5 ತಿಂಗಳಲ್ಲಿ ಬಜೆಟ್ ಘೋಷಣೆ ಕಾರ್ಯರೂಪಕ್ಕೆ; ಬಿಜೆಪಿ ಶಾಸಕರ ಆರೋಪಕ್ಕೆ ಐವನ್ ಪ್ರತ್ಯುತ್ತರ
ಸರಕಾರದ ಸಾಧನೆಯ ಬಗ್ಗೆ ಚರ್ಚೆಗೆ ಆಹ್ವಾನ

ಮಂಗಳೂರು, ಅ. 13: ಕಾಂಗ್ರೆಸ್ ಸರಕಾರವು ಐದು ತಿಂಗಳ ಅವಧಿಯಲ್ಲಿ ಮೀನುಗಾರರಿಗೆ ಸಂಬಂಧಿಸಿ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಾಧನೆ ಮಾಡಿದ್ದು, ಬಿಜೆಪಿ ತನ್ನ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಯಾವ ಸಾಧನೆ ಮಾಡಿದೆ ಎಂಬ ಬಗ್ಗೆ ನಮ್ಮ ಜತೆ ಚರ್ಚೆಗೆ ಬನ್ನಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಬಿಜೆಪಿ ಶಾಸಕರಿಗೆ ಆಹ್ವಾನ ನೀಡಿದ್ದಾರೆ.
ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಉಡುಪಿಯಲ್ಲಿ ಶಾಸಕ ಯಶಪಾಲ್ ಸುವರ್ಣ ನೇತೃತ್ವದ ಪತ್ರಿಕಾಗೋಷ್ಟಿಯಲ್ಲಿ ಸರಕಾರದ ವಿರುದ್ಧ ಆರೋಪ ಮಾಡಿರುವ ಬಗ್ಗೆ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯ ಮೂಲಕ ಪ್ರತ್ಯುತ್ತರ ನೀಡಿದರು.
ಸರಕಾರ ಆಡಳಿತಕ್ಕೆ ಬಂದು ಐದು ತಿಂಗಳು ಮಾತ್ರವೇ ಸಂದಿವೆ. ಹಾಗಿದ್ದರೂ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಹಲವು ಯೋಜನೆಗಳನ್ನು ಅನುಷ್ಟಾನಗೊಳಿಸಿದೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದನ್ನೂ ಹಂತ ಹಂತವಾಗಿ ಅನುಷ್ಟಾನಗೊಳಿಸಲಿದೆ ಎಂದರು.
ಐದು ತಿಂಗಳಲ್ಲಿ ಸರಕಾರ ಮಾಡಿರುವ ಸಾಧನೆ ಬಿಜೆಪಿಯವರನ್ನು ಕಂಗೆಡಿಸಿದೆ. ಯಾಂತ್ರೀಕೃತ ದೋಣಿಗಳಿಗೆ ಈ ಹಿಂದೆ ಸಿಗುತ್ತಿದ್ದ ವಾರ್ಷಿಕ ಮಿತಿ 1.50 ಲಕ್ಷ ಕಿ.ಲೀ. ಕರ ರಹಿತ ಡೀಸೆಲನ್ನು 2 ಲಕ್ಷ ಕಿ.ಲೀ. ಏರಿಕೆ ಮಾಡಿ ವಿತರಿಸಲು ಆದೇಶವಾಗಿದೆ. ಕೇಂದ್ರ ಸರಕಾರದಿಂದ ಪಡಿತರ ದರದ ಸೀಮೆಎಣ್ಣೆ ಅಗತ್ಯ ಪ್ರಮಾಣ ಹಾಗೂ ನಿಗದಿತ ಸಮಯದಲ್ಲಿ ಬಿಡುಗಡೆಯಾಗದ ಕಾರಣ ರಾಜ್ಯ ಸರಕಾರ ತನ್ನ ಅನುದಾನದಲ್ಲಿ ನಾಡದೋಣಿ ಮೀನುಗಾರರಿಗೆ ಕೈಗಾರಿಕಾ ಸೀಮೆಎಣ್ಣೆ ಖರೀದಿಸಿ ಲೀಟರ್‌ಗೆ 35 ರೂ. ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.
