ಅಡ್ಡೂರು ಅಬ್ದುಲ್ ಕರೀಂ ಬ್ಯಾರಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು: ಫಲ್ಗುಣಿ ನದಿಯಲ್ಲಿ 8 ದಶಕಗಳ ಕಾಲ ಅಂಬಿಗನಾಗಿ ಸೇವೆ ಸಲ್ಲಿಸಿದ ಅಬ್ದುಲ್ ಕರೀಂ ಬ್ಯಾರಿ (96) ಅಡ್ಡೂರು 2023ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಂಗಳೂರು ಹೊರವಲಯದ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ನಿವಾಸಿ ಅಬ್ದುಲ್ ಕರೀಂ ಬ್ಯಾರಿ ಅವರು ಫಲ್ಗುಣಿ ನದಿಯಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಸುಮಾರು 85 ವರ್ಷಗಳ ಕಾಲ ದೋಣಿ ನಡೆಸಿ ಜನರ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಹಲವು ದಶಕಗಳ ಹಿಂದೆ ರಸ್ತೆ ಸಂಪರ್ಕ ಇಲ್ಲದ ಕಾಲದಲ್ಲಿ ಜನರು ಸರಕು ಸಾಗಾಟ, ಪಟ್ಟಣಕ್ಕೆ, ಒಂದು ಊರಿನಿಂದ ಮತ್ತೊಂದೆಡೆಗೆ ಪ್ರಯಾಣ ಬೆಳೆಸಲು ದೋಣಿಗಳನ್ನೇ ಅವಲಂಭಿಸಿದ್ದರು. ಬದಲಾದ ಕಾಲದಲ್ಲಿ ಮಂಗಳೂರು ಪ್ರಯಾಣ ನಿಂತವು. ನಂತರ ಇಲ್ಲಿನ ಜನರನ್ನು ಅಡ್ಡೂರು,ಗುರುಪುರ, ಮೂಲರಪಟ್ಣ, ದಾಟಿಸುವುದಕ್ಕೆ ಸೀಮಿತವಾದವು. ಆದರೂ ಜನರ ಸೇವೆಗೆ ದಶಕಗಳ ಕಾಲ ಬೆಳಗ್ಗಿನ ಜಾವ ಸದಾ ಹಾಜರಾಗುತ್ತಿದ್ದರು.
ಈಗಿನ ಕಾಲದಂತೆ ಅಂದು ತುರ್ತು ಸಂದರ್ಭಕ್ಕೆ ವಾಹನ ಮತ್ತು ಸರಿಯಾದ ರಸ್ತೆ ಸಂಪರ್ಕ ಇರಲಿಲ್ಲ. ಗುರುಪುರ ಪೇಟೆಗೆ ಗುಡ್ಡಗಾಡಿನ ಮಧ್ಯೆ ಕಾಲು ದಾರಿ ಮಾತ್ರ ಇತ್ತು. ಆಗ ನದಿಯನ್ನು ಕ್ರಮಿಸಿ ಮತ್ತೊಂದು ಊರಿಗೆ ದಾಟುವುದೇ ಸವಾಲಾಗಿತ್ತು. ದೋಣಿ ನಡೆಸುವುದರಲ್ಲಿ ಪಳಗಿದ ಕರೀಂ ಅವರ ಅಗತ್ಯತೆ ಊರವರಿಗೆ ತುರ್ತು ಸಂದರ್ಭದಲ್ಲಿ ಅನಿವಾರ್ಯವಾಗಿತ್ತು. ತಡ ರಾತ್ರಿ ಕರೆದರೂ ಜನರ ಸೇವೆಗೆ ಸದಾ ಸ್ಪಂದಿಸುತ್ತಿದ್ದರು. ಗರ್ಭಿಣಿಯರು, ರೋಗಿಗಳನ್ನು ರಾತ್ರಿ-ಹಗಲಿನಲ್ಲಿ ನದಿ ದಾಟಿಸಿ ಬಿಡುತ್ತಿದ್ದರು.
