ಜೂ.4 ರಿಂದ ಯೆನೆಪೋಯ ವಿ.ವಿಯಲ್ಲಿ ಜಾಗತಿಕ ಯುವ ಶೃಂಗಸಭೆ-2025: ಡಾ. ಅಶ್ವಿನಿ ಶೆಟ್ಟಿ

ಉಳ್ಳಾಲ: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಜತೆಗೂಡಿ, ಜೂನ್ 4ರಿಂದ 6ರವರೆಗೆ "ಜಾಗತಿಕ ಯುವ ಶೃಂಗಸಭೆ 2025" ಎಂಬ ಮಹತ್ವಾಕಾಂಕ್ಷಿ ಹಾಗೂ ಅಂತರರಾಷ್ಟ್ರೀಯ ಮಟ್ಟದ ಯುವ ಸಮ್ಮೇಳನ ನಡೆಯಲಿದೆ ಎಂದು ಶೃಂಗಸಭೆಯ ಸಂಘಟನಾ ಕಾರ್ಯದರ್ಶಿ ಡಾ. ಅಶ್ವಿನಿ ಶೆಟ್ಟಿ ಹೇಳಿದರು.
ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿ ಮಾತನಾಡಿದ ಅವರು ಯುವಜನರನ್ನು ಒಗ್ಗೂಡಿಸುವುದು, ಬದಲಾವಣೆಗೆ ಪ್ರೇರಣೆ ನೀಡುವುದು ಮತ್ತು ಭವಿಷ್ಯಕ್ಕಾಗಿ ಸ್ಫೂರ್ತಿ ಹುಟ್ಟಿಸುವುದು" ಎಂಬ ಥೀಮ್ ಅಡಿಯಲ್ಲಿ ಜರಗುತ್ತಿರುವ ಈ ಶೃಂಗಸಭೆ, ಕರ್ನಾಟಕ ಸರ್ಕಾರ ಆಯೋಜಿಸುತ್ತಿರುವ ಪ್ರಥಮ ಅಂತರರಾಷ್ಟ್ರೀಯ ಯುವ ಸಮ್ಮೇಳನವಾಗಿದ್ದು, ರಾಜ್ಯವನ್ನು ಜಾಗತಿಕ ಯುವ ನೇತೃತ್ವದ ಕೇಂದ್ರವಾಗಿ ಸ್ಥಾಪಿಸುವ ಧೈರ್ಯವಂತ ಹಾಗೂ ದೃಷ್ಟಿಕೋನಾಧಾರಿತ ಹೆಜ್ಜೆ ಆಗಿದೆ.
ಜೂನ್ 4ರಂದು ನಡೆಯುವ ಉದ್ಘಾಟನಾ ಸಮಾರಂಭವನ್ನು ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಯೆನೆಪೊಯಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ರಂದೀಪ್ ಡಿ, ಐಎಎಸ್, ಯೆನೆಪೊಯಾ ವಿಶ್ವವಿದ್ಯಾಲಯ ಕುಲಪತಿ ಡಾ. ಎಂ ವಿಜಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್, ಐಪಿಎಸ್, ಸಹ-ಉಪಕುಲಪತಿ ಡಾ. ಶ್ರೀಪತಿ ರಾವ್ , ಕುಲಸಚಿವ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ, ರಾಜ್ಯ ಎನ್‌ಎಎಸ್‌ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶಕ ಉಪಾಧ್ಯಾಯ ಭಾಗವಹಿಸಲಿದ್ದಾರೆ.
ಯೆನೆಪೋಯ ಪರಿಗಣಿಸಲ್ಪಟ್ಟ ವಿ.ವಿ ಎಂ.ಎಸ್ ಡಬ್ಲ್ಯು ವಿಭಾಗ ಮುಖ್ಯಸ್ಥ ಡಾ.ಮಹಮ್ಮದ್ ಗುತ್ತಿಗಾರ್ ಮಾತನಾಡಿ, ಭಾರತದ 20 ರಾಜ್ಯಗಳಿಂದ 650ಕ್ಕೂ ಹೆಚ್ಚು ಯುವ ಪ್ರತಿನಿಧಿಗಳು, 15 ದೇಶಗಳಿಂದ ಅಂತರರಾಷ್ಟ್ರೀಯ ಪ್ರತಿನಿಧಿಗಳು, 21 ಪ್ರಖ್ಯಾತ ಭಾಷಣಕಾರರು, ಯುವ ಐಕಾನ್‌ಗಳು, ವಲಯ ನಾಯಕರು ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ
ಸಾಮಾಜಿಕ ಉದ್ಯಮಶೀಲತೆ ಮತ್ತು ನಾವೀನ್ಯತೆ, ಯುವ ನೀತಿ ಮತ್ತು ವಕಾಲತ್ತು, ಹಸಿರು ಭಾರತ ಮತ್ತು ಪರಿಸರ ಕ್ರಿಯೆ, ಸಾರ್ವಜನಿಕ ಆರೋಗ್ಯ ಹಾಗೂ ಯೋಗಕ್ಷೇಮ, ಶಾಂತಿ ನಿರ್ಮಾಣ ಹಾಗೂ ಸಂಘರ್ಷ ಪರಿಹಾರ, ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. “ಜಾಗತಿಕ ಪ್ರಭಾವಕ್ಕೆ ಸ್ಥಳೀಯ ಪ್ರಭಾವ: ಬದಲಾವಣೆಗಾಗಿ ಯುವ ಪ್ರಯತ್ನಗಳನ್ನು ಸಂಯೋಜಿಸುವುದು” ಮಹತ್ವದ ವಿಚಾರದ ವಿಶೇಷ ಕಾರ್ಯಗಾರ ನಡೆಯಲಿದೆ.
ಪೋಸ್ಟರ್ ಪ್ರಸ್ತುತಿ ಸ್ಪರ್ಧೆ: "ಐಡಿಯಾವರ್ಸ್ – ನವ ಭಾರತಕ್ಕಾಗಿ ಯುವ ನಾವೀನ್ಯತೆ" ಎಂಬ ವಿಷಯದ ಅಡಿಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಹೊಸ ಯೋಚನೆಗಳು ಮತ್ತು ಆವಿಷ್ಕಾರ ಗಳನ್ನು ಪ್ರಸ್ತುತಪಡಿಸಲು ಪೋಸ್ಟರ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.







