ಕಾರ್ಕಳ ತಾಲೂಕು ಆಡಳಿತ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ

ಕಾರ್ಕಳ : ನಮ್ಮ ಗುರತು ಕೇವಲ ನಮ್ಮ ವೃತ್ತಿ ಹಾಗೂ ಕುಟುಂಬದಿಂದ ಮಾತ್ರವಾಗದೆ ನಾವೆಲ್ಲರೂ ಭಾರತೀಯರು ಎಂಬ ಗುರತು ನಮ್ಮದಾಗಿದೆ. ನಾವು ಕೇವಲ ವ್ಯಕ್ತಿಗಳಲ್ಲ ಬದಲಾಗಿ ಜನಸಮುದಾಯದ ಜವಾಬ್ದಾರಿಯುತ ಭಾಗ ಎಂಬುದನ್ನು ಸ್ವಾತಂತ್ರ್ಯ ದಿನಾಚರಣೆ ಸದಾ ನೆನಪಿಸುತ್ತದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರಿಗೆ, ದೇಶಕ್ಕಾಗಿ ಹೋರಾಡುತ್ತಿರುವ ಸೈನಿಕರಿಗೆ ಹಾಗು ನಾಡಿಗಾಗಿ ದುಡಿಯುವ ಎಲ್ಲರಿಗೆ ನಾವು ಕೃತಜ್ಞರು ಎಂದು ತಹಶೀಲ್ದಾರ್ ಪ್ರದೀಪ್ ಆರ್. ಹೇಳಿದರು.
ತಾಲೂಕು ಆಡಳಿತ ವತಿಯಿಂದ 79ನೇ ಸ್ವಾತಂತ್ರೋತ್ಸವ ಅಂಗವಾಗಿ ಮಂಜುನಾಥ ಪೈ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಸ್ವಾತಂತ್ರೋತ್ಸವದ ಸಂದೇಶ ನೀಡಿದರು.
ಅನಂತಶಯನ ವೃತ್ತದಲ್ಲಿ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ ಹಾಗೂ ಗಾಂಧಿ ಮೈದಾನದಲ್ಲಿ ತಹಶೀಲ್ದಾರ್ ಪ್ರದೀಪ್ ಆರ್. ಧ್ವಜಾರೋಹಣ ನೆರವೇರಿಸಿದರು. ಭುವನೇಂದ್ರ ಪ್ರೌಢಶಾಲೆಯ ಶಿಕ್ಷಕ ಸಂಜಯ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಮಂಜುನಾಥ ಪೈ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಸುದೀರ್ಘ ವರ್ಷಗಳ ಹೋರಾಟ, ಸಾವಿರಾರು ಮಂದಿಯ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂಬುದನ್ನು ಮರೆಯುವಂತಿಲ್ಲ. ಬಲಿಷ್ಠ ಸೇನೆ, ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆ ನಮ್ಮ ದೇಶವನ್ನು ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿಸಿದೆ. ಪ್ರಸ್ತುತ 5ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಭಾರತವನ್ನು ಮುಂದಿನ ವರ್ಷಗಳಲ್ಲಿ 3ನೇ ಸ್ಥಾನಕ್ಕೇರಿಸಬೇಕೆಂದು ನಮ್ಮ ಪ್ರಧಾನಿಯವರ ಕನಸು. ಈ ನಿಟ್ಟಿನಲ್ಲಿ ಗ್ರಾಮ ಗ್ರಾಮದಲ್ಲಿ ಕಾರ್ಯಪ್ರವೃತ್ತರಾಗೋಣ ಎಂದರು.
ಸನ್ಮಾನ
ಕಾರ್ಯಕ್ರಮದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಎಸ್ಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಭುವನೇಂದ್ರ ಪ್ರೌಢಶಾಲೆಯ ಶಿಕ್ಷಕ ಗಣೇಶ್ ಜಾಲ್ಸೂರು ಅಭಿನಂದಿಸಿದರು.
ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ವರ್ಗ, ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಸ್ವಾಗತಿಸಿದರು. ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.







