85ನೇ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಮಂಗಳೂರು ವಿವಿಗೆ 13 ಪದಕ

ಮೂಡುಬಿದಿರೆ : 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26ರ ನಾಲ್ಕನೇ ದಿನ ಮಂಗಳೂರು ವಿಶ್ವವಿದ್ಯಾಲಯವು ಒಂದು ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಒಟ್ಟು ಪದಕ ಪಟ್ಟಿಯಲ್ಲಿ ನಾಲ್ಕು ಚಿನ್ನ, ಐದು ಬೆಳ್ಳಿ ಹಾಗೂ ನಾಲ್ಕು ಕಂಚು ಸೇರಿದಂತೆ 13 ಪದಕಗಳನ್ನು ತನ್ನದಾಗಿಸಿಕೊಂಡಿದೆ.
4x400 ಮೀ. ಮಿಕ್ಸೆಡ್ ರಿಲೇ ಮತ್ತು ಮಹಿಳಾ ವಿಭಾಗದಲ್ಲಿ 10,000 ಮೀಟರ್ಸ್ ಓಟದ್ಲಲಿ ನಿರ್ಮಲಾ(ಚಿನ್ನ)ಕ್ಕೆ ಮುತ್ತಿಟ್ಟರು. ಹಾಫ್ ಮ್ಯಾರಥಾನ್: ಭಾಗೀರಥಿ (ಚಿನ್ನ), 400 ಮೀ. ಹರ್ಡಲ್ಸ್: ದೀಕ್ಷಿತಾ ರಾಮ ಗೌಡ (ಬೆಳ್ಳಿ), ಲಾಂಗ್ ಜಂಪ್: ಶ್ರೀದೇವಿಕಾ ವಿ.ಎಸ್. (ಬೆಳ್ಳಿ) ಹಾಗೂ ಪುರುಷರ ವಿಭಾಗದಲ್ಲಿ ಡಿಸ್ಕಸ್ ಥ್ರೋ: ಉಜ್ವಲ್ ಚೌಧರಿ (ಚಿನ್ನ), ನಾಗೇಂದ್ರ ಅಣ್ಣಪ್ಪ ನಾಯ್ಕ(ಕಂಚು), 100 ಮೀ. ಓಟ: ವಿಭಾಸ್ಕರ್ ಕುಮಾರ್ (ಬೆಳ್ಳಿ), 400 ಮೀ. ಹರ್ಡಲ್ಸ್: ಆರ್ಯನ್ ಪ್ರಜ್ವಲ್ ಕಶ್ಯಪ್ (ಬೆಳ್ಳಿ), 800 ಮೀ. ಓಟ: ಪ್ರಥಮೇಶ್ ಅಮರಿಸ್ಲಾ ದಿಯೋರಾ (ಬೆಳ್ಳಿ), ಶಾಟ್‌ಪುಟ್: ಅನಿಕೇತ್ (ಕಂಚು), ಡೆಕಥ್ಲಾನ್: ಚಮನ್‌ಜ್ಯೋತ್ ಸಿಂಗ್ (ಕಂಚು), 400 ಮೀಟರ್ಸ್ ಓಟ: ಆಕಾಶ್ ರಾಜ್ ಎಸ್.ಎಂ. (ಕಂಚು) ಸ್ಥಾನ ಪಡೆದಿದ್ದಾರೆ.
