ಎಲ್ಲ ಧರ್ಮಗಳು ಮನುಕುಲದ ಒಳಿತನ್ನು ಬಯಸುತ್ತದೆ : ಸಚಿವ ಎಂ.ಬಿ.ಪಾಟೀಲ್

ಬೆಳ್ತಂಗಡಿ: ಎಲ್ಲ ಧರ್ಮಗಳು ಮನುಕುಲದ ಒಳಿತನ್ನು ಬಯಸುತ್ತದೆ ಅದನ್ನು ತಿಳಿದುಕೊಂಡು ನಾವು ಬದುಕನ್ನು ನಡೆಸಿದಾಗ ಎಲ್ಲರಿಗೂ ಒಳಿತಾಗಲು ಸಾಧ್ಯ ಎಂದು ರಾಜ್ಯ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ.ಎಂ.ಬಿ.ಪಾಟೀಲ್ ಅವರು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ನಡೆಯುವ ಸರ್ವಧರ್ಮ ಸಮ್ಮೇಳನದ 93ನೆಯ ಅಧಿವೇಶನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸಮಾಜದಲ್ಲಿ ಶಾಂತಿಯುತ ಸಹಬಾಳ್ವೆಗೆ ಇಂತಹ ಸರ್ವ ಧರ್ಮಸಮ್ಮೇಳನಗಳು ಅವಕಾಶ ನೀಡುತ್ತದೆ. ಎಲ್ಲ ಧರ್ಮಗಳಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಮತ್ತೊಮ್ಮೆ ನೆನಪಿಸಲು ಇದು ಸಹಕಾರಿಯಾಗಿದೆ. ವಿಶ್ವಕ್ಕೆ ಭಾರತ ನೀಡುವ ಸಂದೇಶ ವಸುದೈವ ಕುಟುಂಬಕಂ ಎಂಬುದಾಗಿದೆ. ನಮ್ಮಲ್ಲಿ ಎಲ್ಲ ಪರಂಪರೆಗಳು ಇವೆ. ವೈವಿಧ್ಯತೆಯಲ್ಲಿ ಏಕತೆಯೇ ನಮ್ಮ ಶಕ್ತಿಯಾಗಿದೆ. ಮಾನವೀಯತೆ, ಪ್ರೀತಿ, ಸೌಹಾರ್ದತೆಯನ್ನು ಬೆಳೆಸಿಕೊಳ್ಳೋಣ ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಸಮಾಜ ಸೇವಾ ಕಾರ್ಯಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆಯನ್ನು ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರು ವಹಿಸಿ ಮಾತನಾಡಿ, ವೈವಿಧ್ಯತೆಯನ್ನು ಹೃದಯದಿಂದ ಒಪ್ಪಿಕೊಳ್ಳುವಂತಹ ಸಮನ್ವಯ ದೃಷ್ಟಿ ಇದ್ದಾಗ ಮಾತ್ರ ಎಲ್ಲ ಮಾನವರೂ ಶಾಂತಿ ಸೌಹಾರ್ದತೆ ಸಮಾನತೆಯಿಂದ ಬದುಕಲು ಸಾಧ್ಯವಾಗುತ್ತದೆ, ಭಾರತೀಯ ಸಂಸ್ಕೃತಿಯಲ್ಲಿ ವೈವಿಧ್ಯತೆಯೆನ್ನುವುದು ಒಂದು ಸಹಜವಾದ ಪ್ರಕ್ರಿಯೆಯಾಗಿದೆ. ವಿಚಾರಕ್ಕೆ ಮುಕ್ತವಾದ ಅವಕಾಶವಿದ್ದಾಗ ವೈವಿಧ್ಯಯಿರಲು ಸಾಧ್ಯ, ಧರ್ಮ ಎಂದಿಗೂ ಅಶಾಂತಿಗೆ ಕಾರಣವಾಗುವುದಿಲ್ಲ, ನಾವು ನಮ್ಮ ಸ್ವಾರ್ಥಕ್ಕಾಗಿ ಅದನ್ನು ತಪ್ಪಾಗಿ ಉಪಯೋಗಿಸಿದಾಗ ಅಶಾಂತಿಗೆ ಕಾರಣವಾಗುತ್ತದೆ. ನಮ್ಮ ಧರ್ಮ ಸಂಪ್ರದಾಯಗಳನ್ನು ತಿಳಿದು ಪಾಲಿಸುವುದರೊಂದಿಗೆ ಇತರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಿ ಎಂದರು.
ಮನುಷ್ಯನ ಅಂತರಂಗದಲ್ಲಿರುವ ಮಾನವತ್ವವೇ ಜಗತ್ತನ್ನು ಉಳಿಸಿ ಬೆಳೆಸುತ್ತದೆ, ಮಾನವನಿಗೆ ಶೋಷಣೆ ಮಾಡದಿರುವುದೇ ಮಾನವತ್ವವಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮ್ಮೇಳನದಲ್ಲಿ ಉಪನ್ಯಾಸಕರಾಗಿ ವಿದ್ವಾಂಸರಾದ ಎಸ್.ಸೂರ್ಯಪ್ರಕಾಶ್ ಪಂಡಿತ್, ತನ್ವೀರ್ ಅಹಮ್ಮದ್ ಉಲ್ಲಾ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ ಸುರೇಂದ್ರ ಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ ಹರ್ಷೇಂದ್ರ ಕುಮಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮ್ಮೇಳನಕ್ಕೆ ಅತಿಥಿ ಗಣ್ಯರನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು.







