ನ.29ರಂದು ಮಂಗಳೂರಿನಲ್ಲಿ ನಶಮುಕ್ತ ಕ್ಯಾಂಪಸ್ ಬೃಹತ್ ವಾಕಥಾನ್

ಮಂಗಳೂರು , ನ.26 : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಇದರ ಆಶ್ರಯದಲ್ಲಿ ‘ನಶಮುಕ್ತ ಭಾರತ, ನಶಮುಕ್ತ ಕ್ಯಾಂಪಸ್ ’ ಧ್ಯೇಯದೊಂದಿಗೆ ಬೃಹತ್ ವಾಕಥಾನ್ ಕಾರ್ಯಕ್ರಮವು ನ.29 ರಂದು ಬೆಳಗ್ಗೆ 7:00ಗೆ ಮಂಗಳೂರಿನ ಮಂಗಳ ಕ್ರೀಡಾಂಗಣದಿಂದ ಕರಾವಳಿ ಉತ್ಸವ ಮೈದಾನದವರೆಗೆ ನಡೆಯಲಿದೆ ಎಂದು ನ್ಯಾಶನಲ್ ಅಲೈಡ್ ಆ್ಯಂಡ್ ಹೆಲ್ತ್ ಕೌನ್ಸಿಲ್ ನ ರಾಜ್ಯ ಅಧ್ಯಕ್ಷ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ.ಯು.ಟಿ.ಇಫ್ತಿಕರ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿ ವ್ಯಾಪ್ತಿಗೊಳಪಟ್ಟ 113 ವೈದ್ಯಕೀಯ, ಅರೆವೈದ್ಯಕೀಯ ಸೇರಿದಂತೆ, ವಿವಿಧ ಕಾಲೇಜುಗಳ ಸಹಕಾರಲ್ಲಿ ವಾಕಥಾನ್ ನಡೆಯಲಿದ್ದು, ಕಾರ್ಯಕ್ರಮದ ವೇಳೆ ಅಂಗಾಂಗ ದಾನ ಕುರಿತಂತೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ರಾಜ್ಯ ವಿಧಾನಸಭೆಯ ಸಭಾಪತಿ ಯು.ಟಿ ಖಾದರ್ ಚಾಲನೆ ನೀಡಲಿರುವರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ , ಆರ್ಜಿಯುಎಚ್ಎಸ್ ಉಪಕುಲಪತಿ ಡಾ.ಭಗವಾನ್ ಭಾಗವಹಿಸಲಿರುವರು ಎಂದು ಸಿಂಡಿಕೇಟ್ ಸದಸ್ಯ ಡಾ. ಶಿವಶರಣ್ ಶೆಟ್ಟಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಹಿತ ಶಿಕ್ಷಕರು, ಸಿಬ್ಬಂದಿ, ಆಡಳಿತ ಮಂಡಳಿಯ ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆರ್ಜಿಯುಎಚ್ಎಸ್ ಸೆನೆಟ್ ಸದಸ್ಯೆ ಪ್ರೊ. ವೈಶಾಲಿ ಶ್ರೀಜಿತ್ , ಕಾರ್ಯಕ್ರಮ ಸಂಯೋಜಕ ಡಾ.ಶಣ್.ಜೆ ಶೆಟ್ಟಿ, ಸಂಚಾಲಕ ಪ್ರೊ.ಮುಹಮ್ಮದ್ ಸುಹೈಲ್, ಪ್ರಮುಖರಾದ ಡಾ.ಅಜಿತ್, ಡಾ.ಸಲೀಮುಲ್ಲಾ , ಡಾ.ವಿಜಯ್ ಉಪಸ್ಥಿತರಿದ್ದರು.







