ಫೆ.9: ಎಸ್.ಎಸ್.ವಿ.ಪಿ. ಶತಮಾನೋತ್ಸವ ಉದ್ಘಾಟನೆ

ಮಂಗಳೂರು: ಎಸ್.ಎಸ್.ವಿ.ಪಿ. ಎಂದು ಜನಪ್ರಿಯವಾಗಿರುವ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ, ಮಂಗಳೂರು ಕ್ಯಾಥೊಲಿಕ್ ಧರ್ಮಸಭೆಯಲ್ಲಿ ತನ್ನ ಅಸ್ತಿತ್ವದ ನೂರು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ. 2025ರ ಫೆ.9ರಂದು ಬಿಜೈ ಚರ್ಚ್ ಸಭಾಂಗಣದಲ್ಲಿ ಶತಮಾನೋತ್ಸವದ ಉದ್ಘಾಟನೆ ನೆರವೇರಲಿದೆ ಎಂದು ಸೆಂಟ್ರಲ್ ಕೌನ್ಸಿಲ್ ಅಧ್ಯಕ್ಷ ಜ್ಯೋ ಕುವೆಲ್ಲೊ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ. ಮ್ಯಾಕ್ಸಿಮ್ ನೊರೊನ್ಹಾರ ವರು ಶತಮಾನೋತ್ಸವದ ಲಾಂಛನ ವನ್ನು ಬಿಡುಗಡೆ ಮಾಡಲಿದ್ದಾರೆ. ಮಂಗಳೂರ್ ಸೆಂಟ್ರಲ್ ಕೌನ್ಸಿಲ್‌ನ ಆಧ್ಯಾತ್ಮಿಕ ಸಲಹೆಗಾರ ವಂ.ಫ್ರಾನ್ಸಿಸ್ ಡಿಸೋಜಾ ಶತಮಾನೋತ್ಸವದ ಘೋಷಣಾ ವಾಕ್ಯವನ್ನು ಬಿಡುಗಡೆ ಮಾಡುವರು. ಬಿಜೈ ಚರ್ಚ್ನ ಧರ್ಮಗುರು ವಂ. ಡಾ| ಜೆ.ಬಿ. ಸಲ್ಡಾನ್ಹಾ ಇವರು ಶತಮಾನೋತ್ಸವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಪಶ್ಚಿಮ ಭಾರತದ ಪ್ರಾದೇಶಿಕ ಮಂಡಳಿಯ ಸಂಯೋಜಕ ವಾಲ್ಟರ್ ಮಾರ್ಟಿಸ್, ಸೆಂಟ್ರಲ್ ಕೌನ್ಸಿಲ್ ಇದರ ಮಾಜಿ ಅಧ್ಯಕ್ಷ ಗಿಲ್ಬರ್ಟ್ ಪಿಂಟೊ, ಸೆಂಟ್ರಲ್ ಕೌನ್ಸಿಲ್ ಹಾಲಿ ಅಧ್ಯಕ್ಷ ಜ್ಯೋ ಕುವೆಲ್ಲೊ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ವಿಶ್ವದ ಅತಿ ದೊಡ್ಡ ಕ್ಯಾಥೊಲಿಕ್ ಸಮಾನ ಮನಸ್ಕ ಸೇವಾ ಸಂಸ್ಥೆಯಾದ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಮಂಗಳೂರಿನ ಬೆಂದೂರ್ ಚರ್ಚ್ನಲ್ಲಿ ಜನವರಿ 1926ರಲ್ಲಿ ಅಸ್ತಿತ್ವಕ್ಕೆ ಬಂತು. ಅದೇ ತಿಂಗಳಲ್ಲಿ ಮಿಲಾಗ್ರಿಸ್ ಘಟಕದ ಸ್ಥಾಪನೆಯಾಯಿತು. ನಂತರ 1926 ಇಸವಿಯ ಮೇ ತಿಂಗಳಲ್ಲಿ ಇನ್ನೂ ಎರಡು ಘಟಕಗಳು ರೊಸಾರಿಯೊ ಕೆಥಡ್ರಾಲ್ ಮತ್ತು ಬಿಜೈ ಚರ್ಚ್ನಲ್ಲಿ ಅಸ್ತಿತ್ವಕ್ಕೆ ಬಂದವು.
ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಪ್ರಮುಖ ಸೇವಾ ಕೆಲಸವೆಂದರೆ ಬಡವರು ಮತ್ತು ನಿರ್ಗತಿಕರನ್ನು ಬೇಟಿಯಾ ಗುವುದು ಮತ್ತು ಅವರಿಗೆ ತಮ್ಮದೇ ಪರಿಸರದಲ್ಲಿ ಪರಿಹಾರವನ್ನು ವಿತರಿಸುವುದು. ಹೀಗೆ ಪರಿಹಾರವನ್ನು ವಿತರಿಸುವಾಗ ಎಸ್.ಎಸ್.ವಿ.ಪಿ. ಅವರ ಆತ್ಮಗೌರವ ಮತ್ತು ಅನಾಮಧೇಯತೆಯನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಪ್ರತೀ ಘಟಕವು ತಮ್ಮ ಪರಿಸರದಲ್ಲಿ ಕನಿಷ್ಠ 5 ಕುಟಂಬಗಳನ್ನು ದತ್ತು ಪಡೆದು ಅವರನ್ನು ತಮ್ಮದೇ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ.