1974ರ ಮತ್ತು ಅದಕ್ಕೂ ಮೊದಲು ಸಂಭವಿಸಿದ ಮಹಾ ಪ್ರವಾಹದ ಸಂದರ್ಭ ಕರೀಂ ಅವರು ರಕ್ಷಣಾ ಕಾರ್ಯ ನಡೆಸಿ ಪ್ರಾಣದ ಹಂಗು ತೊರೆದು ಗ್ರಾಮಸ್ಥರನ್ನು ರಕ್ಷಣೆ ಮಾಡಿರುವುದು ಶ್ಲಾಘನೀಯ. ತನ್ನ 7ನೇ ವಯಸ್ಸಿಗೆ ದೋಣಿಯಲ್ಲಿ ಹುಟ್ಟು ಹಾಕಲು ಆರಂಭಿಸಿದ ಇವರು ಸುತ್ತಮುತ್ತಲಿನ ಮಲ್ಲೂರು, ಉಳಾಯಿಬೆಟ್ಟು, ಮೂಲರಪಟ್ಣ, ಪೆರ್ಮಂಗಿ, ಅಮ್ಮುಂಜೆ, ಬಡಕಬೈಲು, ಪೊಳಲಿ, ಗುರುಪುರ ಸೇರಿದಂತೆ ಇತರ ಸುತ್ತಮುತ್ತಲಿನ ಊರುಗಳಿಗೆ ಚಿರಪರಿಚಿತರಾಗಿದ್ದು, ಜಾತಿ-ಧರ್ಮ ಮೀರಿ ಎಲ್ಲರ ಪ್ರೀತಿಗೆ ಪಾತ್ರರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಕರೀಂ ಬ್ಯಾರಿ ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಜೀವನ ಸಾರ್ಥಕ ಸೇವೆಗಾಗಿ ದ.ಕ. ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
*ಸಂಕ್ಷಿಪ್ತ ಪರಿಚಯ: ಅದು ಸ್ವಾತಂತ್ರ್ಯದ ಪೂರ್ವ ಕಾಲ. ಅಂದು ಒಂದೊಂತ್ತಿನ ಊಟಕ್ಕಾಗಿ ಪರದಾಡುವ ದಿನಗಳಲ್ಲಿ ತನ್ನ 7ನೇ ವಯಸ್ಸಿಗೆ ದೋಣಿಗೆ ಹುಟ್ಟು ಹಾಕಲು ಕಲಿತು ವೃತ್ತಿಯನ್ನು ಸೇವೆಯೆಂದು ನಂಬಿ ಫಲ್ಗುಣಿ ನದಿಯ ಮೇಲೆ ಸ್ವಾಭಿಮಾನದ ಬದುಕುಕಟ್ಟಿಕೊಂಡು 96ರ ಹರೆಯದ ಅಂಬಿಗ ಅಬ್ದುಲ್ ಕರೀಂ ಬ್ಯಾರಿ ಅವರ ಯಶೋಗಾಥೆ ಇದು.
ಹಿಂದೆ ಬಿಟ್ರಿಷ್ ಆಳ್ವಿಕೆಗೆ ಒಳಪಟ್ಟಿದ್ದ ಮಂಗಳೂರು ವ್ಯಾಪಾರ ಮತ್ತು ಕೈಗಾರೀಕರಣದ ಕೇಂದ್ರ ಬಿಂದುವಾಗಿತ್ತು. ಆಗ ಭತ್ತದ ಬೇಸಾಯವೇ ಪ್ರಧಾನವಾಗಿತ್ತು. ಮಂಗಳೂರಿಗೆ ಬೀಡಿ ಉದ್ಯಮ ಬರುವ ಮೊದಲು ನಗರದ ಬೋಳಾರ, ಬಂದರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರಸಿದ್ಧ ಹೆಂಚುಗಳನ್ನು ತಯಾರಿಸುವ ಕಾರ್ಖಾನೆಗಳ ಸಂಖ್ಯೆ ಹೆಚ್ಚಿದ್ದು, ಇದು ಆಗಿನ ಪ್ರಮುಖ ಉದ್ಯಮವಾಗಿತ್ತು. ಆಗ ಪಾಣೆಮಂಗಳೂರು ಸೇತುವೆ ಇತ್ತಾದರೂ ಮಂಗಳೂರಿನಲ್ಲಿ ಇರಲಿಲ್ಲ. ಎತ್ತಿನಗಾಡಿ ನಗರದಲ್ಲಿ ಓಡಾಡುತ್ತಿತ್ತು. ನೇತ್ರಾವತಿ ಸೇತುವೆ ಆಗಿರುವುದು ತೀರ ಈಚೆಗೆ. ಜಲ ಮಾರ್ಗವೇ ಜಿಲ್ಲೆಯ ಮುಖ್ಯ ಸಾರಿಗೆ.