ಅಳಿವೆ ಬಾಗಿಲಿನಲ್ಲಿ 3.90 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಆರಂಭವಾಗಿದೆ. ಬಂದರು ಇಲಾಖೆಯು 29 ಕೋಟಿ ರೂ. ಅನುದಾನದ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯಾದೇಶಕ್ಕೆ ಸಿದ್ಧತೆ ನಡೆದಿದೆ. ಬೈಕಂಪಾಡಿ ಪ್ರದೇಶದಿಂದ ಶುದ್ದೀಕರಿಸದ ತ್ಯಾಜ್ಯ ನೀರು ನದಿ ಮತ್ತು ಸಮುದ್ರಕ್ಕೆ ಬಿಡುವುದರಿಂದ ಮೀನುಗಾರಿಕಾ ಕಸುಬು ನಶಿಸುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿ ಹಿನ್ನೀರಿನಲ್ಲಿ 6,129 ಹಾಗೂ ಫಲ್ಗುಣಿ ಹಾಗೂ ಶಾಂಭವಿ ನದಿ ಹಿನ್ನೀರಿನಲ್ಲಿ ತಲಾ 5000 ಸೀಬಾಸ್ ತಳಿಯ ಮೀನು ಮರಿ ಬಿತ್ತನೆ ಮಾಡಲಾಗಿದೆ. ಮೀನುಗಾರಿಕಾ ದೋಣಿಗಳಲ್ಲಿ ಸೀಮೆಎಣ್ಣೆ ಇಂಜಿನಿಗಳನ್ನು ಪೆಟ್ರೋಲ್/ ಡೀಸೆಲ್ ಇಂಜಿನಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ ನೀಡಲು ಪ್ರಸಕ್ತ ಸಾಲಿನಲ್ಲಿ 4000 ಸೀಮೆಎಣ್ಣೆ ಇಂಜಿನ್‌ಗಳ ಬದಲಾವಣೆಗೆ 20 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ ಎಂದವರು ವಿವರಿಸಿದರು.
ಮೀನುಗಾರರ ಬಗ್ಗೆ ಮಾತನಾಡುವ ಶಾಸಕ ವೇದವ್ಯಾಸ ಕಾಮತ್ ಅವರು, ಹೊಯ್ಗೆ ಬಜಾರ್‌ನಲ್ಲಿ ಹಲವು ವರ್ಷಗಳಿಂದ ನೆಲಬಾಡಿಗೆ ನೀಡಿ ವಾಸಿಸುತ್ತಿರುವ 150ಕ್ಕೂ ಅಧಿಕ ಮೀನುಗಾರ ಕುಟುಂಬಗಳಿಗೆ ಮನೆ ನೀಡುವಲ್ಲಿ ಏನು ಕೆಲಸ ಮಾಡಿದ್ದಾರೆ ಹೇಳಲಿ. ಬೆಂಗ್ರೆಯಲ್ಲಿ ಹಕ್ಕುಪತ್ರ ನೀಡಲು ಆಸಕ್ತಿ ತೋರಿದ್ದ ಶಾಸಕರು ಈ ಮೀನುಗಾರ ಕುಟುಂಬಗಳ ಬಗ್ಗೆ ಗಮನ ಹರಿಸದೆ ದ್ವಿಮುಖ ನೀತಿ ಪ್ರದರ್ಶಿಸಿದ್ದಾರೆ. ಹೊಯ್ಗೆಬಜಾರ್‌ನಲ್ಲಿ ಹಿಂದೆ ಚದರ ಮೀಟರ್‌ಗೆ 10 ರೂ. ಇದ್ದ ನೆಲಬಾಡಿಗೆಯನ್ನು 100 ರೂ.ಗಳಿಗೆ ಏರಿಕೆ ಮಾಡಿದ್ದು ಬಿಜೆಪಿ ಅವಧಿಯಲ್ಲಿ. ನಮ್ಮ ಸರಕಾರ ಆಡಳಿತಕ್ಕೆ ಬಂದ ಬಳಿಕ ಈಗಾಗಲೇ ಈಬಗ್ಗೆ ಸಚಿವರ ಜತೆ ಚರ್ಚಿಸಲಾಗಿದೆ. ಅವರ ನೆಲಬಾಡಿಗೆಯನ್ನು ಮನ್ನಾ ಮಾಡುವುದಲ್ಲದೆ, ಭೂಮಿ ಹಕ್ಕನ್ನು ನೀಡಲು ಆಗ್ರಹಿಸಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಇದನ್ನು ಮಾಡಿ ತೋರಿಸುತ್ತೇವೆ ಎಂದು ಐವನ್ ಡಿಸೋಜಾ ಹೇಳಿದರು.
