ಎ.9ರಂದು ದ.ಕ. ಜಿಲ್ಲೆಯಲ್ಲಿ 'ಜನಾಕ್ರೋಶ ಯಾತ್ರೆ': ವೇದವ್ಯಾಸ ಕಾಮತ್

ವೇದವ್ಯಾಸ ಕಾಮತ್
ಮಂಗಳೂರು: ರಾಜ್ಯದಲ್ಲಿ ಕಳೆದ 20 ತಿಂಗಳಿನಿಂದಲೂ ನಿರಂತರ ಬೆಲೆ ಏರಿಕೆ, ದಲಿತರ ಹಣ ಲೂಟಿ, ಹಿಂದೂ ವಿರೋಧಿ ನೀತಿ, ಮುಸ್ಲಿಂ ಓಲೈಕೆ, ರೈತರ ನಿರ್ಲಕ್ಷ್ಯ ಹೀಗೆ ಸಾಲು ಸಾಲು ವೈಫಲ್ಯಕ್ಕೀಡಾಗಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಇಡೀ ರಾಜ್ಯದ ಜನತೆ ಬೇಸತ್ತಿದ್ದಾರೆ. ಅಂತಹ ಜನ ವಿರೋಧಿ ಆಡಳಿತ ನೀಡುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಇಂದಿನಿಂದ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆಯು ಆರಂಭಗೊಂಡಿದ್ದು ಎ.9ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ನಗರದ ಅಟಲ್ ಸೇವಾ ಕೇಂದ್ರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಜನತೆಯಲ್ಲಿ ಮಡುಗಟ್ಟಿರುವ ಆಕ್ರೋಶದ ಬಿಸಿಯನ್ನು ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಟ್ಟಿಸುವ ಭಾಗವಾಗಿ ಎ.9 ರಂದು ಅಪರಾಹ್ನ 3 ಗಂಟೆಗೆ ಮಂಗಳೂರಿನ ಅಂಬೇಡ್ಕರ್ ಸರ್ಕಲ್ ನಿಂದ ಕ್ಲಾಕ್ ಟವರ್ ವರೆಗೆ ಜನಾಕ್ರೋಶ ಯಾತ್ರೆ ನಡೆಯಲಿದೆ. ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಅಶ್ವತ್ಥನಾರಾಯಣ, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲು, ಸಂಸದ ಬ್ರಿಜೇಶ್ ಚೌಟ ಸಹಿತ ಅನೇಕ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದು ಈಗಾಗಲೇ ಈ ಹೋರಾಟದ ಯಶಸ್ಸಿಗೆ ಅಗತ್ಯವಿರುವ ಸಕಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ ಎಂದರು.
ನಾಡಿನ ಜನತೆಗೆ ಕಾಂಗ್ರೆಸ್ ಸರ್ಕಾರದಲ್ಲಿ ನಿಯಂತ್ರಣವಿಲ್ಲದ ಬೆಲೆಯೇರಿಕೆಯಿಂದಾಗಿ ಜನರಿಗಾಗುತ್ತಿರುವ ಅನ್ಯಾಯ, ಹದಗೆಟ್ಟ ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮಿತಿಮೀರಿದ ತುಷ್ಟಿಕರಣ, ಹೀಗೆ ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯ ಹಿಂದೆಂದೂ ಕಂಡಿರದಂತಹ ದುರಾಡಳಿತವನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಒಂದು ಅಸಮರ್ಥ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಳ್ಳಲು ಇದಕ್ಕಿಂತ ಇನ್ನೇನು ಬೇಕು? ಆ ನಿಟ್ಟಿನಲ್ಲಿ ಇದೀಗ ಜನತೆಯ ನೋವಿಗೆ ಧ್ವನಿಯಾಗಿ ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದೆ ವೇದವ್ಯಾಸ್ ಕಾಮತ್ ಹೇಳಿದರು.
ಸುದ್ದಿಗೋಷ್ಠಿಯಲ್ಲ ಪೂರ್ಣಿಮಾ, ರಮೇಶ್ ಹೆಗ್ಡೆ, ಕಿರಣ್ ರೈ, ಜಯಲಕ್ಷ್ಮಿ ಶೆಟ್ಟಿ, ಉಪಸ್ಥಿತರಿದ್ದರು.