ಅಬ್ದುಲ್ ರಹ್ಮಾನ್ ಹತ್ಯೆ | ಕೊಲೆಗೆ ಸಂಚು ರೂಪಿಸಿದವರನ್ನು ಸಹಿತ ಅರೋಪಿಗಳನ್ನು ತಕ್ಷಣವೇ ಬಂಧಿಸಿ : ಎಸ್‌ಕೆಎಸ್‌ಎಸ್‌ಎಫ್ ಆಗ್ರಹ

ಪುತ್ತೂರು: ಕಾನೂನಿನ ಭಯವಿಲ್ಲದೆ ಕೋಮುವಾದಿ ಶಕ್ತಿಗಳು ನಿರಂತರ ದ್ವೇಷ ಭಾಷಣಗಳನ್ನು ನಡೆಸುತ್ತಿರುವುದರ ಪರಿಣಾಮವಾಗಿ ಅಮಾಯಕರಾದ ಅಬ್ದುಲ್ ರಹ್ಮಾನ್ ಎಂಬವರ ಹತ್ಯೆ ನಡೆದಿದೆ. ಈ ದುಷ್ಕೃತ್ಯದ ಕೊಲೆಗಾರರು, ಕೊಲೆಗೆ ಸಂಚು ರೂಪಿಸಿದವರನ್ನು ಮತ್ತು ಪ್ರಚೋದನಕಾರಿ ಭಾಷಣ ನಡೆಸಿದವರನ್ನು ತಕ್ಷಣವೇ ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯು ಪ್ರತಿಭಟನೆಯನ್ನು ನಡೆಸಲಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ದ.ಕ. ಈಸ್ಟ್ ಜಿಲ್ಲೆಯ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಎಚ್ಚರಿಸಿದ್ದಾರೆ.
ಅವರು ಗುರುವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೋಮು ಪ್ರೇರಿತ ಕೊಲೆಗಳ ಸರಣಿ ಮುಂದುವರಿಯುತ್ತಿದೆ. ಇದು ಸಾರ್ವಜನಿಕರನ್ನು ಭಯಭೀತರಾಗಿದೆ. ಕಳೆದ 3 ವರ್ಷಗಳ ಅವಧಿಯಲ್ಲಿ ಸುಮಾರು ನೂರಕ್ಕೂ ಅಧಿಕ ಕೋಮು ಪ್ರಕರಣವು ನಡೆದಿದ್ದು, ರಾಜ್ಯ ಸರ್ಕಾರಕ್ಕೆ ಇದರ ನಿಯಂತ್ರಣ ಸಾಧ್ಯವಾಗಿಲ್ಲ. ಕರಾವಳಿಯಲ್ಲಿ ನೆಮ್ಮದಿ ಜೀವನ ಮರೀಚಿಕೆಯಾಗಿದೆ. ರಾಜ್ಯ ಸರ್ಕಾರದಿಂದ ಕೋಮು ಹತ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಿಂದಿನ ಸರ್ಕಾರವು ಅಲ್ಪ ಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿತ್ತು. ಇದರಿಂದ ಮುಕ್ತಿ ಸಿಗಬಹುದು ಎಂದು ಬಯಸಿ ಈ ಸರ್ಕಾರವನ್ನು ಆರಿಸಿದರು. ಆದರೆ ಈ ಸರ್ಕಾರದಲ್ಲಿಯೂ ಪರಿಸ್ಥಿತಿ ಬದಲಾಗುತ್ತಿಲ್ಲ. ರಾಜ್ಯದ ಗೃಹ ಸಚಿವರಿಗೆ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅದ್ದರಿಂದ ರಾಜ್ಯದ ಗೃಹ ಸಚಿವರನ್ನು ಬದಲಾಯಿಸಿ ಶಕ್ತ ಗೃಹ ಸಚಿವರನ್ನು ನೇಮಿಸಬೇಕು. ಕರಾವಳಿಯಲ್ಲಿ ಕೋಮು ಹಿಂಸೆಗೆ ಶಾಶ್ವತ ಮುಕ್ತಿ ಸಿಗಬೇಕು. ಅಮಾಯಕರ ಹತ್ಯೆ ನಿಲ್ಲಬೇಕು ಎಂದು ಆಗ್ರಹಿಸಿದರು.
ಮೃತ ಅಬ್ದುಲ್ ರಹೀಂ ಜಾತ್ಯಾತೀತ ತತ್ವವನ್ನು ಅಳವಡಿಸಿಕೊಂಡು ಬದುಕಿದಂತಹ ವ್ಯಕ್ತಿಯಾಗಿದ್ದು, ಯಾವುದೇ ಅಪರಾಧ ಕೃತ್ಯಗಳಲ್ಲಿ ಆತ ಭಾಗಿಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಐನೂರರಷ್ಟು ಮೊಹಲ್ಲಾಗಳಿಗೆ ನೇತೃತ್ವ ನೀಡುತ್ತಿರುವ ಎಸ್‌ಕೆಎಸ್‌ಎಸ್‌ಎಫ್ ಧಾರ್ಮಿಕ ಯುವಜನ ಸಂಘಟನೆಯ ಕಾರ್ಯಕರ್ತ ಮತ್ತು ಸ್ಥಳೀಯ ಮೊಹಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ನಿರ್ವಹಿಸುತ್ತಿದ್ದ, ಜೊತೆಗೆ ತನ್ನ ಪಾಡಿಗೆ ದುಡಿದು ಕುಟುಂಬ ಸಾಕುತ್ತಿದ್ದ, ಎಲ್ಲಾ ಧರ್ಮೀಯರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ್ದ ಅಮಾಯಕ ಅಬ್ದುಲ್ ರಹ್ಮಾನ್ ಕುಟುಂಬಕ್ಕೆ ಸರ್ಕಾರದ ವತಿಯಿಂದ 50 ಲಕ್ಷ ರೂ. ಪರಿಹಾರ ಧನ ತಕ್ಷಣ ಒದಗಿಸಬೇಕು. ಜಿಲ್ಲೆಯಲ್ಲಿ ಕಾನೂನಿನ ಭಯವಿಲ್ಲದೆ ಕೋಮು ದ್ವೇಷ ಭಾಷಣ ಮಾಡುವವರನ್ನು ಕೂಡಲೇ ಬಂಧಿಸಬೇಕು. ಈ ದುಷ್ಕೃತ್ಯದ ಕೊಲೆಗಾರರು ಮತ್ತು ಅದಕ್ಕೆ ಸಂಚು ರೂಪಿಸಿದವರ ವಿರುದ್ಧ ಕಠಿಣ ಕ್ರಮ ತಕ್ಷಣವೇ ಜರುಗಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಸುದ್ಧಿಗೋಷ್ಠಿಯಲ್ಲಿ ಎಸ್‌ಕೆಎಸ್‌ಎಸ್‌ಎಫ್ ಈಸ್ಟ್ ಜಿಲ್ಲೆಯ ಉಪಾಧ್ಯಕ್ಷ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ, ಕಾರ್ಯದರ್ಶಿ ಆಶ್ರಫ್ ಮುಕ್ವೆ, ಕೋಶಾಧಿಕಾರಿ ಜಮಾಲ್ ಕೋಡಪದವು ಉಪಸ್ಥಿತರಿದ್ದರು.