ರಸ್ತೆ ಸಂಪರ್ಕವೇ ಇಲ್ಲದ ಈ ಕಾಲದಲ್ಲಿ ಜನರು ಸರಕು ಸಾಗಟ, ಊರಿನಿಂದ ಮತ್ತೊಂದು ಊರಿಗೆ ಪ್ರಯಾಣ ಬೆಳೆಸಲು ಜಲ ಮಾರ್ಗ ಪ್ರಮುಖ ಕೊಂಡಿಯಾಗಿದ್ದು, ಜನರು ನಾಡ ದೋಣಿಗಳನ್ನು ಅವಲಂಭಿಸಿದ್ದರು. ಆಗ ನೇತ್ರಾವತಿ, ಫಲ್ಗುಣಿ ನದಿಯಲ್ಲಿ ಕೆಲಸ ಕಾರ್ಯಗಳಿಗೆಂದೇ ಸುಮಾರು 2800 ದೋಣಿಗಳು ಬಳಕೆಯಲ್ಲಿದ್ದವು. ಅಂದು ಸಾಕಷ್ಟು ಮಂದಿ ಈ ದುಡಿಮೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದವರ ಪೈಕಿ ಅಬ್ದುಲ್ ಕರೀಂ ಬ್ಯಾರಿ ಕೂಡ ಓರ್ವರು.
ಇವರು ಮಂಗಳೂರು ಹೊರವಲಯದ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ನಡುಗುಡ್ಡೆ ನಿವಾಸಿ ಮೊಯ್ದೀನಾಕ ಅವರ ಎರಡನೇ ಪುತ್ರ. ಶಾಲೆಯ ಮುಖ ಕಾಣದ ಇವರು ಕಡು ಬಡತನದ ಜೀವನ ನಿರ್ವಹಣೆ ಗಾಗಿ ತಂದೆಯವರು ನಡೆಸಿಕೊಂಡು ಬಂದ ಅಂಬಿಗ ವೃತ್ತಿಯನ್ನು ಸೇವೆಯೆಂದು ನಂಬಿ ತನ್ನ 7ನೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ದೋಣಿ ನಡೆಸಲು ಕಲಿತರು. ನಂತರದ ದಿನಗಳಲ್ಲಿ ಜೀವನೋಪಾಯಕ್ಕಾಗಿ ಕರೀಂ ಅವರು ಮಂಗಳೂರಿನ ಬಂದರಿನ ಹೆಂಚಿನ ಕಾರ್ಖಾನೆಗಳಿಗೆ ಹುಲ್ಲು, ಆವೆ ಮಣ್ಣು, ಮರದ ದಿಮ್ಮಿ ಸಾಗಿಸುತ್ತಿದ್ದರು. ಜನರನ್ನು ಒಂದಡೆಯಿಂದ ಮತ್ತೊಂದೆಡೆಗೆ ಒಯ್ಯುತ್ತಿದ್ದರು. ಗುರುಪುರ ಪೇಟೆ, ಬದ್ರಿಯಾನಗರ, ಉಳಾಯಿಬೆಟ್ಟು, ಅಮ್ಮುಂಜೆ, ಕಳಾಯಿಗೆ ನಗರ ದಿಂದ ಸರಕು ತಲುಪಿಸುತ್ತಿದ್ದರು. ಉಡುವ ಬಟ್ಟೆಗೂ, ತಿನ್ನುವ ಅನ್ನಕ್ಕೂ ಪರದಾಡುತ್ತಿದ್ದ ಕಾಲದಲ್ಲಿ ಜೋಪಡಿಯಲ್ಲಿ ದಿನ ದೂಡಿ ದುಡಿಮೆಯಿಂದ ಬಂದ 5 ಆಣೆ ಸಂಪಾದಿಸಿ ಕುಟುಂಬವನ್ನು ಮುನ್ನಡೆಸುತ್ತಿದ್ದರು. ಕಾಲಕ್ರಮೇಣ ಸೇತುವೆ, ರಸ್ತೆ ಸಂಪರ್ಕ ಸುಧಾರಿಸುತ್ತಾ ಹೋದಾಗ ದೋಣಿಯ ಬಳಕೆ ಎಲ್ಲೆಡೆ ನಿಂತು ಹೋದವು.