ಪೋಲ್‌ವಾಲ್ಟ್ ನಲ್ಲಿ ನೂತನ ಕೂಟ ದಾಖಲೆ: ಮದ್ರಾಸ್ ವಿ.ವಿ. ಪಾರಮ್ಯ :
ಆಗಸದಲ್ಲಿ ಸೂರ್ಯ ‘ಉತ್ತರ’ದ ಚಲನೆ ಆರಂಭಿಸಿ ‘ಮಕರ ಸಂಕ್ರಾಂತಿ’ಯ ಸುಗ್ಗಿ ನೀಡಿದರೆ, ಮೂಡುಬಿದಿರೆಯ ಅಂಕಣದಲ್ಲಿ ಪದಕಗಳ ಬೇಟೆಯು ‘ದಕ್ಷಿಣ’ದತ್ತ ಹೊರಳಿತ್ತು. ಸಮಗ್ರ ಪದಕ ಪಟ್ಟಿಯಲ್ಲಿ ತಮಿಳುನಾಡಿನ ಮದ್ರಾಸ್ ವಿ.ವಿ. ಪಾರಮ್ಯ ಮೆರೆದರೆ, ಮಂಗಳೂರು ವಿ.ವಿ. ದ್ವಿತೀಯ ಸ್ಥಾನಕ್ಕೆ ಜಾರಿತು. ಪೋಲ್ ವಾಲ್ಟ್ ಜಿಗಿತದಲ್ಲಿ ‘ಎತ್ತರ’ದ ಹಣಾಹಣಿ ಏರ್ಪಟ್ಟು, ನೂತನ ಕೂಟ ದಾಖಲೆಯೊಂದಿಗೆ ದಿನದ ಆಕರ್ಷಣೆಯಾಯಿತು.
* ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ನಾಲ್ಕನೇ ದಿನವಾದ ಗುರುವಾರದ ಪ್ರಮುಖ ಝಲಕ್‌ಗಳು.
ಪುರುಷರ ಅಂಕ ಪಟ್ಟಿಯಲ್ಲಿ ಮದ್ರಾಸ್ ಹಾಗೂ ಮಹಿಳೆಯರ ಪೈಕಿ ಚಂಡೀಗಢ ವಿ.ವಿ. ಅಗ್ರಸ್ಥಾನದಲ್ಲಿದ್ದರೆ, ಎರಡರಲ್ಲೂ ಮಂಗಳೂರು ವಿ.ವಿ. ರನ್ನರ್ ಅಪ್ ಸ್ಥಾನದಲ್ಲಿದೆ.
ಪುರುಷರ ಪೋಲ್ ವಾಲ್ಟ್ನಲ್ಲಿ ಗ್ವಾಲಿಯರ್‌ನ ಕುಲ್ದೀಪ್ ಯಾದವ್ 5.10 ಮೀಟರ್ ಎತ್ತರ ಜಿಗಿಯುವ ಮೂಲಕ ನೂತನ ಕೂಟ ದಾಖಲೆ ಬರೆದರು. 2024ರಲ್ಲಿ ಚೆನ್ನೈ ಮದ್ರಾಸ್ ವಿಶ್ವವಿದ್ಯಾಲಯದ ಎಂ. ಗೌತಮ್ ಅವರು (5.0ಮೀ. ಎತ್ತರ) ಬರೆದಿದ್ದ ದಾಖಲೆಯನ್ನು ಮುರಿದರು.
ಸೇಲಂ ಪರಿಯಾರ್ ವಿ.ವಿ. ಎಸ್.ಕವಿನ್ರಯ್ಯ ಹಾಗೂ ಗುರುಕಾಶಿ ವಿ.ವಿ.ಯ ರಾಮ್‌ರತನ್ (5.10) ಅಷ್ಟೇ ಎತ್ತರ ಜಿಗಿದು ಹಿಂದಿನ ದಾಖಲೆ ಮುರಿದರೂ, ಒಟ್ಟು ಪೌಲ್‌ಗಳ ಆಧಾರದಲ್ಲಿ ಕುಲ್ದೀಪ್ ಯಾದವ್ ವಿಜಯಿಯಾದ ಕಾರಣ, ನೂತನ ಕೂಟ ದಾಖಲೆ ಅವರ ಪಾಲಾಯಿತು.
ಮಹಿಳಾ ವಿಭಾಗದ ಪೋಲ್ ವಾಲ್ಟ್ನಲ್ಲೂ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ವಂಶಿಕಾ, ಕಾರ್ತಿಕಾ ಮತ್ತು ನೇಖಾ ಅವರು ಮೂವರ ಜಿಗಿತ (3.70 ಮೀ. ಎತ್ತರ) ಸಮವಾಗಿತ್ತು, ಹಿಂದಿನ ಫೌಲ್‌ಗಳ ಆಧಾರದಲ್ಲಿ ವಿಜೇತರನ್ನು ಘೋಷಿಸಲಾಯಿತು.
