ಫೆ.8-9: ಕುಲಶೇಖರ ಚರ್ಚ್‌ನಲ್ಲಿ ಕೊರ್ಡೆಲ್ ಖೇಳ್-ಮೇಳ್
ಮಂಗಳೂರು: ನಗರದ ಕುಲಶೇಖರದ ಕೊರ್ಡೆಲ್ ಪವಿತ್ರ ಶಿಲುಬೆ ಚರ್ಚ್‌ನಲ್ಲಿ ಫೆ.8 ಮತ್ತು 9ರಂದು ಕೊರ್ಡೆಲ್ ಖೇಳ್ - ಮೇಳ್ ಆಯೋಜಿಸಲಾಗಿದೆ ಎಂದು ಚರ್ಚ್‌ನ ಪ್ರಧಾನ ಧರ್ಮಗುರು ವಂ. ಕ್ಲಿಫರ್ಡ್ ಫೆರ್ನಾಂಡಿಸ್ ಹೇಳಿದ್ದಾರೆ.
ಸೋಮವಾರ ಚರ್ಚ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ವಧರ್ಮದ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ ಸಹಿತ ವಿವಿಧ ಮನೋರಂಜನೆ ಜರುಗಲಿದೆ ಎಂದರು.
ಆದರ್ಶ ಕುಟುಂಬ, ರಾಜರಾಣಿ ಸೇರಿದಂತೆ ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜೊತೆಗೆ ಇಪ್ಪತ್ತಕ್ಕೂ ಅಧಿಕ ಮನೋರಂಜನಾ ಆಟಗಳ ಸ್ಟಾಲ್‌ಗಳು ಒಳಗೊಂಡಿವೆ. ಕರಾವಳಿ ಭಾಗದ ಮಾಂಸಹಾರ ಹಾಗೂ ಸಸ್ಯಹಾರ ಭಕ್ಷ್ಯಗಳ ವಿವಿಧ ಮಳಿಗೆಗಳು ಇರಲಿದೆ. ವಿಶೇಷ ಚೇತನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
17ನೇ ಶತಮಾನದಲ್ಲಿ ಮಿಲಾಗ್ರಿಸ್ ಚರ್ಚ್‌ನ ಧರ್ಮಗುರುಗಳಾಗಿದ್ದ ವಂ.ಅಲೇಕ್ಸಾಂಡರ್ ಡುಬೋಸ್ ಅವರು ಕುಲಶೇಖರ ಪ್ರದೇಶದ ಜನತೆಗೆ ಅಪಾರ ನೆರವು ನೀಡಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸಿ, ರೋಗ ರುಜಿನಗಳ ಸಂದರ್ಭದಲ್ಲಿ ಔಷಧಗಳನ್ನು ನೀಡುತ್ತ ಗುಣಪಡಿಸುತ್ತಿದ್ದರು. ಕೃಷಿ ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾದ ಸಂದರ್ಭ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇದರಿಂದಾಗಿ ಸರ್ವ ಧರ್ಮದ ಜನರು ಅವರ ಬಳಿಗೆ ಆಗಮಿಸುತ್ತಿದ್ದರು. ಅವರ ಸಮಾಧಿಯು ಕೊರ್ಡೆಲ್ ಚರ್ಚ್ ವ್ಯಾಪ್ತಿಯಲ್ಲಿದೆ ಎಂದು ವಂ. ಕ್ಲಿಫರ್ಡ್ ಫೆರ್ನಾಂಡಿಸ್ ಹೇಳಿದರು.
ಕಾರ್ಯಕ್ರಮದ ಸಂಯೋಜಕ ರಾಯ್ ಕ್ಯಾಸ್ತೆಲಿನೋ ಮಾತನಾಡಿ, ಫೆ.8ರಂದು ಸಂಜೆ 4ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಪಾಲಿಕೆ ಸದಸ್ಯರಾದ ಭಾಸ್ಕರ್ ಮೊಯ್ಲಿ, ಕಿಶೋರ್ ಕೊಟ್ಟಾರಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷೆ ರೂತ್ ಕ್ಯಾಸ್ತೆಲಿನೋ, ಕಾರ್ಯದರ್ಶಿ ಅನಿಲ್ ಡೆಸಾ, ಮಾಧ್ಯಮ ಸಂಯೋಜಕ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.







