ಪಿಎಸಿಎಲ್ ಹಣಕಾಸು ಸಂಸ್ಥೆಯ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮನವಿ

ಮಂಗಳೂರು, ಆ.23: ಪರ್ಲ್ಸ್ ಆಗ್ರೋಟೆಕ್ ಕಾರ್ಪೊರೇಷನ್ ಲಿಮಿಟೆಡ್ (ಪಿಎಸಿಎಲ್) ಎಂಬ ಹೆಸರಿನಲ್ಲಿ ಪ್ರಾರಂಭ ಗೊಂಡ ಹಣಕಾಸು ಸಂಸ್ಥೆಯು ನಗರದ ಹಲವು ಮಂದಿಯ ಹಣ ಪಡೆದು ಬಳಿಕ ಲಾಬಾಂಶ ನೀಡದೆ ವಂಚಿಸಿದ್ದು, ಸಂತ್ರಸ್ತ ರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ದ.ಕ.ಜಿಲ್ಲಾ ಪಿಎಸಿಎಲ್ ಏಜೆಂಟರ ಹೋರಾಟ ಸಮಿತಿಯ ನಿಯೋಗವು ಬುಧವಾರ ದ.ಕ. ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಈ ಕಂಪೆನಿಯು ದೇಶದ ವಿವಿಧ ಭಾಗಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಿ ಸಾರ್ವಜನಿಕರಿಂದ ಹಣವನ್ನು ಪಡೆದು ಅದನ್ನು ಭೂ ವ್ಯವಹಾರ (ರಿಯಲ್ ಎಸ್ಟೇಟ್)ದಲ್ಲಿ ತೊಡಗಿಸಿ ಲಾಭಾಂಶವನ್ನು ಕೊಡುವುದಾಗಿ ತಿಳಿಸಿ ದೇಶಾದ್ಯಂತ 49,100 ಕೋ.ರೂ.ಗಳ ಹಗರಣ ನಡೆಸಿದೆ. ಸುಮಾರು 1.49 ಮಿಲಿಯನ್ ಹೂಡಿಕೆದಾರರಿಗೆ ಮೋಸಮಾಡಿವೆ. ಜಿಲ್ಲೆಯಲ್ಲಿ 20 ವರ್ಷಗಳ ಹಿಂದೆ ಪ್ರಾರಂಭಗೊಂಡ ಪಿಎಸಿಎಲ್ ಸಂಸ್ಥೆಯು ಸುಮಾರು 5 ಸಾವಿರದಷ್ಟು ಗ್ರಾಹಕರಿಂದ ಸಾವಿರ ಕೋ.ರೂ. ಪಡೆದು ವಂಚಿಸಿವೆ.
ಈ ಸಂಸ್ಥೆಯ ಮೋಸದ ಹಗರಣ ಬೆಳಕಿಗೆ ಬಂದ ಬಳಿಕ ಸರಕಾರ ಸಿಬಿಐ ತನಿಖೆಗೆ ಒಳಪಡಿಸಿ ಅದರ ಎಲ್ಲಾ ವ್ಯವಹಾರ ಗಳು ಕಾನೂನು ಬಾಹಿರ ಎಂದು ಘೋಷಿಸಿ ಅವುಗಳ ಎಲ್ಲಾ ಶಾಖೆಗಳನ್ನು ಮುಚ್ಚಲು ಆದೇಶ ಹೊರಡಿಸಿದೆ. ಈ ಸಂದರ್ಭ ಸುಮಾರು 66 ಕಂತುಗಳನ್ನು ಕಟ್ಟಿ ಅವಧಿ ಪೂರ್ಣಗೊಳಿಸಿದ ಹೂಡಿಕೆದಾರರು ನ್ಯಾಯಯುತವಾಗಿ ಸಿಗಬೇಕಾದ ಹಣ ಕ್ಕಾಗಿ ಅರ್ಜಿ ಸಲ್ಲಿಸಿದ ವೇಳೆ ಹೂಡಿಕೆದಾರರಿಂದ ಪಡೆದುಕೊಂಡ ಬಾಂಡ್‌ಗಳು ಪಿಎಸಿಎಲ್‌ನ ಸಂಸ್ಥೆಯ ಕೈವಶದಲ್ಲಿರು ವಾಗಲೇ ಸರಕಾರ ಶಾಖೆಗಳನ್ನು ಮುಚ್ಚಿಸಿದ್ದರಿಂದ ಬಹುತೇಕ ಹೂಡಿಕೆದಾರರು ದಾಖಲೆಗಳನ್ನು ಕಳೆದುಕೊಂಡಿರುತ್ತಾರೆ. ಸುಪ್ರೀಂ ಕೋರ್ಟ್ ಹೂಡಿಕೆದಾರರಿಗೆ ಹಣವನ್ನು ಮರುಪಾವತಿಸಲು ಆದೇಶ ನೀಡಿದ್ದರೂ ಸೆಬಿ ಮಾತ್ರ ಕೇವಲ ಒಂದು ಕಂತಿನ ಹಣವನ್ನು ಕೆಲವು ಹೂಡಿಕೆದಾರರಿಗೆ ಪಾವತಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹೋರಾಟ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಗೌರವ ಸಲಹೆಗಾರರಾದ ಬಿಕೆ ಇಮ್ತಿಯಾಝ್, ಸಂತೋಷ್ ಬಜಾಲ್, ದಾಮೋದರ ಉಳ್ಳಾಲ, ಅಧ್ಯಕ್ಷ ತೆಲ್ಮ ಮೊಂತೆರೋ, ಪ್ರಧಾನ ಕಾರ್ಯದರ್ಶಿ ಆಸುಂತಾ ಡಿಸೋಜ, ಮುಖಂಡರಾದ ನಾನ್ಸಿ ಫೆರ್ನಾಂಡಿಸ್, ಶ್ಯಾಮಲಾ ಶಾಲಿನಿ, ವಾಯ್ಲೆಟ, ಜನಾರ್ದನ ಪುತ್ತೂರು,ಮೋಲಿ ಡಿಸೋಜ,ಸುನೀತಾ ಬಜಾಲ್ ನಿಯೋಗದಲ್ಲಿದ್ದರು.