ಬಸ್ ವ್ಯವಸ್ಥೆ ಬಂದ ಬಳಿಕ ನದಿ ದಾಟುವ ಜನರ ಸಂಖ್ಯೆ ಕಡಿಮೆಯಾಯಿತು. ತಂತ್ರಜ್ಞಾನದ ಬಳಕೆಯಿಂದ ಹಳೆ ಪದ್ಧತಿ ಗಳು ಮರೆಯಾದವು. ಬಳಿಕ ಜನರನ್ನು ಅಡ್ಡೂರು ಹೊಳೆಬದಿಯಿಂದ ಉದ್ದಬೆಟ್ಟು, ಗುರುಪುರ, ಮಲ್ಲೂರು, ಕಡವು ದಾಟಿಸು ವುದಕ್ಕೆ ಸೀಮಿತವಾದವು. ಆದರೂ ತನ್ನ ಕುಟುಂಬದ ಕೈ ಹಿಡಿದ ಕಾಯಕವನ್ನು ಬಿಡಬಾರದೆಂಬ ಉದ್ದೇಶದಿಂದ ಕರೀಂ ಅವರು ದೋಣಿ ನಡೆಸುವುದನ್ನು ಸುಮಾರು 85 ವರ್ಷಗಳಿಂದ ಮುಂದುವರಿಸುತ್ತಾ ಬಂದಿದ್ದಾರೆ. ಬೆಳಗ್ಗಿನ ಜಾವ 4:30ಕ್ಕೆ ಎದ್ದು ನಿತ್ಯ ದಿನಚರಿ ಆರಂಭಿಸುವ ಇವರು ದೋಣಿ ಚಲಾವಣೆ ವೇಳೆ ಪ್ರಯಾಣಿಕರ ಬಳಿ ಹಣ ಕೇಳುತ್ತಿರಲಿಲ್ಲ. ನೀಡಿದರೆ ಮಾತ್ರ ಸ್ವೀಕರಿಸುತ್ತಾರೆ. ಹಣ ಇಲ್ಲದಿದ್ದರೂ ಉಚಿತವಾಗಿ ದಡಸೇರಿಸಿ ಬಿಡುವ ರೂಢಿ ಇವರದ್ದು. ಇವರ ಸೇವೆಯನ್ನು ಪಡೆದ ಊರು, ಪರ ಊರಿನ ಜನರು ಇಂದಿಗೂ ಸ್ಮರಿಸುತ್ತಾರೆ. ಹೀಗೆ ಕರೀಂ ಅವರು ಅಡ್ಡೂರಿನ ಪಲ್ಗುಣಿ ನದಿಯಲ್ಲಿ ಜನರ ಸಂಪರ್ಕ ಸೇತುವೆಯಾಗಿ ಜನರ ಸೇವೆ ಮಾಡಿದ್ದಾರೆ.
