ಜಾರ್ಖಂಡ್ ಮೂಲದ ಕಾರ್ಮಿಕ ನಾಪತ್ತೆ

ಮಂಗಳೂರು: ಕೆಲಸಕ್ಕೆಂದು ಮಂಗಳೂರಿಗೆ ಬಂದಿದ್ದ ಜಾರ್ಖಂಡ್ ಮೂಲದ ಅಮೀರ್ ಖಾನ್ (26) ಎಂಬ ಕಾರ್ಮಿಕ ನಾಪತ್ತೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಣಾಜೆ ಸಮೀಪದ ಮುಡಿಪುವಿನಲ್ಲಿರುವ ರೆಡ್ ಸ್ಟೋನ್ ಪೋರ್ಟ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಮೀರ್ ಖಾನ್ ಬಳಿಕ ಅಲ್ಲಿ ಕೆಲಸವನ್ನು ಬಿಟ್ಟು ಬೈಕಂಪಾಡಿಯ ಸ್ಕ್ಯಾನ್ ವಾಲ್ ಯಾರ್ಡ್ ಬಳಿಯಿರುವ ತನ್ನ ಮಾವನ ರೂಮಿನಲ್ಲಿ 2 ದಿನಗಳ ಕಾಲ ತಂಗಿದ್ದರು. ಡಿ.31ರಂದು ಬೇರೆ ಕಂಪೆನಿಯೊಂದಕ್ಕೆ ಕೆಲಸಕ್ಕೆ ಸೇರಿಕೊಳ್ಳಲು ಹೋಗುತ್ತಿರುವುದಾಗಿ ಹೇಳಿ ಬೈಕಂಪಾಡಿಯಲ್ಲಿರುವ ಮಾವನ ರೂಮಿನಿಂದ ಹೊರಟು ಹೋದಾತ ವಾಪಾಸ್ ಬಾರದೆ, ಊರಿಗೂ ತೆರಳದೆ, ಮನೆಯವರ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಸುಮಾರು 5.5 ಅಡಿ ಎತ್ತರದ, ಸಾಧಾರಣ ಶರೀರದ, ಗೋಧಿ ಮೈಬಣ್ಣದ ಅಮೀರ್ ಖಾನ್ ಕಾಣೆಯಾದ ದಿನ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಮತ್ತು ಗ್ರೇ ಬಣ್ಣದ ಪ್ಯಾಂಟ್ ಧರಿಸಿದ್ದರು. ಹಿಂದಿ ಹಾಗೂ ಜಾರ್ಖಂಡ್‌ನ ಕೋಟ ಭಾಷೆ ಮಾತನಾಡುತ್ತಿದ್ದರು. ಇವರ ಗುರುತು ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