100 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ತಮಿಳುನಾಡಿನ ಮಹಿಳೆಯರು ಅಕ್ಷರಶಃ ಮೇಲುಗೈ ಸಾಧಿಸಿದರು. ಅಕ್ಷಿದಾ ಮತ್ತು ಶ್ರೀರೇಷ್ಮಾ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಒಂದು ಸೆಕೆಂಡ್ ಅನ್ನು ಸಾವಿರ ವಿಭಾಗಿಸಿದಾಗ (.003) ಅಂತರ ಕಂಡು ಬಂದಿದ್ದು, ಅಕ್ಷಿದ ಚಿನ್ನಕ್ಕೆ ಪಾತ್ರರಾದರು. ಕಂಚು ಕೂಡಾ ಚೆನ್ನೈ ಪಾಲಾಯಿತು. ಸ್ಪರ್ಧಾ ಫಲಿತಾಂಶವು ಕ್ರೀಡಾಕೂಟದ ಅಂತರರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನ ವ್ಯವಸ್ಥೆಯನ್ನು ಸಾಕ್ಷೀಕರಿಸಿತು.
ದೂರ ಜಿಗಿತದಲ್ಲಿ ಆಂಧ್ರಪ್ರದೇಶದ ಎಸ್‌ಆರ್‌ಎಂ ವಿಶ್ವವಿದ್ಯಾಲಯದ 19 ವರ್ಷದ ಮುಬಾಸ್ಸಿನಾ ಚಿನ್ನ ಗೆದ್ದರು. ಅವರು ಈ ಹಿಂದೆ 6.36 ಮೀ. ಜಿಗಿದ ದಾಖಲೆ ಹೊಂದಿದ್ದಾರೆ. ‘ಈ ಯಶಸ್ಸಿಗೆ ನನ್ನ ಕುಟುಂಬ ನೀಡಿದ ಪ್ರೋತ್ಸಾಹ ಹಾಗೂ ತರಬೇತುದಾರರ ಬೆಂಬಲ ಕಾರಣ’ ಎಂದರು.
ದ್ವಿತೀಯ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾಲಯದ ಶ್ರೀದೇವಿಕಾ ವಿ.ಎಸ್. ಪಡೆದಿದ್ದಾರೆ. ಉಡುಪಿ ಮೂಲದ ಅವರು ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ. ವಸಂತ ಜೋಗಿ ತರಬೇತಿಯಲ್ಲಿ ಪಳಗಿದ್ದಾರೆ.
ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಆಂಧ್ರಪ್ರದೇಶದ ಆದಿತ್ಯ ಅವರು, ‘ಎಸೆತಕ್ಕೂ ಮೊದಲಿನ ನನ್ನ ಓಟ ಅಭಿವೃದ್ಧಿ ಪಡಿಸಿದ್ದೇನೆ. ಅಂತರ ವಿಶ್ವವಿದ್ಯಾಲಯದ ಸ್ಪರ್ಧೆ ಇದೇ ಮೊದಲು. ಆದರೆ, ಇಲ್ಲಿ ಉತ್ತಮ ಅನುಭವ ದೊರೆಯಿತು. ಅರವಿಂದ ಹಾಗೂ ಧ್ಯಾನ ಕೃಷ್ಣ ಅವರಲ್ಲಿ ತರಬೇತಿ ಪಡೆದಿದ್ದೇನೆ’ ಎಂದರು.
