ಐವನ್ ಡಿ ಸೋಜ ನೇತೃತ್ವದ ನಿಯೋಗ ಆರ್‌ಟಿಒ ಭೇಟಿ

ಮಂಗಳೂರು, ಅ.16: ಬಸ್, ರಿಕ್ಷಾ, ಟೆಂಪೊ ಹಾಗೂ ಇತರ ಗೂಡ್ಸ್ ವಾಹನಗಳ ಚಾಲಕರು ಮತ್ತು ನಿರ್ವಾಹಕರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಿಗುವ ಕಾರ್ಮಿಕ ಸವಲತ್ತುಗಳನ್ನು ಪಡೆಯಲು ವಾಹನ ಪರವಾನಿಗೆ ಜೊತೆಗೆ ಬ್ಯಾಡ್ಜ್ ಪಡೆಯುವುದು ಕಡ್ಡಾಯವಾಗಿದ್ದು, ಈ ಬಗ್ಗೆ ಮಾಹಿತಿ ಶಿಬಿರ ಆಯೋಜಿಸಿ ಬ್ಯಾಡ್ಜ್ ನೀಡುವಂತೆ ದ.ಕ ಜಿಲ್ಲಾ ಕಾರ್ಮಿಕ ಪರಿಷತ್ ಮತ್ತು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಐವನ್ ಡಿ ಸೋಜ ಅವರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಐವನ್ ಡಿ ಸೋಜ ನೇತೃತ್ವದ ನಿಯೋಗವು ಮಂಗಳೂರಿನ ಆರ್‌ಟಿಒ ಅಧಿಕಾರಿ ರವಿಶಂಕರ್ ಅವರನ್ನು ಭೇಟಿಯಾಗಿ ಶೇ.60ರಷ್ಟು ವಾಹನ ಚಾಲಕರು, ನಿರ್ವಾಹಕರು ಬ್ಯಾಡ್ಜ್ ಪಡೆಯದೇ ಇರುವುದರಿಂದ ಮತ್ತು ಬ್ಯಾಡ್ಜ್ ಪಡೆಯಲು ಇರುವ ಅರ್ಹತೆ ಬಗ್ಗೆ ಮಾಹಿತಿ ಕೊರತೆಯಿಂದ ಬ್ಯಾಡ್ಜ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಾರ್ಮಿಕರಿಗೆ ಸಿಗುವ ಸವಲತ್ತುಗಳಿಂದ ವಂಚಿತರಾಗುವ ಬಗ್ಗೆ ಮಾಹಿತಿ ನೀಡಿದರು.
ನಿಯೋಗದಲ್ಲಿ ಆಟೋರಿಕ್ಷಾ ಚಾಲಕ ಸಂಘದ ಉಪಾಧ್ಯಕ್ಷ ವಸಂತ್ ಶೆಟ್ಟಿ, ಕಾರ್ಯದರ್ಶಿ ಶೇಖರ್ ದೇರಳಕಟ್ಟೆ, ಕೋಶಾಧಿಕಾರಿ ವಿಲ್‌ಫ್ರೇಡ್ ಫೆರ್ನಾಂಡಿಸ್, ಸಿದ್ದು ಮುಂತಾದವರು ಉಪಸ್ಥಿತರಿದ್ದರು.





