ಅ.4 : ತುಳು ಅಕಾಡೆಮಿ ಪ್ರಕಟಿತ ಕೃತಿ ಬಿಡುಗಡೆ

ಮಂಗಳೂರು, ಸೆ.30: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಡಾ. ಉದಯ ಕುಮಾರ್ ಇರ್ವತ್ತೂರು ಬರೆದಿರುವ ‘ಲೋಕಗೆಂದಿನ ಗಾಂಧಿಯೆರ್ ಕೃತಿ ಬಿಡುಗಡೆ ಕಾರ್ಯಕ್ರಮ ಅ.4 ರಂದು ಬೆಳಗ್ಗೆ 11:30 ಗಂಟೆಗೆ ಮಂಗಳೂರು ಉರ್ವಸ್ಟೋರ್‌ನ ತುಳು ಭವನದಲ್ಲಿ ನಡೆಯಲಿದೆ.
ತುಳು ಸಾಹಿತ್ಯ ಅಕಾಡೆಮಿಯು ಲೋಕದಾರ್ಶನಿಕರ ಹಾಗೂ ರಾಷ್ಟ್ರ ನಾಯಕರ ಬಗ್ಗೆ ತುಳು ಭಾಷೆೆಯಲ್ಲಿ ಕೃತಿ ಪ್ರಕಟಿಸುವ ಯೋಜನೆಯನ್ನು ರೂಪಿಸಿದ್ದು, ಈ ಸರಣಿಯ ಪ್ರಥಮ ಕೃತಿಯು ಮಹಾತ್ಮ ಗಾಂಧಿ ಅವರ ಕುರಿತಾಗಿ ರಚಿತವಾಗಿದೆ.
‘ಲೋಕಗೆಂದಿನ ಗಾಂಧಿಯೆರ್ ’ ತುಳು ಕೃತಿಯನ್ನು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಾ.ಎಂ. ವೀರಪ್ಪ ಮೊಯ್ಲಿ ಅವರು ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ವಹಿಸಲಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಎನ್. ಇಸ್ಮಾಯಿಲ್ ಪುಸ್ತಕದ ಪರಿಚಯ ಮಾಡುವರು. ಕೈಮಗ್ಗ ಪುನರುತ್ಥಾನ ಪ್ರವರ್ತಕರಾದ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ, ಗಾಂಧಿ ಚಿಂತನ ವೇದಿಕೆ ಸುಳ್ಯದ ಸಂಚಾಲಕ ಹಾಗೂ ಪತ್ರಕರ್ತ ಹರೀಶ್ ಬಂಟ್ವಾಳ, ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯ ಸಂಚಾಲಕ ಕುಂಬ್ರ ದುರ್ಗಾ ಪ್ರಸಾದ್ ರೈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
‘ತುಳುವ ನೆಲದಲ್ಲಿ ಲೋಕಮಾನ್ಯರು’ ವಿಚಾರಗೋಷ್ಠಿ: ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಿಂತ ಮೊದಲು ಬೆಳಗ್ಗೆ 10 ಗಂಟೆಗೆ ‘ತುಳುವ ನೆಲದಲ್ಲಿ ಲೋಕಮಾನ್ಯರು’ ಎಂಬ ವಿಷಯವಾಗಿ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯ ಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಎಂ. ಸುಂದರ ಬೆಳುವಾಯಿ ಅವರು ಉದ್ಘಾಟಿಸುವರು.
ಪ್ರಥಮ ಗೋಷ್ಠಿಯಲ್ಲಿ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಅವರು ‘ಕುದ್ಮುಲ್ ರಂಗರಾವ್ ಅವರ ಆದರ್ಶ ಮತ್ತು ಕೊಡುಗೆಗಳು’ ಎಂಬ ವಿಷಯದ ಬಗ್ಗೆ ಮಾತನಾಡುವರು.
ಎರಡನೇ ಗೋಷ್ಠಿಯಲ್ಲಿ ದ.ಕ. ಜಿಲ್ಲಾ ಗಾಂಧಿ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಕ ಅರವಿಂದ ಚೊಕ್ಕಾಡಿ ಅವರು ‘ಸ್ವಾತಂತ್ರ ಹೋರಾಟದಲ್ಲಿ ಮತ್ತು ವರ್ತಮಾನದಲ್ಲಿ ಮಹಾತ್ಮ ಗಾಂಧಿ’ ವಿಚಾರವಾಗಿ ಸಂವಾದ ನಡೆಸುವರು ಎಂದು ತುಳು ಅಕಾಡೆಮಿ ಪ್ರಕಟನೆ ತಿಳಿಸಿದೆ.