ದುಡಿದೇ ತಿನ್ನುತ್ತೇನೆ ಎನ್ನುವ ಕರೀಂ ಓರ್ವ ಸ್ವಾಭಿಮಾನಿ ಶ್ರಮಜೀವಿಯಾಗಿದ್ದು, ಪ್ರಾಣದ ಹಂಗುತೊರೆದು ತನ್ನ 94ನೇ ಇಳಿ ವಯಸ್ಸಿನವರೆಗೆ ಹುಮ್ಮಸ್ಸಿನಿಂದಲೇ ದೋಣಿ ನಡೆಸಿದ್ದಾರೆ. ‘‘ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ನನ್ನಿಂದ ಸಾಧ್ಯವಿಲ್ಲ. ದೋಣಿಯಲ್ಲಿ ಕೆಲಸ ಮಾಡಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಾವು ಈಗ ಬರುತ್ತದೆ ಎಂದಾಗಲೂ ನದಿ ಕಡೆ ಹೋಗುವ ಧೈರ್ಯವಿದೆ’’ ಹೀಗೆನ್ನುವ ಇವರ ತುಡಿತ, ಕಾಯಕದ ಮೇಲೆ ಇಟ್ಟಿರುವ ಕಾಳಜಿ ಎಲ್ಲರಿಗೂ ಸ್ಫೂರ್ತಿ ದಾಯಕರಾಗಿದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳ ಜನರ ಜೀವನ ಶೈಲಿ, ಪರಿಸ್ಥಿತಿ ಬಗ್ಗೆ ಇಂದಿನ ಪೀಳಿಗೆಗೆ ನೆಪಿಸಿಕೊಡುತ್ತಾರೆ. ತನ್ನ ಅನನ್ಯ ಸೇವೆಯಿಂದ ಈಗಲೂ ಕರೀಂ ಅವರು ಗುರುಪುರ, ಮಲ್ಲೂರು, ಉಳಾಯಿ ಬೆಟ್ಟು, ಪೆರ್ಮಂಗಿ, ಅಮ್ಮುಂಜೆ, ಬಡಕಬೈಲು, ಪೊಳಲಿ, ಕಳಾಯಿ, ಮೂಲರಪಟ್ಣ ಸೇರಿದಂತೆ ಇತರ ಸುತ್ತಮುತ್ತಲಿನ ಊರುಗಳಿಗೆ ಚಿರಪರಿಚಿತರಾಗಿದ್ದು, ಜಾತಿ-ಧರ್ಮ ಮೀರಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರ ಸೇವೆ ಮತ್ತು ಜೀವನದ ಕುರಿತು ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಅಂತರ್ಜಾಲ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಇವರ ಅನನ್ಯ ಸೇವೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ.