‘ಇಂದು ನನಗೆ ಆರಂಭದಲ್ಲಿ ಒತ್ತಡ ಉಂಟಾಗಿತ್ತು. ಆದರೆ, ಒಂದು ಉತ್ತಮ ಎಸೆತ ಎಲ್ಲವನ್ನೂ ಮರೆಸಿ, ಆತ್ಮ ವಿಶ್ವಾಸ ನೀಡಿತು. ದಾಖಲೆಯ ಆಸೆ ಇತ್ತು. ಮುಂದಿನ ಬಾರಿ ದಾಖಲೆ ಮಾಡುತ್ತೇನೆ’ ಎಂದು ಭರವಸೆ ವ್ಯಕ್ತಪಡಿಸಿದರು.
ಫಲಿತಾಂಶ- ಪುರುಷರ ವಿಭಾಗ:
110 ಮೀ. ಹರ್ಡಲ್ಸ್: ಅರವಿಂತ ಎ., ಚೆನ್ನೈ ಮದ್ರಾಸ್ ವಿಶ್ವವಿದ್ಯಾಲಯ (14.10ನಿ. ಸಮಯ)-1, ಶಾಹುಲ್ ಎಸ್., ಕೇರಳದ ಕ್ಯಾಲಿಕಟ್ ವಿ.ವಿ. (14.20)-2, ಪಾರಿ ಕೆ., ಚೆನ್ನೈ ಮದ್ರಾಸ್ ವಿಶ್ವವಿದ್ಯಾಲಯ (14.47)-3.
ಪೋಲ್ ವಾಲ್ಟ್: ಕುಲ್ದೀಪ್ ಯಾದವ್, ಗ್ವಾಲಿಯರ್, ಐಟಿಎಂ ವಿ.ವಿ. (5.10 ಮೀ. ಎತ್ತರ)-1, ಎಸ್.ಕವಿನ್ರಯ್ಯ, ಸೇಲಂ ಪರಿಯಾರ್ ವಿ.ವಿ. (5.10)-2, ರಾಮ್‌ರತನ್, ಗುರುಕಾಶಿ ವಿ.ವಿ. (5.10)-3.
1500 ಮೀ. ಓಟ: ವಿಕಾಸ್, ಚಂಡೀಗಢದ ಪಂಜಾಬ್ ವಿ.ವಿ. (3:44.83 ನಿ. ಸಮಯ)-1, ಆಕಾಶ್ ಭಾಟಿ, ರೋಹ್ತಕ್ ಎಂ.ಡಿ.ಯು. ವಿ.ವಿ (3:45.06)-2, ಯೋಗೇಶ್ ಕುಮಾರ್ ದಿಂಡಾವಾಲಾ, ಚೆನ್ನೈ ಮದ್ರಾಸ್ ವಿ.ವಿ. (3:45.07)-3.
ಜಾವೆಲಿನ್ ಥ್ರೋ: ಆದಿತ್ಯ, ಆಂಧ್ರಪ್ರದೇಶ ಎಸ್.ಆರ್.ಎಂ. ವಿ.ವಿ. (74.43ಮೀ. ದೂರ)-1, ಮೋಹಿತ್, ರೋಹ್ತಕ್ ಎಂಡಿಯು ವಿ.ವಿ. (73.90)-2, ಮೊಹಮ್ಮದ್ ಜುನೈದ್, ಚೆನ್ನೈಯ ಮದ್ರಾಸ್ ವಿ.ವಿ. (73.54ಮೀ.)-3.
ಮಹಿಳೆಯರ ವಿಭಾಗ:
ಪೋಲ್ ವಾಲ್ಟ್: ವಂಶಿಕಾ ಗಂಘಾಸ್, ಮೊಹಾಲಿ ಚಂಡೀಗಢ ವಿ.ವಿ. (3.70ಮೀ. ಎತ್ತರ)-1, ಕಾರ್ತಿಕಾ ವಿ., ಚೆನ್ನೈ ಮದ್ರಾಸ್ ವಿ.ವಿ. (3.70)-2, ನೇಖಾ ಎಲ್ದೋ, ಕೇರಳದ ಕ್ಯಾಲಿಕಟ್ ವಿ.ವಿ. (3.70)-3. (ಜಿಗಿತದ ಎತ್ತರ ಸಮವಾದರೆ, ಫೌಲ್‌ಗಳನ್ನು ಪರಿಗಣಿಸಿ ಸ್ಥಾನ ನಿರ್ಧರಿಸಲಾಗುತ್ತದೆ).
