ಜ.7-8: ಕೆಪಿಟಿ ವತಿಯಿಂದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟ

ಮಂಗಳೂರು, ಜ.3: ನಗರದ ಕದ್ರಿ ಹಿಲ್ಸ್‌ನಲ್ಲಿರುವ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ (ಕೆಪಿಟಿ) ಸಂಸ್ಥೆಯ ವತಿಯಿಂದ ರಾಜ್ಯ ಮಟ್ಟದ 45ನೇ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟ, ಅಮೃತ ಮಹೋತ್ಸವ ಭವನದ ಶಿಲಾನ್ಯಾಸ, ಹಳೆ ವಿದ್ಯಾರ್ಥಿ ಸಂಘದ ಕೊಡುಗೆಯಾದ ನೂತನ ವಿದ್ಯಾರ್ಥಿ ನಿಲಯದ ಉದ್ಘಾಟನೆ, ಶೈಕ್ಷಣಿಯ ಸ್ವಾಯತ್ತತೆಯ ಉದ್ಘಾ ಟನಾ ಕಾರ್ಯಕ್ರಮವು ಜ.7ರಂದು ಬೆಳಗ್ಗೆ 10ಕ್ಕೆ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕೆಪಿಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ (ಸರಕಾರಿ) ಪಾಲಿಟೆಕ್ನಿಕ್ ಪ್ರಾಂಶುಪಾಲ ಹರೀಶ್ ಶೆಟ್ಟಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತಿಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಕ್ರೀಡೋತ್ಸವ ಉದ್ಘಾಟಿಸಲಿದ್ದಾರೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕ್ರೀಡಾ ಜ್ಯೋತಿ ಪ್ರಜ್ವಲನೆ ಮಾಡಲಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಕ್ರೀಡಾ ಧ್ವಜಾರೋಹಣ ಮಾಡಲಿದ್ದಾರೆ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಉಪಸ್ಥಿತರಿರ ಲಿದ್ದು, ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
*2000ಕ್ಕೂ ಅಧಿಕ ವಿದ್ಯಾರ್ಥಿಗಳು
ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಶ್ರೀಕಾಂತ್ ಮಾತನಾಡಿ ಕ್ರೀಡಾಕೂಟದಲ್ಲಿ ರಾಜ್ಯಾದ್ಯಂತ 200ಕ್ಕೂ ಹೆಚ್ಚಿನ ಪಾಲಿಟೆಕ್ನಿಕ್‌ಗಳಿಂದ 2,000 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಜ.6 ರಂದು ಕ್ರೀಡಾಪಟು ಗಳ ನೋಂದಣಿ ಮತ್ತು ವರದಿ ಪ್ರಕ್ರಿಯೆ ಇದ್ದು, ಜ.7 ಹಾಗೂ 8ರಂದು ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ 18 ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಜ.8ರಂದು ಕ್ರೀಡಾಕೂಟದ ಸಮಾರೋಪ ನಡೆಯಲಿದ್ದು, ವಿಜೇತ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಗುತ್ತದೆ ಎಂದರು.
ಹಳೆ ವಿದ್ಯಾರ್ಥಿ ಅಸೋಸಿಯೇಶನ್ ಅಧ್ಯಕ್ಷ ದೇವಾನಂದ್ ಮಾತನಾಡಿ, ಅಮೃತ ಮಹೋತ್ಸವದ ನೆನಪಿನ ಹಿನ್ನಲೆಯಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘವು ನೂತನ ಸಭಾಂಗಣವನ್ನು ಕೊಡುಗೆಯಾಗಿ ನೀಡುತ್ತಿದ್ದು, ಈ ಭವನದ ಶಿಲಾನ್ಯಾಸ ಕಾರ್ಯಕ್ರಮವು ಇದೇ ವೇಳೆ ನೆರವೇರಲಿದೆ. ಗುಂಡಳಿಕೆಯಲ್ಲಿ ನಿರ್ಮಾಣಗೊಂಡಿರುವ ಸಂಸ್ಥೆಯ ನೂತನ ವಿದ್ಯಾರ್ಥಿನಿಲ ಯದ ಉದ್ಘಾಟನೆ, ‘ಅಮೃತಯಾನ’ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ ಎಂದು ಹೇಳಿದರು.
*ಭಾರತೀಯ ಅಂಚೆ ಇಲಾಖೆ ವತಿಯಿಂದ ಕೆಪಿಟಿ ಕುರಿತಂತೆ ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದೆ. 75 ವರ್ಷಗಳಿಗಿಂತಲೂ ಅಧಿಕ ಇತಿಹಾಸ ಹೊಂದಿದ ಕೆಪಿಟಿ ತನ್ನ ಪಯಣದಲ್ಲಿ ಶೈಕ್ಷಣಿಕ, ಔದ್ಯೋಗಿಕ, ಕ್ರೀಡೆ ಹಾಗೂ ಸಾಮಾಜಿಕ ವಲಯಗಳಲ್ಲಿ ಅದ್ಭುತ ಸಾಧನೆಗೈದಿದೆ. ಕೆಪಿಟಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು 2025 ನೇ ಸಾಲಿನಿಂದ ಶೈಕ್ಷಣಿಕ ಸ್ವಾಯತ್ತತೆಗೆ ಅನುಮತಿ ನೀಡಿದ್ದು, ಇಡೀ ದೇಶದಲ್ಲಿ ಎಐಸಿಟಿಇ ಇಂದ ಸ್ವಾಯತ್ತತೆ ದೊರೆತ ಪ್ರಥಮ ಪಾಲಿಟೆಕ್ನಿಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಪ್ರಾಂಶುಪಾಲ ಹರೀಶ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ರಿಜಿಸ್ಟ್ರಾರ್ ವಿನೋದ ಕುಮಾರಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹರೀಶ್ ಸಿ.ಪಿ., ಕ್ರೀಡಾ ಸಮನ್ವಯಾಧಿಕಾರಿ ವಿಶ್ವನಾಥ ಮಾನೆ ಉಪಸ್ಥಿತರಿದ್ದರು.







