ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಆರೋಪ: ಗ್ರಾ.ಪಂ. ಅಧ್ಯಕ್ಷೆ ವಿರುದ್ಧ ಚುನಾವಣಾ ಆಯುಕ್ತರಿಗೆ ದೂರು; ಸದಸ್ಯತ್ವ ರದ್ದುಗೊಳಿಸಲು ಆಗ್ರಹ
ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈಯವರು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಸವ ವಸತಿ ಯೋಜನೆಯಲ್ಲಿ ವಂಚನೆ ಎಸಗಿದ್ದಲ್ಲದೆ, ಚುನಾವಣೆಯ ನಾಮಪತ್ರ ಸಲ್ಲಿಸುವ ಸಂದರ್ಭ ಸಲ್ಲಿಸಿದ ಅಫಿದಾವಿತ್‍ನಲ್ಲಿ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಅದಲ್ಲದೆ, ಇನ್ನು ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆದ್ದರಿಂದ ಇವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರ ಎ. ಜತೀಂದ್ರ ಶೆಟ್ಟಿ ಅಲಿಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.
2013-14ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿ ಸರಕಾರದ ಅನುದಾನವನ್ನು ಪಡೆದುಕೊಂಡಿರುವ ಸುಜಾತ ರೈಯವರು ಅವರು ಅಡಮಾನ ತೋರಿಸಿದ ಜಾಗದಲ್ಲಿ ಮನೆಯನ್ನು ನಿರ್ಮಿಸದೆ ಬೇರೆ ಜಾಗದಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ. ಇಲ್ಲಿ ಅವರು ಸರಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವುದು ಸಾಬೀತಾಗಿದ್ದು, ಇವರಿಗೆ 6.04.2023ರಂದು 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಅವರು ನೊಟೀಸ್ ಜಾರಿಗೊಳಿಸಿದ್ದು, ಬಸವ ವಸತಿ ಯೋಜನೆಯಡಿ ಸರಕಾರದ ಅನುದಾನವನ್ನು ಪಡೆದುಕೊಂಡು ಸರ್ವೇ 89/17(ಪಿ2)ನಲ್ಲಿ ವಾಸದ ವಸತಿ ಮನೆಯನ್ನು ನಿರ್ಮಿಸದೇ ಸುಳ್ಳು ಮಾಹಿತಿಯನ್ನು ನೀಡಿ ಇತರ ಸರ್ವೆ ನಂಬ್ರದ ಜಾಗದಲ್ಲಿ ವಸತಿಯನ್ನು ನಿರ್ಮಿಸಿರುವ ಕಾರಣ 2,20,428.91 ರೂ.ವನ್ನು ಬೆಂಗಳೂರಿನ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಲಿಮಿಟೆಡ್‍ನ ನಿರ್ದೇಶಕರ ಹೆಸರಿನಲ್ಲಿ ಗ್ರಾ.ಪಂ.ಗೆ ನೀಡಲು ತಿಳಿಸಿದ್ದಲ್ಲದೇ, ತಪ್ಪಿದ್ದಲ್ಲಿ ಮುಂದಿನ ಆಗು ಹೋಗುಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ ಎಂದು ತಿಳಿಸಿದ್ದಾರೆ. ಸುಜಾತ ರೈಯವರು 2013-14ನೇ ಅವಧಿಯಲ್ಲಿ ಗ್ರಾ.ಪಂ. ಸದಸ್ಯರಾಗಿದ್ದರು. ಅಂದರೆ ಇಲ್ಲಿ ಅವರು ಪಂಚಾಯತ್ ಸದಸ್ಯರಾಗಿದ್ದುಕೊಂಡೇ ಸರಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಶ್ರೀಮತಿ ಸುಜಾತ ಆರ್. ರೈಯವರು ವಸತಿ ಯೋಜನೆಯಡಿ ಮನೆ ಪಡೆದುಕೊಂಡರೂ, ಅವರ ಹೆಸರಿನಲ್ಲಿ ಮನೆ ಇಲ್ಲ. ಅದು ಅವರ ಪತಿಯ ಹೆಸರಿನಲ್ಲಿದೆ. ಇದಲ್ಲದೆ, ಗ್ರಾ.