*1974ರ ಪ್ರವಾಹದ ಜೀವ ರಕ್ಷಕ: 1974ರ ಮತ್ತು ಅದಕ್ಕೂ ಮೊದಲು ಸಂಭವಿಸಿದ ಮಹಾ ಪ್ರವಾಹಕ್ಕೆ ತುತ್ತಾದವರು ಮತ್ತು ಕಣ್ಣಾರೆ ಕಂಡವರು ತೀರ ಕಡಿಮೆ. ಆದರೆ, ಕರೀಂ ಅವರು ಆ ಸಂದರ್ಭ ಜನರನ್ನು ರಕ್ಷಿಸಿದ ಊರಿನ ಮೊದಲಿಗರಾಗಿ ದ್ದಾರೆ ಮತ್ತು ಈಗಿನ ಹಿರಿಯರಲ್ಲಿ ಅತ್ಯಂತ ಹಿರಿಯ ಜೀವಿಯೂ ಹೌದು. ಅಂದು ಎಡೆಬಿಡದೇ ನಿರಂತರ ಸುರಿದ ಮಳೆ ಯಿಂದ ನೇತ್ರಾವತಿ, ಫಲ್ಗುಣಿ ನದಿ ಮೈದುಂಬಿ ಹರಿದು ಈ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿತ್ತು. ಹೊಳೆಬದಿ ಪ್ರದೇಶವಾದ ಅಡ್ಡೂರು ಮತ್ತು ಸುತ್ತಮುತ್ತಲಿನ ಗ್ರಾಮ ಸಂಪೂರ್ಣ ಜಲಾವೃತಗೊಂಡಿತ್ತು. ಅಡ್ಡೂರುನಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರಿಂದ ಪ್ರತಿ ಮನೆಯಲ್ಲಿ 18 ರಿಂದ 20 ಮಂದಿವರೆಗೆ ವಾಸಿಸುತ್ತಿದ್ದ ಜನರು ಅತಂತ್ರರಾಗಿದ್ದರು. ಈ ವೇಳೆ ಕರೀಂ ಅವರು ದೋಣಿ ಮೂಲಕ ಸಂಚರಿಸಿ ಕಂಗಾಲಾಗಿದ್ದ ಊರ ಜನರನ್ನು ಪ್ರಾಣಾಯಪಾಯದಿಂದ ಪಾರು ಮಾಡಿದ್ದಾರೆ. ಪ್ರವಾಹ ಪೀಡಿತರನ್ನು ಸುರಕ್ಷಿತವಾಗಿ ದೋಣಿಗೆ ಏರಿಸಿ ಆಶ್ರಯ ಕೇಂದ್ರಕ್ಕೆ ತಲುಪಿಸಿಬಿಟ್ಟಿದ್ದರು. ತನ್ನ ಪ್ರಾಣ ಹಂಗನ್ನು ತೊರೆದು ಪ್ರವಾಹದ ಸಂಕಷ್ಟದಲ್ಲೂ ಸಮಯ ಪ್ರಜ್ಞೆಯನ್ನು ಮೆರೆದ ಕರೀಂ ಅವರ ಸಾಹಸವನ್ನು ಅಡ್ಡೂರು ಗ್ರಾಮದ ಹಿರಿಯರು ನೆನಪಿಸುತ್ತಾರೆ.
*ತುರ್ತು ಸೇವೆಗೆ ಸದಾ ಸ್ಪಂದನೆ:- ಈಗಿನ ಕಾಲದಂತೆ ಅಂದು ತುರ್ತು ಸಂದರ್ಭಕ್ಕೆ ವಾಹನಗಳು ಇರಲಿಲ್ಲ ಮತ್ತು ಸರಿ ಯಾದ ರಸ್ತೆ ಸಂಪರ್ಕವೂ ಇರಲಿಲ್ಲ. ಗುರುಪುರ ಪೇಟೆಗೆ ಗುಡ್ಡಗಾಡಿನ ಮಧ್ಯೆ ಕಾಲು ದಾರಿ ಮಾತ್ರ ಇತ್ತು. ಆಗ ನದಿಯನ್ನು ಕ್ರಮಿಸಿ ಮತ್ತೊಂದು ಊರಿಗೆ ದಾಟುವುದೇ ಸವಾಲಾಗಿತ್ತು. ದೋಣಿ ನಡೆಸುವುದರಲ್ಲಿ ಪಳಗಿದ ಕರೀಂ ಅವರ ಅಗತ್ಯತೆ ಗ್ರಾಮಸ್ಥರಿಗೆ ತುರ್ತು ಸಂದರ್ಭದಲ್ಲಿ ಅನಿವಾರ್ಯವಾಗಿತ್ತು. ತಡ ರಾತ್ರಿ ಕರೆದರೂ ಜನರ ಸೇವೆಗೆ ಸದಾ ಸ್ಪಂದಿಸುತ್ತಿ ದ್ದರು. ಗರ್ಭಿಣಿ ಮಹಿಳೆಯರು, ರೋಗಿಗಳನ್ನು ರಾತ್ರಿ-ಹಗಲಿನಲ್ಲಿ ನದಿ ದಾಟಿಸಿ ಬಿಡುತ್ತಿದ್ದರು.