ರಿಜಿಸ್ಟ್ರಾರ್ ಕಚೇರಿಯಲ್ಲಿ ಸೈಬರ್ ವಂಚನೆ ನಡೆಯುತ್ತಿದೆ ಎಂದು ಶಾಸಕರು ಈ ಬಗ್ಗೆ ಕ್ರಮಕ್ಕೆ ಸರಕಾರವನ್ನು ಒತ್ತಾಯಿಸಬೇಕು. ಅದಕ್ಕಾಗಿ ಪತ್ರಿಕಾಗೋಷ್ಟಿ ಮಾಡಿದರೆ ಸಾಲದು. ಶಾಸಕರಾಗಿ ಅವರೇನು ಮಾಡಬೇಕು ಅದನ್ನು ಮಾಡಲಿ. ನೋಂದಣಿ ಇಲಾಖೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಧಾರ್ ಲಿಂಕ್ ಮಾಡಲಾಗುತ್ತಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ವಂಚನೆ ಕುರಿತಂತೆ ದಾಖಲಾಗಿರುವ ದೂರಿನ ಬಗ್ಗೆ ಸೈಬರ್ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ನಮ್ಮ ಆಡಳಿತದ ಅವಧಿಯಲ್ಲಿ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಮೊದಲಾದ ಯೋಜನೆಗಳ ಬಗ್ಗೆ ಚರ್ಚೆಯಾಗುತ್ತಿದ್ದರೆ, ಬಿಜೆಪಿ ಅವಧಿಯಲ್ಲಿ ಪಿಎಸ್‌ಐ, 40 ಪರ್ಸೆಂಟ್, ಪೇ ಸಿಎಂ, ಬಿಟ್ ಕಾಯಿನ್, ಕೊರೋನ ಹಗರಣಗಳೇ ಚರ್ಚೆಯಾಗುತ್ತಿತ್ತು ಎಂದು ಐವನ್ ಡಿಸೋಜಾ ಎದಿರೇಟು ನೀಡಿದರು.
ಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಅಶ್ರಫ್, ವಿಕಾಸ್ ಶೆಟ್ಟಿ, ಮನುರಾಜ್, ಅಶ್ರಫ್ ಬೆಂಗ್ರೆ, ಭಾಸ್ಕರ್ ರಾವ್, ಮೀನುಗಾರ ಸಮುದಾಯದ ಪ್ರಮುಖರಾದ ಮಿಥುನ್ ಬೆಂಗ್ರೆ, ನಿತಿನ್ ಪುತ್ರನ್, ಸರಳಾ ಕಾಂಚನ್ ಉಪಸ್ಥಿತರಿದ್ದರು.
ಬಿಜೆಪಿ ಸರಕಾರದಿಂದ 6 ಲಕ್ಷ ಬಿಪಿಎಲ್ ಕಾರ್ಡ್‌ಗಳು ರದ್ದು
ಬಿಪಿಎಲ್ ಕಾರ್ಡು ದೊರೆಯುತ್ತಿಲ್ಲ ಎಂದು ಶಾಸಕರು ಆರೋಪಿಸಿದ್ದಾರೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಆರು ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿತ್ತು. ಕಾಂಗ್ರೆಸ್ ಸರಕಾರದಿಂದ 1.41 ಕೋಟಿ ಬಿಪಿಎಲ್ ಕಾಡುಗಳ 4.42 ಕೋಟಿ ಫಲಾನುಭವಿಗಳಿಗೆ ಅನ್ನಭಾಗ್ಯದ ನೇರ ಯೋಜನೆ ಲಭ್ಯವಾಗುತ್ತಿದೆ. ಹಾಗಾಗಿ ಬಿಪಿಎಲ್ ಕಾರ್ಡು ಮಾಡಲು ಆಗುತ್ತಿಲ್ಲ ಎಂದು ಹೇಳುವ ನೈತಿಕತೆ ಬಿಜೆಪಿಯವರಿಗೆ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಜಿಎಸ್‌ಟಿ ಪಾಲು 3200 ಕೋಟಿ ರೂ. ಬಾಕಿ ಇದೆ. ಅದನ್ನು ಕೇಳಲಾದರೂ ಬಿಜೆಪಿ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿ ಎಂದು ಐವನ್ ಡಿಸೋಜಾ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಚಲಾವಣೆ ಇಲ್ಲದ ನಾಣ್ಯವಾಗಿದ್ದರೆ, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ. ಯತ್ನಾಳ್ ಅವರು ಕತ್ತಿ ಚೂರಿ ಎನ್ನುತ್ತಿದ್ದರೆ, ಸಿಟಿ ರವಿ ಸೋತು ಮನೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.