ಮಂಗಳೂರು ಸೆಂಟ್ರಲ್ ಕೌನ್ಸಿಲ್ ಇದರ ಆಶ್ರಯದಲ್ಲಿ ಸೇವೆ ಮಾಡುವ ಘಟಕಗಳು, 623 ದತ್ತು ಕುಟಂಬಗಳನ್ನು ಹಾಗೂ 1765 ಕುಟಂಬದ ಸದಸ್ಯರನ್ನು ಹೊಂದಿದೆ. 1926 ಇಸವಿಯಲ್ಲಿ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಮಂಗಳೂರಿ ನಲ್ಲಿ ಅಸ್ತಿತ್ವಗೊಂಡ ಮೇಲೆ ಅದು ಇಡೀ ಮಂಗಳೂರು ಧರ್ಮ ಪ್ರಾಂತ್ಯಕ್ಕೆಹರಡಿದೆ. ಇಂದು ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ 111 ಘಟಕಗಳು ಮತ್ತು 3 ಯುವ ಘಟಕಗಳು ಸಕ್ರೀಯವಾಗಿವೆ. 1539 ಸದಸ್ಯ ಬಲ ಹೊಂದಿರುವ ಎಸ್.ಎಸ್.ವಿ.ಪಿ. ಬಡವರ ಸೇವೆಯಲ್ಲಿ ಯಾವುದೇ ಪ್ರಚಾರವಿಲ್ಲದೆ ತೊಡಗಿಸಿಕೊಂಡಿದೆ. ಪ್ರಸ್ತುತ ಎಸ್.ಎಸ್.ವಿ.ಪಿ.ಯ ವಜ್ರಮಹೋತ್ಸವ ಆರೋಗ್ಯ ಯೋಜನೆ ತುಂಬಾ ಜನಪ್ರಿಯವಾಗಿದೆ. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಮಂಗಳೂರು ಮತ್ತು ತುಂಬೆ ಇವರ ಸಹಯೋಗದೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಯು ದತ್ತು ಪಡೆದ ಕುಟುಂಬಗಳ ಸದಸ್ಯರಿಗೆ ಉಚಿತ ವೈದ್ಯಕೀಯ ಮತ್ತು ಡಯಾಲಿಸಿಸ್ ಆರೈಕೆಯನ್ನು ಒದಗಿಸುತ್ತದೆ.
ಶತಮಾನೋತ್ಸವದ ಸವಿನೆನಪಿಗಾಗಿ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳಲ್ಲಿ ಪ್ರಮುಖ ಯೋಜನೆಗಳೆಂದರೆ, ಎಸ್.ಎಸ್.ವಿ.ಪಿ.ಯ ದತ್ತು ಕುಟಂಬಗಳ ಸುಮಾರು 405 ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು. ಆಸ್ರೊ – ನೂರು ಕುಟಂಬಗಳಿಗೆ ತಮ್ಮ ಮನೆಗಳನ್ನು ನಿರ್ಮಿಸಲು ಅಥವಾ ದುರಸ್ತಿ ಮಾಡಲು ಧನ ಸಹಾಯ ಮಾಡುವುದಾಗಿದೆ ಎಂದವರು ತಿಳಿಸಿದ್ದಾರೆ.
*ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಇತಿಹಾಸ:
1833 ಇಸವಿಯಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್‌ನ 22 ವರ್ಷದ ತರುಣ ಪೂಜ್ಯ ಫ್ರೆಡ್ರಿಕ್ ಒಜಾನಮ್ ಮತ್ತು ಅವರ 6 ಒಡನಾಡಿಗಳು ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯನ್ನು ಸ್ಥಾಪಿಸಿದರು. ಇಂದು ಇದು ವಿಶ್ವದ 158 ದೇಶಗಳಲ್ಲಿ ಹರಡಿದೆ. 8 ಲಕ್ಷಕ್ಕೂ ಅಧಿಕ ಸದಸ್ಯರು ಮತ್ತು ಹತ್ತು ಲಕ್ಷಕ್ಕೂ ಮಿಕ್ಕಿ ಸ್ವಯಂಸೇವಕರು ದೀನ ದಲಿತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ 1863 ಇಸವಿಯಲ್ಲಿ ಮುಂಬಯಿಯಲ್ಲಿ ಸ್ಥಾಪನೆಗೊಂಡು, ಪ್ರಸ್ತ್ತುತ ಭಾರತದಲ್ಲಿ 7225 ಘಟಕಗಳು ಮತ್ತು 65546 ಸದಸ್ಯರನ್ನು ಹೊಂದಿದೆ ಎಂದವರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಸೆಂಟ್ರಲ್ ಕೌನ್ಸಿಲ್ ಕಾರ್ಯದರ್ಶಿ ಲಿಗೋರಿ ಫೆರ್ನಾಂಡೀಸ್,ಖಜಾಂಜಿ ಕ್ಲಾರೆನ್ಸ್ ಮಚಾದೊ, ಶತಮಾನೋತ್ಸವ ಆಚರಣೆ ಸಮಿತಿಯ ಸಂಚಾಲಕಿ ಫಿಲೋಮಿನಾ ಮೆನೆಜಸ್,ಮಾಧ್ಯಮ ಸಮಿತಿ ಸಂಚಾಲಕ ಲಾಯ್ಡ್ ರೇಗೊ ಮೊದಲಾದ ವರು ಉಪಸ್ಥಿತರಿದ್ದರು.