"ನನ್ನ ಪುತ್ರ ಅಮಾಯಕ. ಯಾರ ತಂಟೆಗೂ ಹೋದವನಲ್ಲ...": ಕೊಲೆಯಾದ ಅಬ್ದುಲ್ ರಹ್ಮಾನ್‌ರ ಹೆತ್ತವರ ಅಳಲು

ಮಂಗಳೂರು: ನಾವು ತುಂಬಾ ಬಡವರು, ನಮ್ಮ ಮಗ ಅಮಾಯಕ. ಯಾರ ತಂಟೆಗೂ ಹೋದವನಲ್ಲ. ಅವನನ್ನು ಕಾರಣವಿಲ್ಲದೆ ಕೊಲೆ ಮಾಡಲಾಗಿದೆ...
ಬಂಟ್ವಾಳ ತಾಲೂಕಿನ ಕಲ್ಪನೆಯ ಕಾಗುಡ್ಡೆ ಎಂಬಲ್ಲಿ ಮಂಗಳವಾರ ಕೊಲೆಯಾದ ಬಡಗ ಬೆಳ್ಳೂರು ಗ್ರಾಮದ ಅಬ್ದುಲ್ ರಹ್ಮಾನ್ ಯಾನೆ ರಹೀಂ ಯಾನೆ ಮೋನು (34) ಅವರ ತಂದೆ ಅಬ್ದುಲ್ ಖಾದರ್ ಮತ್ತು ತಾಯಿ ಆಸಿಯಾ ಅವರ ಅಳಲಾಗಿದೆ.
ಬುಧವಾರ ವಾರ್ತಾಭಾರತಿಯ ಜೊತೆ ಮಾತನಾಡಿದ ಅವರು ನಮ್ಮ ಮಗ ಯಾರ ತಂಟೆ ತಕರಾರಿಗೂ ಹೋದವನಲ್ಲ. ಅವನಾಯಿತು, ಅವನ ದುಡಿಮೆಯಾಯಿತು. ಇದೀಗ ಅವನ ಇಬ್ಬರು ಮಕ್ಕಳು ಅನಾಥರಾದರು. ನಮಗೆ ನ್ಯಾಯ ಬೇಕು. ನಮ್ಮ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದರು.
*ಅಬ್ದುಲ್ ರಹ್ಮಾನ್ ತುಂಬಾ ಒಳ್ಳೆಯವ. ಎಲ್ಲರ ಜೊತೆ ಬೆರೆಯುತ್ತಿದ್ದ. ನಮ್ಮ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ. ಅದು ಬಿಟ್ಟರೆ ಯಾವ ಸಂಘಟನೆಯಲ್ಲೂ ಇರಲಿಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿವೆ. ಇದರಿಂದ ಅಮಾಯಕರ ಕೊಲೆಯಾಗುತ್ತಿದೆ. ಇದಕ್ಕೆ ರಾಜ್ಯ ಸರಕಾರವೇ ಕಾರಣವಾಗಿದೆ ಎಂದು ಬಿರುಸಿನ ಮಳೆಯನ್ನೂ ಲೆಕ್ಕಿಸದೆ ಅಂತಿಮ ದರ್ಶನ ಪಡೆಯಲು ಆಗಮಿಸಿದ ಸ್ಥಳೀಯರು ಆರೋಪಿಸಿದರು.
ಹಿಂದೆ ಹೀಗೆಲ್ಲಾ ಕೊಲೆಗಳಾಗುತ್ತಿರಲಿಲ್ಲ. ಈಗ ಸರಣಿ ಕೊಲೆಗಳಾಗುತ್ತಿವೆ. ರಾಜ್ಯದ ಗೃಹ ಸಚಿವರು ಪ್ರಯೋಜನವಿಲ್ಲ. ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಹಿರಿಯರೊಬ್ಬರು ಆಗ್ರಹಿಸಿದರು.