ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ| ಮಂಗಳೂರು: ಸರಕಾರದ ವೈಫಲ್ಯ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

ಮಂಗಳೂರು: ಬಂಟ್ವಾಳ ತಾಲೂಕಿನ ಕೊಳತ್ತಮಜಲುವಿನಲ್ಲಿ ಅಬ್ದುಲ್ ರಹ್ಮಾನ್‌ರ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿಯು ಶುಕ್ರವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು.
ಎಸ್‌ಡಿಪಿಐ ದ.ಕ.ಜಿಲ್ಲಾ ಉಪಾಧ್ಯಕ್ಷ ಮುನೀಶ್ ಅಲಿ ಮಾತನಾಡಿ ರಹ್ಮಾನ್ ಕೊಲೆ ಪ್ರಕರಣದಲ್ಲಿ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಯು ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿದೆ. ನ್ಯಾಯಕ್ಕಾಗಿ ಕೊಲೆಯಾದ ರಹ್ಮಾನ್ ಮತ್ತು ಗಾಯಾಳು ಕಲಂದರ್ ಶಾಫಿ ಕುಟುಂಬಸ್ಥರು ಇನ್ನೂ ಕೂಡ ಅಲೆದಾಡುತ್ತಿದೆ. ರಹ್ಮಾನ್ ಕೊಲೆ ಆರೋಪಿಗಳ ವಿರುದ್ಧ ದಾಖಲಿಸಲಾದ ಕೊಕ ಕಾಯ್ದೆಗೆ ಸಂಬಂಧಿಸಿ ಸರಕಾರಿ ಅಭಿಯೋಜಕರ ತರಾತುರಿಯ ಪ್ರಕ್ರಿಯೆ ಅಚ್ಚರಿ ಹುಟ್ಟಿಸಿದೆ ಎಂದು ಹೇಳಿದರು.
ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಮುಸ್ಲಿಮರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಎಡವಿದೆ. ದ.ಕ.ಜಿಲ್ಲೆಯ ವಿದ್ಯಮಾನದ ಬಗ್ಗೆ ಅವಲೋಕಿಸಲು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ರನ್ನು ಕೂಡ ದಾರಿ ತಪ್ಪಿಸಲಾಗಿದೆ ಎಂದರಲ್ಲದೆ, ದಕ್ಷ ಪೊಲೀಸ್ ಅಧಿಕಾರಿ ಎಂದು ಗುರುತಿಸಲ್ಪಟ್ಟ ದ.ಕ.ಜಿಲ್ಲಾ ಎಸ್ಪಿಯ ದಕ್ಷತೆಯು ರಹ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯಾಕಿಲ್ಲ? ಅವರ ಕರ್ತವ್ಯ ನಿಷ್ಠೆ ಏನಾಯಿತು? ಎಂದು ಪ್ರಶ್ನಿಸಿದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ ಕೊಲೆಯಾದ ರಹ್ಮಾನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ. ಜಾನುವಾರು ಸಾಗಾಟ ಪ್ರತಿಬಂಧಕ ಕಾಯ್ದೆಯ ಬಗ್ಗೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ತೋರುವ ಆಸಕ್ತಿಯು ಕೊಳತ್ತಮಜಲಿನ ರಹ್ಮಾನ್ ಕೊಲೆಗೆ ಪ್ರಕರಣಕ್ಕೆ ಇಲ್ಲದಿರುವುದು ವಿಷಾದನೀಯ ಎಂದರು.
ಎಸ್‌ಡಿಪಿಐ ದ.ಕ.ಜಿಲ್ಲಾ ಅಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಸ್ವಾಗತಿಸಿದರು.