ಪಂ. ಚುನಾವಣೆಯ ಸ್ಪರ್ಧೆ ಸಂದರ್ಭ ಇವರು ಸಲ್ಲಿಸಿರುವ ಅಫಿದಾವಿತ್‍ನಲ್ಲಿ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಇಲ್ಲಿ ಬ್ಯಾಂಕ್‍ನಲ್ಲಿ ಪಡೆದ ಸಾಲಗಳು ಇಲ್ಲ ಎಂದು ತಿಳಿಸಿದ್ದು, ಆದರೆ ಅವರಿಗೆ ಉಪ್ಪಿನಂಗಡಿ ಸಹಕಾರಿ ಸಂಘದಲ್ಲಿ ಹಲವು ವಿವಿಧ ಸಾಲಗಳು ಇವೆ. ಇದು ಆರ್‍ಟಿಸಿಯಲ್ಲಿ ನಮೂದಾಗಿದೆ. ಇನ್ನಿತರ ಸಂಸ್ಥೆಗಳಲ್ಲಿ ಕೂಡಾ ಸಾಲ ಇದೆ. 2012ರಲ್ಲಿ ಲೋಕಾಯುಕ್ತ ನ್ಯಾಯಾಲಯ, 3ನೇ ಅಡಿಷನಲ್ ಸೆಷನ್ಸ್ ಕೋರ್ಟ್ ಮಂಗಳೂರು ಇಲ್ಲಿ ಕೇಸ್ ನಂಬ್ರ ಸಿ.ಆರ್.9/2012 ಅರೈಸಿಂಗ್ ಔಟ್ ಆಫ್ ಪಿಸಿಆರ್ ನಂಬ್ರ 5/2012ರಲ್ಲಿ ಆರೋಪಿಯಾಗಿದ್ದರು. ನಂತರ ಇಬ್ಬರು ಆರೋಪಿಗಳು ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ರಿಟ್ ಅರ್ಜಿ ಹಾಕಿ ಕೇಸನ್ನು ಅನೂರ್ಜಿತಗೊಳಿಸಲಾಯಿತು ಎಂದು ಜತೀಂದ್ರ ಶೆಟ್ಟಿಯವರು ದೂರಿನಲ್ಲಿ ತಿಳಿಸಿದ್ದಾರೆ.
ಸುಜಾತ ರೈ ಎ. ಅವರು ಉಪ್ಪಿನಂಗಡಿ ಸಹಕಾರಿ ಸಂಘದ ನಿರ್ದೇಶಕರಾಗಿದ್ದು, ಪ್ರಸ್ತುತ 34 ನೆಕ್ಕಿಲಾಡಿ ಗ್ರಾ.ಪಂ.ನ ಅಧ್ಯಕ್ಷರಾಗಿದ್ದಾರೆ. ಇಲ್ಲಿ ಇವರು ತನ್ನ ಅಧ್ಯಕ್ಷ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಗ್ರಾಮದಲ್ಲಿ ವಾಸ್ತವ್ಯವಿರುವ ಮಹಿಳೆಗೆ ಅವರ ಕೃಷಿ ಜಮೀನಿನ ಕುರಿತು ತೊಂದರೆ ನೀಡುತ್ತಿದ್ದು, ಇವರ ವಿರುದ್ಧ ಪ್ರಧಾನ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಮೂಲ ದಾವೆ 230/2023ರಂತೆ ಸಿವಿಲ್ ವ್ಯಾಜ್ಯ ದಾಖಲಾಗಿ ತನಿಖೆಗೆ ಬಾಕಿ ಇರುತ್ತದೆ. ಅಲ್ಲದೇ ಓರ್ವ ಪರಿಶಿಷ್ಟ ಜಾತಿಯ ವ್ಯಕ್ತಿಯೋರ್ವರಿಗೆ ಜಾತಿ ನಿಂದನೆ ಮಾಡಿದ ಹಾಗೂ ಅವರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಸುಜಾತ ರೈ ಎ. ಅವರ ಮೇಲೆ ದಲಿತ ಸಂರಕ್ಷಣಾ ಕಾಯ್ದೆಯನ್ವರ ಪ್ರಕರಣ ದಾಖಲಾಗಿದೆ. ಆದ್ದರಿಂದ ಓರ್ವ ಜನಪ್ರತಿನಿಧಿಯಾಗಿದ್ದುಕೊಂಡು ಇವರು ಭ್ರಷ್ಟಾಚಾರ, ಅಧಿಕಾರ ದುರುಪಯೋಗ ನಡೆಸಿರುವುದು ಇಲ್ಲಿ ಸ್ಪಷ್ಟಗೊಂಡಿದ್ದು, ಅವರನ್ನು ಕೂಡಲೇ ಗ್ರಾ.ಪಂ. ಸದಸ್ಯತ್ವದಿಂದ ಮತ್ತು ಉಪ್ಪಿನಂಗಡಿ ಸಹಕಾರಿ ಸಂಘದ ನಿರ್ದೇಶಕ ಸ್ಥಾನದಿಂದ ಅನೂರ್ಜಿತಗೊಳಿಸಿ ಈ ದೇಶದ ಸಂವಿಧಾನವನ್ನು ಎತ್ತಿ ಹಿಡಿಯಬೇಕೆಂದು ಸಾಮಾಜಿಕ ಹೋರಾಟಗಾರ ಜತೀಂದ್ರ ಶೆಟ್ಟಿಯವರು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದಾಖಲೆಗಳ ಸಮೇತ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.







