ಮರಳು ಮಾಫಿಯಾ ಖಂಡಿಸಿ ಪಾವೂರು ಉಳಿಯ ದ್ವೀಪದ ನಿವಾಸಿಗಳಿಂದ ವಿಶಿಷ್ಟ ರೀತಿಯಲ್ಲಿ ಮಾನವ ಸರಪಳಿ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದಂದೇ ಆಕ್ರೋಶ

ಮಂಗಳೂರು: ಸಾಕಷ್ಟು ಪ್ರತಿರೋಧದ ಮಧ್ಯೆಯೂ ಪಾವೂರು ಉಳಿಯ ದ್ವೀಪದಲ್ಲಿ ನಡೆಯುವ ಅಕ್ರಮ ಮರಳುಗಾರಿಕೆ ತಡೆಯಲು ವಿಫಲವಾದ ಆಡಳಿತ ವ್ಯವಸ್ಥೆಯ ನೀತಿಯನ್ನು ಖಂಡಿಸಿ ಱಒಂದೋ ಬದುಕಿಸಿ- ಇಲ್ಲವೇ ಸಾಯಿಸಿೞ ಎಂಬ ಘೋಷಣೆಯೊಂದಿಗೆ ಪಾವೂರು ಉಳಿಯ ದ್ವೀಪದ ನಿವಾಸಿಗಳು ರವಿವಾರ ನದಿನೀರಿನಲ್ಲಿ ನಿಂತು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ಅಂಗವಾಗಿ ಮಾನವ ಸರಪಳಿ ನಡೆಸಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಸಾರ್ವಜನಿಕರನ್ನು ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಪಾವೂರು ಉಳಿಯ ದ್ವೀಪ ಪ್ರದೇಶದಲ್ಲಿ ಮತ್ತೆ ಅಕ್ರಮ ಮರಳುಗಾರಿಕೆ ಆರಂಭಗೊಂಡಿದೆ. ಇದರಿಂದ ದ್ವೀಪ ಮುಳುಗಡೆ ಭೀತಿ ಎದುರಿಸುತ್ತಿವೆ ಎಂದು ಆರೋಪಿಸಿದ ದ್ವೀಪ ನಿವಾಸಿಗಳು ನೀರಿನಲ್ಲಿ ಭಾಗಶಃ ಮುಳುಗಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಮೂರು ತಿಂಗಳ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ದ್ವೀಪದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕೆಡಿಪಿ ಸಭೆಯಲ್ಲಿ ಮರಳು ದಂಧೆಗೆ ಕಡಿವಾಣ ಹಾಕುವಂತೆ ಸಚಿವರು ಸೂಚನೆ ನೀಡಿದ ಬೆನ್ನಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಳುಗಾರಿಕೆ ಸ್ಥಗಿತಗೊಳಿಸಿದ್ದರೂ ಇದೀಗ ಕೆಲವು ದಿನಗಳಿಂದ ಮತ್ತೆ ಈ ದ್ವೀಪ ಪ್ರದೇಶದಲ್ಲಿ ಅಕ್ರಮ ಮರಳು ಗಾರಿಕೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.