ಹಿಂದೆ ಮೊಗವೀರ ಮಹಿಳೆಯರು ಒಣ ಮೀನುಗಳನ್ನೊ ಹೊತ್ತು ಇಲ್ಲಿಗೆ ಬರುತ್ತಿದ್ದರು. ಒಂದು ದಿನ ಮೊಗವೀರ ಮಹಿಳೆಯೋರ್ವರು ಅಡ್ಡೂರುನಲ್ಲಿ ಬಿದ್ದು ಗಾಯಗೊಂಡಿದ್ದರು. ಈ ವಿಚಾರವನ್ನು ತಿಳಿದ ಕರೀಂ ಅವರು ಕಾರ್ಖಾನೆಗೆ ಸಾಗಿಸಲೆಂದು ದೋಣಿಯಲ್ಲಿಟ್ಟದ್ದ 15 ಕಟ್ಟು ಹುಲ್ಲನ್ನು ನದಿ ದಂಡೆಯಲ್ಲಿರಿಸಿ ತಕ್ಷಣ ಮೊಗವೀರ ಮಹಿಳೆಯನ್ನು ದೋಣಿ ಯಲ್ಲಿ ಕುಳ್ಳಿಸಿರಿ ಕೂಳೂರಿಗೆ ಬಿಟ್ಟು ಬಂದಿದ್ದರು. ಈ ಘಟನೆಯಿಂದ ಮಹಿಳೆಯ ಸಂಬಂಧಿಕರು, ಊರವರು ಕರೀಂ ಅವರನ್ನು ಭಾರೀ ಪ್ರಶಂಸಿದ್ದನ್ನು ಸ್ವತಃ ಕರೀಂ ಅವರೇ ಬಿಚ್ಚಿಟ್ಟ ಅನುಭವ ಇದಾಗಿದೆ. ಹೀಗೆ ಅವರು ಎಲ್ಲ ಜಾತಿ-ಧರ್ಮ ಮೀರಿಸೇವಾಮನೋಭಾವ ಮೈಗೂಡಿಸಿಕೊಂಡಿದ್ದನ್ನು ಎಲ್ಲ ವರ್ಗದ ಜನರು ಪ್ರಶಂಸಿದ್ದಾರೆ.
*ಹವಾಮಾನ, ಪರಿಸರದ ಬಗ್ಗೆ ಅರಿವು:- ಹವಾಮಾನ ವೈಪರಿತ್ಯದ ಬಗ್ಗೆಯೂ ಸ್ವಂತ ಪಾಂಡಿತ್ಯವನ್ನು ಹೊಂದಿರುವ ಕರೀಂ ಅವರು ದೋಣಿಯಲ್ಲಿ ಹೋಗುವವರಿಗೆ ಪ್ರಕೃತಿಯ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ನದಿಯಲ್ಲಿ ನೀರಿನ ಮಟ್ಟ ಏರಲು, ನದಿಯಲ್ಲಿ ಮರಳು ತುಂಬಿದರೆ ಏನಾಗುತ್ತದೆ, ಮರಳು ಮಾಫಿಯಾದಿಂದ ನದಿಗೆ ತೊಂದರೆಗಳೇನು ಎಂಬುದರ ಬಗ್ಗೆ ನಿಖರವಾಗಿ ಹೇಳುತ್ತಾರೆ. ಪರಿಸರದ ಬಗ್ಗೆ ಅಪಾರ ಜ್ಞಾನಗಳಿಸಿದ್ದಾರೆ.
*ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿ:- ದೇಶಕ್ಕೆ ಲಭಿಸಿದ ಸಾತಂತ್ರ್ಯೋತ್ಸವವನ್ನು ಕಣ್ತುಂಬಿಕೊಂಡವರ ಪೈಕಿ ಬದುಕುಳಿದ ವರು ಮಂಗಳೂರಿನಲ್ಲಿ ಅತಿ ವಿರಳ. ಈ ಸಂಭ್ರಮದ ಘಳಿಗೆಯಲ್ಲಿ ಕರೀಂ ಅವರು ಅಂದು ಮಂಗಳೂರಿಗೆ ದೋಣಿ ಮೂಲಕ ಸ್ನೇಹಿತರೊಂದಿಗೆ ತಲುಪಿ ಈಗಿನ ನೆಹರೂ ಮೈದಾನದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದು ಅವರ ಜೀವನದ ಪಯಣದಲ್ಲಿ ಎಂದೂ ಮರೆಯಲಾಗದ ಘಟನೆಯಾಗಿದೆ. ಬ್ರಿಟಿಷ್ ಕಂಪೆನಿ ಸರಕಾರ ಹೋದ ಮೇಲೆಯೇ ನಾವು ಮನುಷ್ಯರಂತೆ ಜೀವಿಸಲು ಸಾಧ್ಯವಾಯಿತು ಎನ್ನುತ್ತಾರೆ ಕರೀಂ ಬ್ಯಾರಿ.







