ಆಫ್ರಿಕನ್ ಯೂತ್ ಚೆಸ್ ಚಾಂಪಿಯನ್‌ಶಿಪ್ : ಮಂಗಳೂರು ಮೂಲದ ಸನಾ ಕಯ್ಯಾರ್ ಚಾಂಪಿಯನ್

ಮಂಗಳೂರು, ಡಿ.15: ಉಗಾಂಡಾವನ್ನು ಪ್ರತಿನಿಧಿಸುತ್ತಿರುವ ಮಂಗಳೂರು ಮೂಲದ ಯುವ ಚೆಸ್ ಪ್ರತಿಭೆ ಸನಾ ಓಂಪ್ರಕಾಶ್ ಕಯ್ಯಾರ್, ಡಿ. 7 ರಿಂದ 13, 2025 ರವರೆಗೆ ಜಿಂಬಾಬೈಯ ಹರಾರೆಯಲ್ಲಿ ನಡೆದ ಆಫ್ರಿಕನ್ ಯೂತ್ ಚೆಸ್ ಚಾಂಪಿಯನ್‌ಶಿಫ್‌ನ ಅಂಡರ್-18 ಬಾಲಕಿಯರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಈ ಸಾಧನೆಯೊಂದಿಗೆ ಸನಾ ಅವರಿಗೆ ಪ್ರತಿಷ್ಠಿತ ವಿಮೆನ್ ಕ್ಯಾಂಡಿಡೇಟ್ ಮಾಸ್ಟರ್’ (ಡಬ್ಲ್ಯುಸಿಎಂ ) ಪದವಿ ಲಭಿಸಿದ್ದು, ಪೂರ್ವ ಆಫ್ರಿಕಾ ಪ್ರದೇಶದಿಂದ ಈ ಪದವಿ ಗಳಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ಈ ಮಹತ್ವದ ಸಾಧನೆ ಸನಾ ಅವರ ಈಗಾಗಲೇ ಗಮನಾರ್ಹ ಚೆಸ್ ಪಯಣಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. 2022ರಲ್ಲಿ, ಜಾಂಬಿಯಾದಲ್ಲಿ ನಡೆದ ಆಫ್ರಿಕನ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಅಂಡರ್-14 ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದರು.
ಆ ಸಾಧನೆಯ ಫಲವಾಗಿ ಅವರಿಗೆ ಡಬ್ಲ್ಯುಸಿಎಂ ಪದವಿ ದೊರಕಿದ್ದು, ರೊಮೇನಿಯಾದಲ್ಲಿ ನಡೆದ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಉಗಾಂಡಾವನ್ನು ಪ್ರತಿನಿಧಿಸುವ ಅರ್ಹತೆ ಲಭಿಸಿತ್ತು. ಸನಾ ಅವರು ಫೈಡೆ ರೇಟಿಂಗ್ 1,900 ದಾಟಿದ ಪೂರ್ವ ಆಫ್ರಿಕಾದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದರು.
ಅದೇ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ ಅವರ ಸಹೋದರ ಶೌಭಿತ್ ಓಂಪ್ರಕಾಶ್ ಕಯ್ಯಾರ್ ಅಂಡರ್-16 ಓಪನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಶ್ಲಾಘನೀಯ ಪ್ರದರ್ಶನ ನೀಡಿದ್ದರು.
ಸನಾ ಮತ್ತು ಶೌಭಿತ್ ಇಬ್ಬರೂ ಅಂತರರಾಷ್ಟ್ರೀಯ ಟೂರ್ನಮೆಂಟ್ ಅನುಭವ ಹಾಗೂ ಸಂರಚಿತ ತರಬೇತಿಯ ಸಂಯೋಜನೆಯ ಮೂಲಕ ತಮ್ಮ ಸಿದ್ಧತೆಯನ್ನು ನಡೆಸಿದ್ದಾರೆ. ಭಾರತಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ, ಅವರು ಮಂಗಳೂರಿನ ಡೆರಿಕ್ಸ್ ಚೆಸ್ ಸ್ಕೂಲ್ (ಡಿಸಿಎಸ್)ನಲ್ಲಿ ಡೆರಿಕ್ ಪಿಂಟೊ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದು, ಬಳಿಕ ಆನ್‌ಲೈನ್ ತರಬೇತಿಯನ್ನೂ ಪಡೆದಿದ್ದಾರೆ. ಈ ಸಹೋದರ-ಸಹೋದರಿಯ ಸಾಧನೆಗಳ ಹಿಂದೆ ಅವರ ಪೋಷಕರಾದ ಓಂಪ್ರಕಾಶ್ ಕಯ್ಯಾರ್ ಮತ್ತು ಸರಿತಾ ಓಂಪ್ರಕಾಶ್ ಕಯ್ಯಾರ್ ಅವರ ನಿರಂತರ ಬೆಂಬಲ, ಪ್ರೋತ್ಸಾಹ ಮತ್ತು ಸಮರ್ಪಣೆ ಪ್ರಮುಖ ಪಾತ್ರ ವಹಿಸಿದೆ ಎಂದು ಡೆರಿಕ್ ಚೆಸ್ ಸ್ಕೂಲ್‌ನ ಪ್ರಕಟನೆ ತಿಳಿಸಿದೆ.







