ಸುರತ್ಕಲ್ ರೈಲು ನಿಲ್ದಾಣದಲ್ಲಿ 47.52 ಲಕ್ಷ ರೂ. ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ಅಭಿವೃದ್ಧಿ ಹಾಗೂ 1.02 ಕೋ.ರೂ. ವೆಚ್ಚದಲ್ಲಿ ಪ್ಲಾಟ್ ಫಾರ್ಮ್ ಮೇಲ್ಛಾವಣಿ ನಿರ್ಮಾಣದ ಕಾರ್ಯ ನಡೆಯಲಿದೆ. ಕಿಲ್ಪಾಡಿ ಗ್ರಾಪಂ ವ್ಯಾಪ್ತಿಗೆ ಬರುವ ಮೂಲ್ಕಿ ನಿಲ್ದಾಣದಲ್ಲಿ ಹಲವು ರೈಲುಗಳು ನಿಲುಗಡೆಯಾಗುತ್ತಿದೆ. ಈ ನಿಲ್ದಾಣದಲ್ಲಿ 38.58 ಲಕ್ಷ ರೂ. ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ಅಭಿವೃದ್ಧಿ ಹಾಗೂ 1.04 ಕೋ.ರೂ. ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ಮೇಲ್ಫಾವಣಿ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.







