ಜು.9: ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಅಖಿಲ ಭಾರತ ಮುಷ್ಕರ
ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಕ್ಲಾಕ್‌ಟವರ್‌ವರೆಗೆ ಮೆರವಣಿಗೆ

ಮಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳು (ಜೆಸಿಟಿಯು) ಹಾಗೂ ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)ಗಳ ಜಂಟಿ ನೇತೃತ್ವದಲ್ಲಿ ಮಧ್ಯಮ ವರ್ಗದ ನೌಕರರ ಸಂಘಟನೆಗಳ ಸಹಕಾರದೊಂದಿಗೆ ಜು.9ರಂದು ಅಖಿಲ ಭಾರತ ಮುಷ್ಕರ ನಡೆಯಲಿದೆ. ಈ ನಿಟ್ಟಿನಲ್ಲಿ ಅಂದು ಬೆಳಗ್ಗೆ 10ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ (ಜ್ಯೋತಿ ವೃತ್ತ) ನಿಂದ ಕಾರ್ಮಿಕರ ಮೆರವಣಿಗೆ ಹೊರಡಲಿದ್ದು, 10:30ಕ್ಕೆ ನಗರದ ಕ್ಲಾಕ್‌ಟವರ್ ಬಳಿ ಪ್ರತಿಭಟನಾ ಸಭೆ ಜರುಗಲಿದೆ ಎಂದು ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪೀಕರಿಸಲಾಗಿದೆ. ಇದರಿಂದಾಗಿ ಭಾರತದ ಶೇ.70 ಕಾರ್ಮಿಕರಿಗೆ ಕಾರ್ಮಿಕ ಕಾನೂನು ಗಳು ಅನ್ವಯವಾಗುವುದಿಲ್ಲ. ಸಂಘ ಕಟ್ಟುವ ಹಕ್ಕು, ಬೇಡಿಕೆಯ ಹಕ್ಕು, ಒಪ್ಪಂದ ಏರ್ಪಡಿಸುವ ಹಕ್ಕು ಹಾಗೂ ಮುಷ್ಕರದ ಹಕ್ಕನ್ನು ಕೂಡಾ ನಿರಾಕರಿಸಲಾಗಿದೆ. ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲು ಹಾಗೂ ಓವರ್ ಟೈಮ್ 3 ತಿಂಗಳಿಗೆ 50 ಗಂಟೆ ಇದ್ದುದನ್ನು 125 ಗಂಟೆಗೆ ಹೆಚ್ಚಿಸಲು ಅನುಮತಿ ನೀಡಲು ಈ ಸಂಹಿತೆಗಳಲ್ಲಿ ತಿದ್ದುಪಡಿ ತರಲಾಗಿದೆ. ಸಾಮೂಹಿಕ ಭದ್ರತೆಯ ಭಾಗವಾಗಿ ನಿವೃತ್ತಿಯಾದ ಕಾರ್ಮಿಕರಿಗೆ ಕನಿಷ್ಠ 9,000 ರೂ. ನಿವೃತ್ತಿ ವೇತನ ನೀಡುವ ಬದಲಿಗೆ ಇಇಎಸ್‌ಐ ಮತ್ತು ಪಿಎಫ್ ಆಯ್ಕೆಯ ಸ್ವಾತಂತ್ರ್ಯವನ್ನು ಮಾಲಕರಿಗೆ ನೀಡಲಾಗಿದೆ. ಐಎಲ್‌ಒ ಒಡಂಬಡಿ ಕೆಗಳಿಗೂ ತಿಲಾಂಜಲಿ ನೀಡಿ ಐಎಲ್‌ಸಿಯನ್ನು ಕಡೆಗಣಿಸುವ ಮೂಲಕ ಮೋದಿ ಸರಕಾರ ಸರ್ವಾಧಿಕಾರ ಪ್ರದರ್ಶಿಸುತ್ತಿದೆ ಎಂದು ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆರಿಂಜ, ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ. ಎಐಕೆಎಸ್ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಕರುಣಾಕರ ಮಾರಿಪಳ್ಳ, ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು.







