ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ 32ನೇ ವಾರ್ಷಿಕ ಮಹಾಸಭೆ

ಮಂಗಳೂರು, ನ.1: ಭೂ ಸಂಪನ್ಮೂಲದ ಸದ್ಬಳಕೆ ಮಾಡಿಕೊಳ್ಳುವಂತೆ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ಹಾಗೂ ಬ್ಯಾಂಕ್ ಆಫ್ ಬರೋಡದ ಮಂಗಳೂರು ವಲಯ ಮುಖ್ಯಸ್ಥೆ ಗಾಯತ್ರಿ ಆರ್. ಕರೆ ನೀಡಿದರು.
ಬ್ಯಾಂಕ್ ಆಫ್ ಬರೋಡದಿಂದ ಸಂಯೋಜಿತಗೊಂಡಿರುವ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ 32ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಅತ್ಯಂತ ವಿಸ್ತೀರ್ಣವಾದ ಕೃಷಿ ಭೂಮಿಯಿದ್ದು ನಮ್ಮ ಹಿರಿಯ ಕೃಷಿಕರಾಗಿದ್ದ ಹಿಂದಿನ ತಲೆಮಾರಿನವರಾದ ಕೃಷಿಕ ಬಳಗದವರು ಆರೋಗ್ಯಪೂರ್ಣವಾದ ಆಹಾರ ಪದಾರ್ಥಗಳನ್ನು ಬೆಳೆಸುತ್ತಿದ್ದು, ಭಾರತೀಯರು ಆರೋಗ್ಯವಂತರಾಗಿರಲು ಇದೇ ಮುಖ್ಯ ಕಾರಣ ಆಗಿತ್ತು. ಇಂದಿನ ತಲೆಮಾರಿನ ಕೃಷಿಕ ವರ್ಗ ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಅಗತ್ಯವಾದ ನೆರವು ನೀಡಲು ಸಿದ್ಧವಾಗಿದೆ ಎಂದರು.
ಅದೇರೀತಿ ಮಹಿಳೆಯರು ಹಾಗೂ ಯುವಕರು ಸ್ವಾವಲಂಬಿ ಜೀವನ ಸಾಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸವಲತ್ತುಗಳನ್ನು ನೀಡಲು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಸಿದ್ಧ ಎಂದು ಗಾಯತ್ರಿ ಆರ್. ಹೇಳಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಹಿಂದಿನ ಸಾಲಿನ ಕಾರ್ಯಕ್ರಮಗಳ ವಿವರ ಬಿಡುಗಡೆಗೊಳಿಸಿದರು.
ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೇಮನಾಥ ಆಳ್ವ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರತಿಷ್ಠಾನದ ಆಡಳಿತ ಮಂಡಳಿಯ ಹಾಗೂ ಪ್ರತಿಷ್ಠಾನದ ಸದಸ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭ ಆಡಳಿತ ಮಂಡಳಿಯ ಸದಸ್ಯ, ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರ್ವಾಹಕ ಸಚಿನ್ ಹೆಗ್ಡೆ ಸ್ವಾಗತಿಸಿ, ವಂದಿಸಿದರು.