1500 ಮೀ. ಓಟ: ಅನಿಷಾ ಪಟೇಲ್, ಅಯೋಧ್ಯಾ ಡಾ.ರಾಮಮನೋಹರ ಲೋಹಿಯಾ ವಿ.ವಿ. (4:22.80 ನಿ. ಸಮಯ)-1, ಮಿಲಾಲಿ ದೀಪಕ್ ಬೋಯಾರ್, ನಾಗಪುರ, ತುಕ್ದೋಜಿ ಮಹರಾಜ ವಿ.ವಿ. (4:24.04)-2, ಅಂಜು, ವಿಜಯವಾಡ ಕೆ.ಎಲ್. ವಿಶ್ವವಿದ್ಯಾಲಯ (4:25.12)-3.
100 ಮೀ. ಹರ್ಡಲ್ಸ್: ಅಕ್ಷಿದಾ ಎಸ್, ಚೆನ್ನೈ ಅಣ್ಣಾ ವಿ.ವಿ. (13.75 ನಿ. ಸಮಯ (13.741)-1, ಶ್ರೀರೇಷ್ಮಾ, ಚೆನ್ನೈ ಮದ್ರಾಸ್ ವಿ.ವಿ. (13.75 (13.744)-2, ಕೆ.ಯಾಮಿನಿ, ಚೆನ್ನೈ ಮದ್ರಾಸ್ ವಿ.ವಿ. (13.84)-3. (ಓಟದ ಸಮಯ ಸಮವಾದರೆ, ಸಾವಿರದಿಂದ ವಿಭಾಗಿಸಿ ಅಂಕಿಅಂಶ ಪರಿಗಣಿಸಲಾಗುತ್ತದೆ)
ಲಾಂಗ್ ಜಂಪ್: ಮುಬಾಸ್ಸಿನಾ ಮೊಹಮ್ಮದ್, ಆಂಧ್ರಪ್ರದೇಶದ ಎಸ್.ಆರ್.ಎಂ. ವಿ.ವಿ. (6.15ಮೀ.)-1, ಶ್ರೀದೇವಿಕಾ ವಿ.ಎಸ್., ಮಂಗಳೂರು ವಿ.ವಿ (6.06ಮೀ.)-2, ಒ. ಪಮಿಲಾ ವರ್ಷಿಣಿ, ಚೆನ್ನೈ ಮದ್ರಾಸ್ ವಿಶ್ವವಿದ್ಯಾಲಯ (5.87ಮೀ.)-3.
ಹೆಪ್ಟಾಥ್ಲಾನ್: ಅನಾಮಿಕಾ, ಆಂಧ್ರಪ್ರದೇಶ ಎಸ್.ಆರ್.ಎಂ. ವಿ.ವಿ (5158 ಅಂಕ)-1, ಕೀರ್ತಿ ಈಶ್ವರ್‌ಲಾಲ್, ಪಂಜಾಬ್ ಲವ್ಲೀ ಪ್ರೊಫೆಷನ್ ವಿ.ವಿ. (4979)-2, ಇಶಾ ನೇಗಿ, ಭುವನೇಶ್ವರ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (4949)-3.
ಶಾಟ್‌ಪಟ್: ಅನುಪ್ರಿಯಾ, ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯ (14.53 ಮೀ. ದೂರ)-1, ಜಾಸ್ಕನ್‌ವಾಲ್ ಕೌರ್ , ಪಾಟಿಯಾಲ ಪಂಜಾಬಿ ವಿಶ್ವವಿದ್ಯಾಲಯ(14.50)-2, ಸೋನು ಕುಮಾರಿ, ಉದಯ್‌ಪುರ ಭೂಪಾಲ್ ನೊಬ್ಲೆಸ್ ವಿ.ವಿ. (14.44 ಮೀ.)-3.







