ಸಂಸದ ದಾನಿಶ್ ಆಲಿ ನಿಂದನೆ ಖಂಡನೀಯ : ಬಿ. ಇಬ್ರಾಹಿಂ

ಮಂಗಳೂರು, ಸೆ.26: ಕಳೆದ ಗುರುವಾರ ನಡೆದ ಸಂಸತ್ತಿನ ಕಲಾಪದಲ್ಲಿ ಭಾರತೀಯ ಜನತಾ ಪಕ್ಷದ ಸಂಸದ ರಮೇಶ ಬಿದೂರಿ ಅವರು ಬಹುಜನ ಸಮಾಜ ಪಕ್ಷದ ಸಂಸದ ಕುನ್ವರ್ ದಾನಿಶ್ ಆಲಿ ವಿರುದ್ಧ ಕೋಮುವಾದಿ ಪದಗಳನ್ನು ಬಳಸಿ ನಿಂದಿಸಿರುವುದು ಹಾಗೂ ಪದೇ ಪದೇ ಅವರನ್ನು ಭಯೋತ್ಪಾದಕ ಎಂದು ಕರೆದಿರುವುದು ನಿಜಕ್ಕೂ ಖಂಡನೀಯವಾಗಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹೀಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನರಿಂದ ಆಯ್ಕೆಯಾಗಿ ಸಂಸತ್ ಸ್ಥಾನವನ್ನು ಅಲಂಕರಿಸುವ ಪ್ರತಿಯೊಬ್ಬರಿಗೂ ಕೂಡಾ ಸಮಾಜದಲ್ಲಿ ಅವರವರ ಘನತೆಗೆ ತಕ್ಕ ಗೌರವ ಇರುತ್ತದೆ. ಸಂಸದರು ಒಬ್ಬರೊನ್ನೊಬ್ಬರು ಗೌರವಿಸುವುದನ್ನು ಬಿಟ್ಟು ಈ ರೀತಿ ಅಗೌರವದ ಶಬ್ದ ವನ್ನು ಯಾರೂ ಕೂಡ ಸಂಸತ್ತಿನ ಕಲಾಪದಲ್ಲಿ ಉಪಯೋಗಿಸುವ ಅವಕಾಶ ಇರುವುದಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಸಂಸತ್ ಕಲಾಪ ಸಂಸತ್ತಿನ ನೂತನ ಕಟ್ಟಡದಲ್ಲಿ ನಡೆದ ಪ್ರಥಮ ಅಧಿವೇಶನವನ್ನು ಜನರಿಂದ ಆಯ್ಕೆಯಾಗಿರುವ ಸಂಸದರನ್ನು ಅವರ ಸಮುದಾಯದೊಂದಿಗೆ ಅವಮಾನಿಸಲು ಕರೆಯಲಾಯಿತೆ? ಎಂಬ ಸಂಶಯ ಮೂಡಿ ಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಮೇಶ್ ಬಿದೂರಿ ಈ ರೀತಿಯ ಶಬ್ದ ಉಪಯೋಗ ಮಾಡುವಾಗ ಅಲ್ಲಿಯೇ ಕುಳಿತಿದ್ದ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ಹರ್ಷವರ್ಧನ್ ನಗುತ್ತಿದ್ದರು ಎನ್ನಲಾಗಿದೆ. ಆದರೆ ಲೋಕಸಭಾಧ್ಯಕ್ಷ ಓಂ ಬಿರ್ಲಾರವರು ಎಚ್ಚರಿಕೆ ಕೊಟ್ಟು ಭಾಷೆಯ ಘನತೆಯನ್ನು ಕಾಯ್ದುಕೊಳ್ಳಬೇಕೆಂದು ಸೂಚಿಸಿದ್ದು ಹಾಗೂ ಬಿದೂರಿಯ ಮಾತುಗಳನ್ನು ಕಡತದಿಂದ ಅಳಿಸಿಹಾಕಿದ್ದು ಶ್ಲಾಘನೀಯ. ಇಂತಹ ಅವಹೇಳನಕಾರಿ ಮಾತುಗಳು ಸಂಸದ್ ಕಲಾಪದಲ್ಲಿ ಎಂದೂ ಬಳಕೆಯಾಗಲಿಲ್ಲ. ಇಂತಹ ಘಟನೆಗಳು ಸಮಾಜದಲ್ಲಿ ಅಶಾಂತಿಗೆ ಮುಖ್ಯ ಕಾರಣವಾಗಬಹುದು ಎಂದರೂ ಅತಿಶಯೋಕ್ತಿ ಆಗಲಾರದು. ಲೋಕಸಭಾಧ್ಯಕ್ಷರು ತಕ್ಷಣ ರಮೇಶ ಬಿದೂರಿಯವರನ್ನು ಅಮಾನತು ಮಾಡಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸಂಸತ್ತಿನ ಹಕ್ಕು ಬಾಧ್ಯತಾ ಸಮಿತಿಗೆ ಕಳುಹಿಸುವುದಲ್ಲದೇ ಅವರ ಸದಸ್ಯತ್ವ ರದ್ದು ಮಾಡುವಂತೆ ಬಿ. ಇಬ್ರಾಹೀಂ ಆಗ್ರಹಿಸಿದ್ದಾರೆ.







