ವಾಯುಮಾಲಿನ್ಯ| ಉತ್ಪಾದನಾ ಘಟಕ ಮುಚ್ಚಲು ನಿರ್ಣಯ: ಪಲಿಮಾರು ಗ್ರಾಮಸಭೆ

ಪಡುಬಿದ್ರಿ: ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಬಯೋ ಡೀಸೆಲ್, ಪಾಮ್ ಆಯಿಲ್ ಮತ್ತು ಗ್ಲಿಸರಿನ್ ಉತ್ಪಾದನಾ ಘಟಕದಿಂದ ಸುತ್ತಮುತ್ತ ವಾಯುಮಾಲಿನ್ಯ ಉಂಟಾಗುತಿದ್ದು, ಘಟಕವನ್ನು ಮುಚ್ಚವಂತೆ ಶುಕ್ರವಾರ ಪಲಿಮಾರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದು, ಬಳಿಕ ಘಟಕವನ್ನು ಮುಚ್ಚಲು ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ತೀರ್ಮಾನಿಸಲಾಯಿತು.
ಘಟಕದ ದುರ್ವಾಸನೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ನಡಾವಳಿಯಂತೆ 2024ರಲ್ಲಿ ಅಂದಿನ ಜಿಲ್ಲಾಧಿಕಾರಿ ಸಂಸ್ಕರಣಗಾರವನ್ನು ಸ್ಥಗಿತಗೊಳಿಸಿ ಅಗತ್ಯ ಕ್ರಮ ಕೈಗೊಂಡು ತಜ್ಞರ ಶಿಪಾರಸಿನಂತೆ ಪುನರಾರಂಭಕ್ಕೆ ನಿರ್ದೇಶಿಸಿದ್ದರು. ಆದರೆ ತಜ್ಞರ ಸಮಿತಿ ವರದಿ ಬರುವ ಮೊದಲೇ ಘಟಕ ಪುನರಾರಂಭಿಸಿ ಜಿಲ್ಲಾಧಿಕಾರಿ ನಿರ್ದೇಶನವನ್ನು ಉಲ್ಲಂಘಿಸಿದ್ದಾರೆ ಎಂದು ಗ್ರಾಮಸ್ಥರಾದ ದಿನೇಶ್ ಪಲಿಮಾರು, ಲಕ್ಷ್ಮಣ ಎಲ್ ಶೆಟ್ಟಿವಾಲ್, ಸಂದೀಪ್ ಪಲಿಮಾರು ಮತ್ತಿತರರು ದೂರಿದರು.
ಗ್ರಾಮಸ್ಥರು ಘಟಕದ ವಿರುದ್ಧ ತುರ್ತು ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಆಗಮಿಸುವಂತೆ ಒತ್ತಾಯಿಸಿದರು. ಸಭೆಗೆ ಆಗಮಿಸಿದ ತಹಸೀಲ್ದಾರ್ ಅನಂತಶಂಕರ ಬಿ. ಗ್ರಾಪಂ ನಿರ್ಣಯ ಕೈಗೊಂಡು ವರದಿ ನೀಡುವಂತೆ ಪಿಡಿಒಗೆ ಸೂಚಿಸಿದರು. ಅ ವರದಿಯನ್ನು ಜಿಲ್ಲಾಧಿಕಾರಿಗೆ ನೀಡುವುದಾಗಿ ಭರವಸೆ ನೀಡಿದರು.
ಪಲಿಮಾರಿನ ಸರ್ಕಾರಿ ಶಾಲೆಯೊಂದು ಘಟಕದ ಸಿಎಸ್‍ಆರ್ ಪಡೆದುಕೊಂಡಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು. ಮುಂದಿನ ದಿನಗಳಲ್ಲಿ ಶಾಲೆಗೆ ಯಾವುದೇ ರೀತಿಯ ಸಹಕಾರ ನೀಡದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಲೆಯಿಂದ ವರದಿ ಪಡೆದುಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿಯವರು ಎಸ್‍ಡಿಎಂಸಿ ಬೇಡಿಕೆಯಂತೆ ಕಂಪೆನಿ ಸಿಎಸ್‍ಆರ್ ಪಡೆದುಕೊಂಡಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪಡುಬಿದ್ರಿ ಚಿಕ್ಕಲ್‍ಗುಡ್ಡ ರಾಜ್ಯ ಹೆದ್ದಾರಿ ಸಂಪರ್ಕಿಸುವ ಅಡ್ವೆ ಹಾಗೂ ಅವರಾಲು ಮಟ್ಟು ರಸ್ತೆ ತೀರಾ ನಾದುರಸ್ತಿ ಯಲ್ಲಿದ್ದು, ಹಲವು ದಶಕಗಳಿಂದ ಮನವಿ ನೀಡಿದ್ದರೂ, ಅಭಿವೃದ್ಧಿ ಕಾಣದಿರುವ ಬಗ್ಗೆ ಅ ಭಾಗದ ಗ್ರಾಮಸ್ಥರು ಗ್ರಾಮಾಡಳಿತವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ದೊಡ್ಡ ಮೊತ್ತದ ಅನುದಾನ ಅಗತ್ಯವಿರುವ ಕಾರಣ ಶಾಸಕರ ಇಲ್ಲವೇ ಸಂಸದರ ಅನುದಾನ ಪಡೆಯಲು ಮನವಿ ಮಾಡಲಾಗಿದೆ. ಅನುದಾನ ಲಭ್ಯತೆ ನೋಡಿಕೊಂಡು ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದರು. ಗ್ರಾಮಸ್ಥರು ನೀಡಿದ ಅರ್ಜಿಯನ್ನು ಶಾಸಕರ ಗಮನಕ್ಕೂ ತರುವುದಾಗಿ ನೋಡೆಲ್ ಅಧಿಕಾರಿ ಯಲ್ಲಮ್ಮ ತಿಳಿಸಿದರು. ಜನರ ವಿರೋಧದ ನಡುವೆಯೂ ಅವರಾರು ಮಟ್ಟುವಿನಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಪರವಾನಿಗೆ ನೀಡಿರುವ, ಪಲಿಮಾರು ಆಟೋ ನಿಲ್ದಾಣ ಬಳಿ ಇಂಟರ್‍ಲಾಕ್ ಅಳವಡಿಕೆಯಲ್ಲಿ ಆಗಿರುವ ದುಂದುವೆಚ್ಚ ಬಗ್ಗೆ ಸಂದೀಪ್ ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸುವುದಾಗಿ ಪಿಡಿಒ ಸತೀಶ್ ಆರ್. ಜಿ. ಸಮಜಾಯಿಷಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳಾದ ಎಂ. ಹುಸೇನ್, ಫಿಲೋಮಿನಾ, ರೀನಾ, ಅಮೃತಾ, ಸುಧಾಕರ ಶೆಟ್ಟಿ, ಪುಷ್ಪಲತಾ, ಶಿವಪುತ್ರ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷ ರಾಯೇಶ್ವರ ಪೈ, ಶಿಕ್ಷಣ ಇಲಾಖೆ ರಮಣಿ ಉಪಸ್ಥಿತರಿದ್ದರು. ಗಿರೀಶ್ ವರದಿ ವಾಚಿಸಿದರು.







